ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಸ್ವಯಂ ಪ್ರೇರಿತ ಕರ್ನಾಟಕ ಬಂದ್‌; ಬೆಂಬಲಕ್ಕೆ ಮನವಿ

ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳ ಸಭೆ, ರೂಪುರೇಷೆ ಚರ್ಚೆ
Last Updated 26 ಸೆಪ್ಟೆಂಬರ್ 2020, 16:27 IST
ಅಕ್ಷರ ಗಾತ್ರ

ಚಾಮರಾಜನಗರ: ಭೂ ಸುಧರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುತ್‌ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ಇದೇ 28ರಂದು ಕರೆ ನೀಡಿರುವ ಸ್ವಯಂ ಪ್ರೇರಿತ ಕರ್ನಾಟಕ ಬಂದ್‌ ಅನ್ನು ಜಿಲ್ಲೆಯಲ್ಲೂ ಯಶಸ್ವಿಗೊಳಿಸಲು ರೈತ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ತೀರ್ಮಾನಿಸಿವೆ.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಭೆ ನಡೆಸಿದ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸ್ವಯಂ ಪ್ರೇರಿತ ಬಂದ್ ಕುರಿತಾಗಿ ಹಾಗೂ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು. ರೈತ ಸಂಘ ಹಾಗೂ ಹಸಿರು ಸೇನೆಯ ಎರಡೂ ಬಣಗಳು, ಕಬ್ಬುಬೆಳೆಗಾರರ ಸಂಘ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಎಸ್‌ಡಿಪಿಐ, ಬಹುಜನ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಹಾಗೂ ಕಬ್ಬು ಬೆಳೆಗಾರರ ಸಂಘದ ಮೈಸೂರು–ಚಾಮರಾಜನಗರ ಜಿಲ್ಲೆಯ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌ ಅವರು, ‘ರೈತ ಪರ ಜನಪರ ಘೋಷಣೆಗಳನ್ನು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿಯ ಕೇಂದ್ರ ಸರ್ಕಾರ ಹಾಗೂ ಇಂತಹದ್ದೇ ಘೋಷಣೆಗಳನ್ನು ಮಾಡಿ ವಾಮ ಮಾರ್ಗದ ಮೂಲಕ ರಾಜ್ಯದಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ, ಕೋವಿಡ್‌ ಸಂಕಷ್ಟದ ಸಮಯವನ್ನು ದುರುಪಯೋಗ ಪಡಿಸಿಕೊಂಡು ರೈತ ಆಧರಿತ ಕೃಷಿ, ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರವನ್ನು ಕಾರ್ಪೊರೇಟ್‌ ಕಂಪನಿಗಳಿಗೆ ಒಪ್ಪಿಸಲು ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿವೆ’ ಎಂದು ಆರೋಪಿಸಿದರು.

‘ಇಂತಹ ಕಾಯ್ದೆಗಳಿಂದ ರೈತಾಪಿ ಕೃಷಿಯನ್ನು ನಾಶಮಾಡಿ, ಕಂಪೆನಿ ಕೃಷಿಯನ್ನು ಜಾರಿ ಮಾಡಲು ಹೊರಟಿದ್ದಾರೆ. ಈ ಕಾನೂನುಗಳಿಂದ ಶೇ 85ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಸಣ್ಣ, ಅತಿ ಸಣ್ಣ, ಮಧ್ಯಮ ರೈತರು ತಮ್ಮ ಜಮೀನುಗಳನ್ನು ಕಳೆದುಕೊಂಡು ಕೂಲಿಕಾರರಾಗಲಿದ್ದಾರೆ’ ಎಂದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ ಅವರು ಮಾತನಾಡಿ, ‘ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ದೊಡ್ಡ ಗಂಡಾಂತರ ತರುತ್ತಿದೆ. ಹಿಟ್ಲರ್‌ ಮನಃಸ್ಥಿತಿಯ ಸರ್ಕಾರ ಎಲ್ಲವನ್ನೂ ಖಾಸಗೀಕರಣ ಮಾಡಲು ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘ ಮತ್ತು ಹಸಿರು ಸೇನೆಯ ಮತ್ತೊಂದು ಬಣದ ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಸೂರು ಬಸವಣ್ಣ ಅವರು ಮಾತನಾಡಿ, ‘ರೈತ ವಿರೋಧಿ ಕಾನೂನುಗಳು ದೇಶದಲ್ಲಿ ಜಾರಿಯಾಗುತ್ತಿದ್ದು, ನಾವೀಗ ಎರಡನೇ ಸ್ವಾತಂತ್ರ್ಯ ಸಂಗ್ರಾಮದಕ್ಕೆ ಸಿದ್ಧವಾಗಬೇಕಾಗಿದೆ’ ಎಂದರು.

ರೈತ ಸಂಘದ ಗುರುಪ್ರಸಾದ್‌ ಅವರು ಮಾತನಾಡಿ, ‘ಎಲ್ಲ ಐದು ತಾಲ್ಲೂಕುಗಳಲ್ಲಿ ಸ್ವಯಂ ಪ್ರೇರಿತ ಬಂದ್‌ ಆಚರಿಸಲು ತೀರ್ಮಾನಿಸಲಾಗಿದೆ. ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಪ್ರತಿಭಟನೆ ನಡೆಸಲಿದ್ದೇವೆ’ ಎಂದರು.

ನಮ್ಮ ಹೋರಾಟಕ್ಕೆ ವರ್ತಕರ ಸಂಘ, ಲಾರಿ ಚಾಲಕರು, ಮಾಲೀಕರ ಸಂಘ, ಆಟೊ, ಟ್ಯಾಕ್ಸಿ ಚಾಲಕರ, ಮಾಲೀಕರ ಸಂಘಗಳು ಸೇರಿದಂತೆ ಎಲ್ಲರೂ ಬೆಂಬಲ ಸೂಚಿಸಬೇಕು ಎಂದು ವಿವಿಧ ಸಂಘಗಳ ಪ್ರತಿನಿಧಿಗಳು ಮನವಿ ಮಾಡಿದರು.

ಎಸ್‌ಡಿಪಿಐನ ಸೈಯದ್‌ ಆರೀಫ್‌, ಬಿವಿಎಸ್‌ನ ಪರ್ವತ್‌ರಾಜ್‌, ಮುಖಂಡ ಆಲೂರು ಮಲ್ಲು, ದಲಿತ ಮುಖಂಡ ರಾಜಣ್ಣ ಮತ್ತಿತರರು ಇದ್ದರು.

‘ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ’

‘ಬಿಜೆಪಿ ಸರ್ಕಾರ ಜಾರಿಗೆ ತರುತ್ತಿರುವ ಕಾಯ್ದೆಗಳನ್ನು ವಿರೋಧಿಸುತ್ತಿರುವ ರೈತರನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆ. ನಾವೆಲ್ಲ ಕಾಂಗ್ರೆಸ್‌ನ ಪರವಾಗಿ ಮಾತನಾಡುತ್ತಿದ್ದೇವೆ ಎಂಬಂತೆ ಬಿಜೆಪಿ ಮುಖಂಡರು, ಸಚಿವರು ಮಾತನಾಡುತ್ತಿದ್ದಾರೆ’ ಎಂದು ಗುರುಪ್ರಸಾದ್‌ ಹೇಳಿದರು.

‘ನಾವು ಯಾವ ಪಕ್ಷಕ್ಕೂ ಸೇರಿಲ್ಲ. ಕಾಂಗ್ರೆಸ್‌, ಜೆಡಿಎಸ್‌ನವರು ಅಧಿಕಾರದಲ್ಲಿದ್ದಾಗ ಅವರ ರೈತ ವಿರೋಧಿ ನಿರ್ಧಾರಗಳನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದೇವೆ. ರೈತರ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT