ಮಂಗಳವಾರ, ಸೆಪ್ಟೆಂಬರ್ 28, 2021
24 °C

ಬಂಡೀಪುರ: ರಸ್ತೆ ಮಧ್ಯೆ ನಿಂತ ‘ಐರಾವತ’, ಪರಿತಪಿಸಿದ ಸವಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ‌ಲ್ಲಿ ಹಾದು ಹೋಗುವ ಊಟಿ–ಮೈಸೂರು ಹೆದ್ದಾರಿಯ ಮೇಲುಕಾಮನಹಳ್ಳಿ ಚೆಕ್‌ಪೋಸ್ಟ್‌ ಬಳಿ ಶುಕ್ರವಾರ ಬೆಳಗಿನ ಜಾವ ಕೆಎಸ್‌ಆರ್‌ಟಿಸಿಯ ‘ಐರಾವತ’ (ವೋಲ್ವೊ ಬಸ್‌) ತಳಭಾಗಕ್ಕೆ ಕಬ್ಬಿಣದ ಪಟ್ಟಿ ತಗುಲಿ ಮುಂದೆ ಚಲಿಸಲು ಸಾಧ್ಯವಾಗದೇ ಇದ್ದುದರಿಂದ ಬೆಳಿಗ್ಗೆ ವಾಹನ ದಟ್ಟಣೆ ಉಂಟಾಯಿತು. 

ಬಸ್‌ ಬೆಂಗಳೂರಿನಿಂದ ಊಟಿಗೆ ತೆರಳುತ್ತಿತ್ತು. ಚೆಕ್‌ಪೋಸ್ಟ್‌ನ ಗೇಟನ್ನು ಹಾಕಿ ತೆಗೆಯಲು ಅಳವಡಿಸಿರುವ ಕಬ್ಬಿಣದ ಪಟ್ಟಿ ಎರಡು ದಿನಗಳ ಹಿಂದೆ, ಭಾರಿ ತೂಕದ ಲಾರಿ ಸಂಚಾರದಿಂದ ತುಂಡಾಗಿತ್ತು. ಶುಕ್ರವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಐರಾವತ ಬಸ್‌ ಸಾಗುವಾಗ, ಪಟ್ಟಿ ಬಸ್‌ ತಳಕ್ಕೆ ತಗುಲಿ ಮುಂದೆ ಚಲಿಸಲು ಆಗದೇ ರಸ್ತೆಯ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡಿತು. 

ಬಂಡೀಪುರ ಅರಣ್ಯದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಮೂರು ಸಾರಿಗೆ ಬಸ್‌ಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ಇದೆ. 

ಬಸ್‌ ರಸ್ತೆಯ ಮಧ್ಯದಲ್ಲೇ ಇದ್ದುದರಿಂದ ಬೆಳಿಗ್ಗೆ 6 ಗಂಟೆಯ ನಂತರ ಅಂತರರಾಜ್ಯ ನಡುವೆ ಸಂಚರಿಸುವ ವಾಹನಗಳಿಗೂ ಹೋಗಲು ಆಗಲಿಲ್ಲ. ಎರಡು ಕಿ.ಮೀ ದೂರದವರೆಗೆ ವಾಹನ ದಟ್ಟಣೆ ಉಂಟಾಯಿತು.

ವಿಷಯ ತಿಳಿದು ಸ್ಥಳಕ್ಕೆ ಬಂದ ಹೈವೇ ಪಾಟ್ರೋಲ್‌ ಸಿಬ್ಬಂದಿ, ಕ್ರೇನ್‌ ಮೂಲಕ ಬಸ್‌ ಅನ್ನು ಎತ್ತಿಸಿ, ಕಬ್ಬಿಣದ ಪಟ್ಟಿ ಬಿಡಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬಂಡೀಪುರ ಸಫಾರಿ ವಾಹನಗಳು ಸಹ ಇದೇ ರಸ್ತೆಯ ಮೂಲಕ ಸಾಗಬೇಕಿತ್ತು. ಸಂಚಾರ ಬಂದ್ ಆಗಿದ್ದ ಕಾರಣ ಸಫಾರಿ ಕೌಂಟರ್ ಹಿಂಭಾಗದ ರಸ್ತೆಯ ಮೂಲಕ ಪ್ರವಾಸಿಗರನ್ನು ಸಫಾರಿಗೆ ಕರೆದೊಯ್ಯಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು