ಗುರುವಾರ , ಆಗಸ್ಟ್ 11, 2022
27 °C
ಸಹಜ ಸ್ಥಿತಿಯತ್ತ ಹಣ ಸಂಗ್ರಹ, ಕಡಿಮೆ ಬಸ್‌ಗಳನ್ನು ಬಳಸಲು ನಿಗಮದ ಚಿಂತನೆ

ಚಾಮರಾಜನಗರ: ಕೆಎಸ್‌ಆರ್‌ಟಿಸಿಗೆ ಹೆಚ್ಚಿದ ಆದಾಯ, ತಗ್ಗಿದ ನಷ್ಟ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಹಾವಳಿ ನಂತರ ಸಂಕಷ್ಟ ಅನುಭವಿಸುತ್ತಾ ಬಂದಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಚಾಮರಾಜನಗರ ವಿಭಾಗದ ಆರ್ಥಿಕ ಪರಿಸ್ಥಿತಿ ಬಹುತೇಕ ಸುಧಾರಿಸಿದೆ. 

ನವೆಂಬರ್‌ ತಿಂಗಳಲ್ಲಿ ನಿಗಮವು ಉತ್ತಮ ಆದಾಯ ಗಳಿಸಿದ್ದು, ಕಳೆದ ವರ್ಷದ ನವೆಂಬರ್‌ ತಿಂಗಳಿಗೆ ಹೋಲಿಸಿದರೆ, ಈ ಬಾರಿ ನಷ್ಟ ₹2 ಕೋಟಿಯಷ್ಟು ಕಡಿಮೆಯಾಗಿದೆ.

2019ರ ನವೆಂಬರ್‌ನಲ್ಲಿ ₹15 ಕೋಟಿ ಆದಾಯ ಬಂದಿತ್ತು. ಖರ್ಚು ₹18 ಕೋಟಿ ಆಗಿತ್ತು. ಈ ವರ್ಷ ₹13 ಕೋಟಿ ಆದಾಯಗಳಿಸಿದ್ದು, ₹14 ಕೋಟಿ ಖರ್ಚಾಗಿದೆ. 

‘ಈ ಬಾರಿ ಆದಾಯದಲ್ಲಿ ಕೊಂಚ ಇಳಿಕೆಯಾದರೂ, ಖರ್ಚು ಕೂಡ ಕಡಿಮೆಯಾಗಿದೆ. ಹಾಗಾಗಿ, ನಿಗಮಕ್ಕೆ ಲಾಭವೇ ಆಗಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ವಿಭಾಗದಲ್ಲಿ 560 ಬಸ್‌ಗಳಿವೆ. ಸದ್ಯ 390 ಬಸ್‌ಗಳು ಸಂಚರಿಸುತ್ತಿವೆ. ಸ್ಥಳೀಯವಾಗಿ ಪ್ರಯಾಣಿಕರ ಓಡಾಟ ಸಹಜ ಸ್ಥಿತಿಗೆ ಮರಳಿದ್ದು, ಜಿಲ್ಲೆಯಿಂದ ಬೆಂಗಳೂರು ಸೇರಿದಂತೆ ದೂರದ ಊರುಗಳಿಗೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ, ದೂರದ ಮಾರ್ಗಗಳಿಗೆ ಮೊದಲಿನ ಪ್ರಮಾಣದಲ್ಲಿ ಬಸ್‌ಗಳು ಸಂಚರಿಸುತ್ತಿಲ್ಲ. ವಿಭಾಗದಲ್ಲಿ ಗ್ರಾಮೀಣ ಭಾಗಗಳಲ್ಲಿ 190 ಬಸ್‌ಗಳು ಸಂಚರಿಸುತ್ತಿದ್ದವು. ಸದ್ಯ 140ರಷ್ಟು ಬಸ್‌ಗಳು ಓಡಾಡುತ್ತಿವೆ. 

‘ಈ ಹಿಂದೆ, ನಮ್ಮಲ್ಲಿಂದ ಬೆಂಗಳೂರು ಹಾಗೂ ಇತರ ಕಡೆಗಳಿಗೆ 10 ನಿಮಿಷಕ್ಕೆ ಒಂದರಂತೆ ಬಸ್‌ಗಳು ಸಂಚರಿಸುತ್ತಿದ್ದವು. ಈಗ 15 ಅಥವಾ 20 ನಿಮಿಷಕ್ಕೆ ಒಂದರಂತೆ ಬಸ್‌ಗಳನ್ನು ಹಾಕಲಾಗುತ್ತಿದೆ. ಜನರಿಗೆ ತೊಂದರೆಯಾಗದಂತೆ ಸಮಯದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಎಲ್ಲ ಬಸ್‌ಗಳು ಸಂಚರಿಸದೇ ಇರುವುದರಿಂದ ಖರ್ಚು ಕಡಿಮೆಯಾಗಿದೆ’ ಎಂದು ಶ್ರೀನಿವಾಸ ಅವರು ಹೇಳಿದರು.

‘ಇದೇ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂಬ ಸೂಚನೆ ನಿಗಮದ ಉನ್ನತ ಅಧಿಕಾರಿಗಳು ನೀಡಿದ್ದಾರೆ. ನಮ್ಮ ಯೋಚನೆಯೂ ಅದೇ ಆಗಿದೆ. 560 ಬಸ್‌ಗಳ ಪೈಕಿ ಗರಿಷ್ಠ 450 ಬಸ್‌ಗಳನ್ನು ಮಾತ್ರ ಬಳಸುವ ಯೋಚನೆ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು. 

‘ಗ್ರಾಮೀಣ ಭಾಗಗಳಲ್ಲಿ ಈಗ ಜನರ ಅಗತ್ಯಕ್ಕೆ ತಕ್ಕಷ್ಟು ಬಸ್‌ಗಳು ಸಂಚರಿಸುತ್ತಿವೆ. ಕಾಲೇಜುಗಳು ಆರಂಭವಾಗಿದ್ದರೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳಿಗೆ ಬರಲು ಅವಕಾಶ ಕಲ್ಪಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭಗೊಂಡ ನಂತರ ನಮಗೆ ಹೆಚ್ಚಿನ ಬಸ್‌ಗಳ ಅವಶ್ಯಕತೆ ಇರುತ್ತದೆ. ಆಗ ಎಲ್ಲ ಬಸ್‌ಗಳನ್ನು ಬಳಸಲಾಗುವುದು’ ಎಂದು ಶ್ರೀನಿವಾಸ ವಿವರಿಸಿದರು. 

ದಿನದ ಆದಾಯ ಸಹಜಸ್ಥಿತಿಯತ್ತ

ಕೋವಿಡ್‌ ಲಾಕ್‌ಡೌನ್‌ ಆರಂಭಕ್ಕೂ ಮೊದಲು, ಕೆಎಸ್‌ಆರ್‌ಟಿಸಿಗೆ ಪ್ರತಿ ದಿನ ₹55 ಲಕ್ಷದಿಂದ ₹60 ಲಕ್ಷದವರೆಗೆ ಆದಾಯ ಬರುತ್ತಿತ್ತು. ಅನ್‌ಲಾಕ್‌ ಪೂರ್ಣ ಪ್ರಮಾಣದಲ್ಲಿ ಜಾರಿಯಾದ ನಂತರ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು, ನವೆಂಬರ್‌ ತಿಂಗಳಲ್ಲಿ ಪ್ರತಿ ದಿನ ₹45ರಿಂದ ₹48 ಲಕ್ಷ ಆದಾಯ ಸಂಗ್ರಹವಾಗುತ್ತಿದೆ.

‘ಪ್ರಯಾಣಿಕರ ಓಡಾಟ ಈಗ ಹೆಚ್ಚಾಗಿದೆ. ಕೋವಿಡ್‌ಗೂ ಮೊದಲಿನ ಸ್ಥಿತಿಗೆ ಹೋಲಿಸಿದರೆ ಶೇ 80ರಷ್ಟು ಆದಾಯ ಬರುತ್ತಿದೆ. ನವೆಂಬರ್‌ನಲ್ಲಿ ಪ್ರತಿದಿನ ಸರಾಸರಿ ₹45 ಲಕ್ಷ ಟಿಕೆಟ್‌ ಮಾರಾಟದಿಂದ ಸಂಗ್ರಹವಾಗಿದೆ. 15 ದಿನಗಳಿಂದ ದಿನಂಪ್ರತಿ ₹48 ಲಕ್ಷ ಸಂಗ್ರಹವಾಗುತ್ತಿದೆ. ಸದ್ಯ ಪ್ರತಿ ದಿನ ಸರಾಸರಿ ನಿಗಮದ ಬಸ್‌ಗಳಲ್ಲಿ 1.30 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಜನರ ಓಡಾಟ ಇನ್ನೂ ಜಾಸ್ತಿಯಾಗಿ, ಎಲ್ಲ ಬಸ್‌ಗಳ ಸಂಚಾರ ಆರಂಭಗೊಂಡರೆ ಆದಾಯ ಹೆಚ್ಚಲಿದೆ’ ಎಂದು ಶ್ರೀನಿವಾಸ ಅವರು ಅಭಿಪ್ರಾಯಪಟ್ಟರು.

ಜಾತ್ರೆ ರದ್ಧತಿಯ ಹೊಡೆತ

ನಿಗಮದ ಚಾಮರಾಜನಗರದ ವಿಭಾಗಕ್ಕೆ ಬರುವ ಆದಾಯದಲ್ಲಿ ಮಲೆ ಮಹದೇಶ್ವರನ ಭಕ್ತರ ಪಾಲು ದೊಡ್ಡದು. ನವೆಂಬರ್‌ ತಿಂಗಳಲ್ಲಿ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ನಡೆದಿತ್ತು. ಸಾಮಾನ್ಯವಾಗಿ ಜಾತ್ರೆ ಸಮಯದಲ್ಲಿ ₹1.50 ಕೋಟಿಯವರೆಗೂ ಆದಾಯ ಬರುತ್ತದೆ. ಈ ವರ್ಷ ಕೋವಿಡ್‌ ಕಾರಣದಿಂದ ಜಾತ್ರೆಯ ಅವಧಿಯಲ್ಲಿ ಭಕ್ತರನ್ನು ನಿರ್ಬಂಧಿಸಲಾಗಿತ್ತು. ಹಾಗಾಗಿ, ಈ ಅವಧಿಯ ಆದಾಯ ಖಾತಾ ಆಗಿತ್ತು.

ಒಂದು ವೇಳೆ, ಜಾತ್ರಾ ಸಮಯದಲ್ಲಿ ಭಕ್ತರಿಗೆ ಅವಕಾಶ ನೀಡಿದ್ದರೆ, ತಿಂಗಳ ಒಟ್ಟಾರೆ ಆದಾಯ ಇನ್ನಷ್ಟು ಹೆಚ್ಚುತ್ತಿತ್ತು ಎಂದು ಹೇಳುತ್ತಾರೆ ಅಧಿಕಾರಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು