ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳು, ಕಳೆಗೆ ನಲುಗಿದ ಕೆರೆಗಳು

ಯಳಂದೂರು ಒತ್ತುವರಿ ಸಮಸ್ಯೆ, ಸಮರ್ಪಕ ನಿರ್ವಹಣೆ ಕೊರತೆಯಿಂದ ನೀರು ತುಂಬದ ಸ್ಥಿತಿ
Last Updated 16 ಸೆಪ್ಟೆಂಬರ್ 2019, 19:46 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಕೆರೆಗಳಿಗೆ ಕಬಿನಿ ಕಾಲುವೆಯಿಂದ ನೀರು ಹರಿಸುವ ಕೆಲಸ ನಡೆಯುತ್ತಿದೆ. ಆದರೆ, ಒತ್ತುವರಿ ಸಮಸ್ಯೆ, ಸರಿಯಾಗಿ ನಿರ್ವಹಣೆ ಇಲ್ಲದಿರುವುದು, ಹೂಳು ಹಾಗೂ ಕಳೆಯ ಕಾರಣಕ್ಕೆ ಕೆರೆಯಲ್ಲಿ ನೀರು ತುಂಬದ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ಕೆರೆಗಳಿವೆ. ಈಗಾಗಲೇ ಒಣಗಿದ ಕೆರೆಗಳಲ್ಲಿ ಆಳೆತ್ತರದ ಕಳೆ ಸಸ್ಯ ಬೆಳೆದು ನಿಂತಿದೆ. ಕೆರೆ ಏರಿ ಮತ್ತು ನೀರು ಹರಿಸುವ ಕಿರು ಕಾಲುವೆಗಳು ದುರಸ್ತಿಯಾಗಿಲ್ಲ. ಇದರ ನಡುವೆಯೇ, ಜಲ ಕೃಷಿ, ಅಂತರ್ಜಲ ಹೆಚ್ಚಳ ಮತ್ತು ವ್ಯವಸಾಯಕ್ಕೆ ವರ್ಷ ಪೂರ್ತಿ ನೀರು ತುಂಬಿಸಿಕೊಡುವ ಯೋಜನೆಗಳು ಇನ್ನೂ ಕಾಗದದಲ್ಲೇ ಉಳಿದಿವೆ.

‘ಕೆರೆಗಳ ಸುತ್ತಮುತ್ತಲ ಪ್ರದೇಶ ಅಭಿವೃದ್ಧಿ ಪಡಿಸಲು ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ. ಉಪ ಕಾಲುವೆಗಳು ರಿಪೇರಿಗೆ ಬಂದರೂ, ನೀರಾವರಿ ಇಲಾಖೆ ಸಿದ್ಧತೆ ನಡೆಸಿಲ್ಲ. ಜಲ ಪಾತ್ರದ ಕಾಲುವೆಗಳು ಮುಚ್ಚಿದರೂ ನೀರು ಹರಿಸಲು ಮುಂದಾಗಿದೆ. ಇದರಿಂದಾಗಿ ನಾಲ್ಕುವಾರಗಳಿಂದ ನೀರು ಹರಿಸಲಾಗುತ್ತಿದ್ದರೂ ಕೆರೆಗೆ ಹೆಚ್ಚು ನೀರು ಬರುತ್ತಿಲ್ಲ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೀರಾವರಿ ಇಲಾಖೆಯೂ ಕೆರೆಯ ಸಮರ್ಪಕ ನಿರ್ವಹಣೆ ಮಾಡದೆ, ತರಾತುರಿಯಲ್ಲಿ ನೀರು ಬಿಟ್ಟಿದೆ. ಕೆಲವು ಕೆರೆಗಳ ಏರಿ ಮೇಲಿನ ಗಿಡಗಂಟಿ ಕೀಳುವ ಶಾಸ್ತ್ರ ಮಾತ್ರ ಮಾಡುತ್ತಿದ್ದಾರೆ. ಕೆರೆ ಏರಿ ಮಾತ್ರ ಅಚ್ಚುಕಟ್ಟು ಮಾಡುತ್ತಾರೆ. ಇಲ್ಲಿ ಸುರಿದ ಮಣ್ಣು ಮತ್ತೆ ಮುಂದಿನ ಮಳೆಗಾಲದಲ್ಲಿ ಕೆರೆಗಳ ತಳ ಸೇರುತ್ತದೆ. ಇದೊಂದು ರೀತಿಯಲ್ಲಿ ಹಾವನ್ನು ಹಿಡಿದು ಹದ್ದಿಗೆ ಕೊಡುವ ಆಟದಂತೆ’ ಎಂದು ಅವರು ವ್ಯಂಗ್ಯವಾಡಿದರು.

‘ಕಳೆಗಳಿಂದಾಗಿ ಮೀನು ಸಾಕಣೆಯೂ ಸಾಧ್ಯವಾಗುತ್ತಿಲ್ಲ.ಕೆರೆಯ ದಂಡೆಯಲ್ಲಿ ಮಾತ್ರ ಕಂಡು ಬರುತ್ತಿದ್ದ ಕಳೆ ಸಸ್ಯಗಳು ವರ್ಷದಿಂದ ವರ್ಷಕ್ಕೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಇವೆ. ಇದರಿಂದ ಬೋಟು ಬಳಸಿ ಮೀನು ಸಂಗ್ರಹ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಯರಿಯೂರಿನ ಜವರಶೆಟ್ಟಿ ಅವರು ಅಳಲು ತೋಡಿಕೊಂಡರು.

‘ಆರಂಭದಲ್ಲಿ ಕಾಣಿಸಿಕೊಳ್ಳುವ ಕಳೆಗಳನ್ನು ಜೆಸಿಬಿ ಬಳಸಿ ಬೇರು ಸಮೇತ ಕಿತ್ತು ಹಾಕಿದರೆ, ಅವುಗಳು ಹೆಚ್ಚು ಪ್ರದೇಶವನ್ನು ಆಕ್ರಮಿಸುವುದಿಲ್ಲ. ಆದರೆ, ಕೆರೆ ದಂಡೆ ಮೇಲೆ ಮಾತ್ರ ಗಿಡಗಂಟಿ ಸವರುವ ಕೆಲಸವಾಗುತ್ತಿದೆ’ ಎಂಬುದು ಸ್ಥಳೀಯ ಕೃಷಿಕರ ಆರೋಪ.

‘ಒತ್ತುವರಿ ತೆರವಿಗೆ ಕ್ರಮ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ವರ್ಷಾ ಒಡೆಯರ್‌ ಹೊಸಹಳ್ಳಿ ಅವರು, ‘ಈಗಾಗಲೇ ಕೆರೆ ಒತ್ತುವರಿ ಸಮಸ್ಯೆ ನೀಗಲು ತಾಲ್ಲೂಕು ಆಡಳಿತ ಮುಂದಾಗಿದೆ. ಹಲವಾರು ಕೆರೆಗಳ ಜಲ ಮೂಲಗಳನ್ನು ಸಂರಕ್ಷಿಸಲಾಗಿದೆ. ಮುಂದಿನ ದಿನಗಳಲ್ಲಿ ಮಾಹಿತಿ ಸಂಗ್ರಹಿಸಿ ಎಲ್ಲಾ ಕೆರೆಕಟ್ಟೆಗಳ ಒತ್ತುವರಿ ತೆರವುಗೊಳಿಸಲು ಯೋಜನೆ ರೂಪಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT