ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಕಾರ್ಯದರ್ಶಿ ವರ್ಗಾವಣೆಗೆ ಮುಖಂಡರ ಒತ್ತಾಯ

Last Updated 22 ಜೂನ್ 2021, 2:25 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವಸ್ವಾಮಿ ಅವರು ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದು, ಪ್ರಾಧಿಕಾರದ ನೌಕರರು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಬೆಲೆ ನೀಡದೆ ತಮಗೆ ಇಷ್ಟಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು’ ಎಂದು ಪ್ರಾಧಿಕಾರದ ನೌಕರರ ಸಂಘದ ಅಧ್ಯಕ್ಷ ಮಹದೇವ ಪ್ರಸಾದ್‌ ಹಾಗೂ ಕೆಲವು ಬಿಜೆಪಿ ಮುಖಂಡರು ಸೋಮವಾರ ಆಗ್ರಹಿಸಿದರು.

ನಗರದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಮಹದೇವ ಪ್ರಸಾದ್‌ ಅವರು, ‘ಸಂಘದ ಪದಾಧಿಕಾರಿಗಳನ್ನು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನು ಜಯವಿಭವಸ್ವಾಮಿ ಅವರು ಕಿಡಿಗೇಡಿಗಳು ಎಂದು ಬಹಿರಂಗವಾಗಿ ಹೇಳಿದ್ದಾರೆ. ಪ್ರಾಧಿಕಾರದ ನೌಕರರಿಗೆ, ಭಕ್ತರಿಗೆ, ಸಾರ್ವಜನಿಕರಿಗೆ, ಸ್ಥಳೀಯ ವ್ಯಾಪಾರಿಗಳಿಗೆ... ಹೀಗೆ ಯಾರಿಗೂ ಅನುಕೂಲ ಕಲ್ಪಿಸದೆ, ತಮಗೆ ಇಷ್ಟ ಬಂದಂತೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಈಗ 189 ನೌಕರರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ’ ಎಂದು ಆರೋಪಿಸಿದರು.

‘ನೌಕರರಿಗೆ ಕಿರುಕುಳ ನೀಡುತ್ತಿದ್ದಾರೆ. 10–15 ವರ್ಷಗಳಿಂದ ದೇವಸ್ಥಾನದಲ್ಲಿ ಕಾರ್ಯಾರ್ಥ ಸಂಭಾವನೆ, ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರು ₹10 ಸಾವಿರ ವೇತನಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾರ್ಮಿಕ ಕಾಯ್ದೆ ಅನ್ವಯ ಸಂಬಳ ನೀಡುತ್ತಿಲ್ಲ’ ಎಂದು ದೂರಿದರು.

ಗ್ರಾಮ ಪಂಚಾಯಿತಿ ಸದಸ್ಯ ಸುಂದರ್‌ ಅವರು ಮಾತನಾಡಿ, ‘ಪ್ರಾಧಿಕಾರದ ಅನುಮತಿ ಪಡೆದು ಕಟ್ಟಡ ನಿರ್ಮಿಸಲು ಅಲ್ಲಿನ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಇದ್ದರೂ ನಿವೃತ್ತ ಅಧಿಕಾರಿಯೊಬ್ಬರನ್ನು ನೇಮಿಸಿಕೊಂಡಿದ್ದಾರೆ. ಪ್ರಾಧಿಕಾರದಲ್ಲಿ ಆಡಳಿತ ಕಚೇರಿ ಇದ್ದರೂ, ತಮ್ಮ ಮನೆಯನ್ನೇ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ಮಾಡಲು ಹೋದರೆ, ಸರಿಯಾಗಿ ನಡೆಸಿಕೊಳ್ಳುವುದಿಲ್ಲ. ನಾಯಿಗಳಂತೆ ಕಾಣುತ್ತಾರೆ. ದೇವಾಲಯದ ಸೇವೆಗಳ ಶುಲ್ಕವನ್ನು ಹೆಚ್ಚು ಮಾಡಿ ಭಕ್ತರ ಮೇಲೆ ಹೆಚ್ಚು ಹೊರೆ ಹೊರಿಸಿದ್ದಾರೆ’ ಎಂದು ದೂರಿದರು.

ಗ್ರಾಮ ಪಂಚಾಯಿತಿ ಸದಸ್ಯ ಶಾಂತರಾಜು, ಬಿಜೆಪಿ ಮುಖಂಡರಾದ ಮಾದೇಶಯ್ಯ, ಸದಾಶಿವ ಇದ್ದರು.

ದುರುದ್ದೇಶದ ಆರೋಪ: ಜಯವಿಭವಸ್ವಾಮಿ

ಆರೋಪಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ನೌಕರರ ಸಂಘದ ಅಧ್ಯಕ್ಷರು ಎಂದು ಹೇಳಿಕೊಳ್ಳುತ್ತಿರುವ ಮಹದೇವ ಪ್ರಕಾಶ್‌ ಹಾಗೂ ಇತರರು ಮಾಡಿರುವ ಆರೋಪ ಶುದ್ಧ ಸುಳ್ಳು. ದೇವಾಲಯ ಹಾಗೂ ಬೆಟ್ಟದ ಅಭಿವೃದ್ಧಿ ಮಾಡುವ ಏಕೈಕ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ನಾನು ಗ್ರಾಮ ಪಂಚಾಯಿತಿ ಸದಸ್ಯರನ್ನು ಕಿಡಿಗೇಡಿಗಳು ಎಂದು ಹೇಳಿಲ್ಲ. ಅಧ್ಯಕ್ಷರು, ಉಪಾಧ್ಯಕ್ಷರನ್ನು ಕೇಳಿದರೆ ಸತ್ಯ ಗೊತ್ತಾಗುತ್ತದೆ. ಸದಾಶಿವ ಎಂಬುವವರು ಪ್ರಾಧಿಕಾರದ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಅವರಿಗೆ ನೋಟಿಸ್‌ ಜಾರಿ ಮಾಡಿದ್ದೇನೆ. ಮಾದೇಶಯ್ಯ ಅವರು ಪ್ರಾಧಿಕಾರದ ಸಂಕೀರ್ಣದಲ್ಲಿ ಮಳಿಗೆ ಇಟ್ಟುಕೊಂಡು ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟಿರಲಿಲ್ಲ. ಹೀಗಾಗಿ ಅಂಗಡಿಯನ್ನು ಮುಚ್ಚಿಸಿದ್ದೆ. ಆರೋಪ ಮಾಡಿರುವ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು ಹೇಳಿದ ಕೆಲಸ ಮಾಡಿಕೊಟ್ಟಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.

‘ದೇವಾಲಯಕ್ಕೆ ಆದಾಯ ಇಲ್ಲ ಎಂಬ ಕಾರಣಕ್ಕೆ 189 ಜನರನ್ನು ತಾತ್ಕಾಲಿಕವಾಗಿ ಕೆಲಸದಿಂದ ತೆಗೆಯಲಾಗಿದೆ. ಅವರಿಗೆ ತಿಂಗಳಿಗೆ ₹4,000 ಸಹಾಯಧನ ನೀಡಲು ಮುಖ್ಯಮಂತ್ರಿ ಅವರು ಒಪ್ಪಿದ್ದಾರೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಸೇವಾ ಶುಲ್ಕವನ್ನು ಹೆಚ್ಚಳ ಮಾಡಲು ತೀರ್ಮಾನಿಸಲಾಗಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆಪ್ರಾಧಿಕಾರ ₹8 ಕೋಟಿಯಷ್ಟು ಖರ್ಚು ಮಾಡುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT