ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಸ್ಮಶಾನಕ್ಕೆ ಜಾಗ ಗುರುತು

ಪ್ರತಿ ತಾಲ್ಲೂಕಿಗೆ ಒಂದು ಶಾಂತಿಧಾಮ ಅಭಿವೃದ್ಧಿ; ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ
Last Updated 8 ಅಕ್ಟೋಬರ್ 2020, 13:09 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರತಿ ತಾಲ್ಲೂಕಿನಲ್ಲಿ ಒಂದು ಮಾದರಿ ಸ್ಮಶಾನವನ್ನು ಅಭಿವೃದ್ಧಿ ಪಡಿಸುವ ಜಿಲ್ಲಾಡಳಿತದ ಯೋಜನೆಗಾಗಿ ಐದೂ ತಾಲ್ಲೂಕುಗಳಲ್ಲಿ ಸರ್ಕಾರಿ ಜಾಗಗಳನ್ನು ಗುರುತಿಸಲಾಗಿದೆ.

ಚಾಮರಾಜನಗರ ತಾಲ್ಲೂಕಿನ ಅಮಚವಾಡಿಯಲ್ಲಿ ಎರಡು ಎಕರೆ, ಗುಂಡ್ಲುಪೇಟೆಯ ತೆರಕಣಾಂಬಿಯಲ್ಲಿ 4.33 ಎಕರೆ, ಕೊಳ್ಳೇಗಾಲದ ಹರಳೆ ಗ್ರಾಮದಲ್ಲಿ ಒಂದು ಎಕರೆ, ಯಳಂದೂರಿನ ಮದ್ದೂರಿನಲ್ಲಿ ಎರಡು, ಹಾಗೂ ಹನೂರಿನ ತೆಳ್ಳನೂರಿನಲ್ಲಿ 1.14 ಎಕರೆ ಜಾಗ ಗುರುತಿಸಲಾಗಿದೆ.

ಪ್ರತಿ ತಾಲ್ಲೂಕಿನಲ್ಲಿ ಒಂದು ಮಾದರಿ ಸ್ಮಶಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಈ ಹಿಂದೆ ಹೇಳಿದ್ದರು.

ಬುಧವಾರ ಅಧಿಕಾರಿಗಳ ಸಭೆ ನಡೆಸಿರುವ ಅವರು, ಪ್ರಸ್ತಾವಿತ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.

‘ಸ್ಮಶಾನಗಳನ್ನು ಮುಕ್ತಿಧಾಮ, ಶಾಂತಿಧಾಮದ ಮಾದರಿಯಲ್ಲಿ ರೂಪಿಸಬೇಕು. ಸ್ಮಶಾನಕ್ಕೆ ಅಗತ್ಯವಾಗಿರುವ ಕಾಂಪೌಂಡ್‌, ನೆರಳಿನ ವ್ಯವಸ್ಥೆ, ವಿದ್ಯುತ್‌, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸಂಬಂಧಿಸಿದ ಇಲಾಖೆಗಳು ಗ್ರಾಮ ಪಂಚಾಯಿತಿಗಳ ಸಹಯೋಗವನ್ನು ಪಡೆದುಕೊಂಡು ನರೇಗಾ ಅಡಿಯಲ್ಲಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಇದಕ್ಕಾಗಿ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ದಾನಿಗಳ ನೆರವನ್ನೂ ಪಡೆಯಬೇಕು’ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಆಲೆಮನೆ ಅಭಿವೃದ್ಧಿಗೆ ಸೂಚನೆ:ಜಿಲ್ಲೆಯಲ್ಲಿ ಆಲೆಮನೆಗಳನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಸಮಿತಿಯನ್ನು ರಚಿಸಲಾಗಿದೆ.

‘ಜಿಲ್ಲೆಯಲ್ಲಿ 302 ಆಲೆಮನೆಗಳಿದ್ದು, ಚಾಮರಾಜನಗರ ತಾಲ್ಲೂಕಿನಲ್ಲಿ 145, ಗುಂಡ್ಲುಪೇಟೆ 13, ಯಳಂದೂರಿನಲ್ಲಿ 53, ಕೊಳ್ಳೇಗಾಲದಲ್ಲಿ 25 ಮತ್ತು ಹನೂರು ತಾಲೂಕಿನಲ್ಲಿ ಐದು ಆಲೆಮನೆಗಳಿವೆ. ಇವುಗಳನ್ನು ಆಧುನೀಕರಣಗೊಳಿಸಲು ಮುಂದಾಗಬೇಕಿದೆ. ಆಲೆಮನೆ ಉದ್ಯಮಕ್ಕೆ ಮತ್ತೆ ಮರುಜೀವ ಪಡೆಯಬೇಕು. ಜಿಲ್ಲಾ ಮಟ್ಟದ ಸಮಿತಿ ಈ ನಿಟ್ಟಿನಲ್ಲಿ ಯೋಚಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅವರು ಹೇಳಿದ್ದಾರೆ.

ಕ್ಷೇತ್ರ ಪ್ರವಾಸ ಮಾಡಿ:ಕಾಡಂಚಿನ ಹಾಗೂ ಅರಣ್ಯವಾಸಿಗಳ ಮನೆ ಬಾಗಿಲಿಗೆ ವಿವಿಧ ಪಿಂಚಣಿ ಸೌಲಭ್ಯಗಳನ್ನು ಆರ್ಹರಿಗೆ ತಲುಪಿಸುವುದಕ್ಕಾಗಿ ಸೇವಾಮಿತ್ರ ಎಂಬ ವಿನೂತನ ಯೋಜನೆ ಜಾರಿಗೆ ತರಲಾಗಿದೆ. ಕ್ಷೇತ್ರ ಪ್ರವಾಸ ಮಾಡುವ ಮೂಲಕ ಫಲಾನುಭವಿಗಳಿಗೆ ನೇರವಾಗಿ ವಿಧವಾ ವೇತನ, ವೃದ್ದಾಪ್ಯ ವೇತನ ನಿರ್ಗತಿಕರ ಮಾಸಾಶನ ಸೇರಿದಂತೆ ವಿವಿಧ ಪಿಂಚಣಿ ಸೌಲಭ್ಯ, ಸವಲತ್ತುಗಳನ್ನು ನೀಡಬೇಕು’ ಎಂದು ಅವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT