ಗುರುವಾರ , ಜುಲೈ 29, 2021
25 °C
50 ಜನರ ಮಿತಿ, ಬಾಡಿಗೆ ಅರ್ಧ ಕಡಿತ, ಆದರೂ ನಡೆಯುತ್ತಿಲ್ಲ ಮದುವೆಗಳು

ಚಾಮರಾಜನಗರ | ಲಾಕ್‌ಡೌನ್‌: ಛತ್ರಗಳ ಮಾಲೀಕರಿಗೆ ನಷ್ಟ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌–19 ತಡೆಗಾಗಿ ದೇಶದಾದ್ಯಂತ ಹೇರಲಾಗಿದ್ದ ಲಾಕ್‌ಡೌನ್‌ನಿಂದಾಗಿ ಮದುವೆಯಂತಹ ಶುಭಸಮಾರಂಭಗಳು ನಡೆಯದೇ ಇದ್ದುದರಿಂದ ಛತ್ರಗಳ ಮಾಲೀಕರೂ ತೀವ್ರ ನಷ್ಟ ಅನುಭವಿಸಿದ್ದಾರೆ.

ಇವರ ಜೊತೆಗೆ ಛತ್ರಗಳಲ್ಲಿ ನಡೆಯುವ ಶುಭಸಮಾರಂಭಗಳನ್ನು ನೆಚ್ಚಿಕೊಂಡಿರುವ ವಿವಿಧ ಉದ್ದಿಮೆಗಳು, ಕಾರ್ಮಿಕರಿಗೂ ನಷ್ಟವಾಗಿದೆ.  

ಲಾಕ್‌ಡೌನ್‌ ನಿಯಮ ಸಡಿಲಿಕೆಯಾಗಿ 50 ಜನರ ಮಿತಿಗೆ ಒಳಪಟ್ಟು ಮದುವೆ ನಡೆಸಲು ಸರ್ಕಾರ ಅನುಮತಿ ನೀಡಿದ್ದರೂ, ಕಲ್ಯಾಣ ಮಂಟಪಗಳ ಮಾಲೀಕರಿಗೆ ಪ್ರಯೋಜನವಾಗಿಲ್ಲ. ಇನ್ನೀಗ ಆಷಾಢ ಮಾಸವೂ ಆರಂಭವಾಗಲಿರುವುದರಿಂದ ಮತ್ತೆ ಮದುವೆ ಹಾಗೂ ಇನ್ನಿತರ ಶುಭಸಮಾರಂಭಗಳು  ನಡೆಯುವುದಿಲ್ಲ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ ಉಂಟು ಮಾಡಿದೆ. 

ಚಾಮರಾಜನಗರದಲ್ಲಿ 5 ದೊಡ್ಡ ಕಲ್ಯಾಣ ಮಂಟಪ‍ಗಳು ಹಾಗೂ ಸಣ್ಣದಾದ 15 ಛತ್ರಗಳು ಇವೆ. ಲಾಕ್‌ಡೌನ್‌ ಜಾರಿಯಾದ ನಂತರ ಜೂನ್‌ 8ರವರೆಗೂ ಇಲ್ಲಿ ಕಾರ್ಯಕ್ರಮಗಳು ನಡೆದಿಲ್ಲ. ಅನ್‌ಲಾಕ್‌ನ ಮೊದಲ ಹಂತ ಜೂನ್‌ 8ರಂದು ಆರಂಭವಾದ ಮೇಲೆ ಕೆಲವು ಛತ್ರಗಳಲ್ಲಿ ಒಂದೆರಡು ಮದುವೆಗಳು ನಡೆದಿವೆ. 50 ಜನರ ಮಿತಿಯೊಳಗೆ ಮದುವೆ ನಡೆಯುವುದರಿಂದ ಮಾಲೀಕರು ಪೂರ್ಣ ಬಾಡಿಗೆ ಪಡೆದಿಲ್ಲ, ಗ್ರಾಹಕರೂ ಕೊಟ್ಟಿಲ್ಲ.

ಸಾಮಾನ್ಯವಾಗಿ ಬೇಸಿಗೆ ರಜಾ ಸಮಯದಲ್ಲಿ ಹೆಚ್ಚು ಮದುವೆಗಳು ನಡೆಯುತ್ತವೆ. ಈ ಅವಧಿಯನ್ನು ‘ಮದುವೆ ಸೀಸನ್‌’ ಎಂದೇ ಗುರುತಿಸಲಾಗುತ್ತದೆ. ಲಾಕ್‌ಡೌನ್‌ ಇದೇ ಅವಧಿಯಲ್ಲಿ ಜಾರಿಯಾಗಿರುವುದರಿಂದ ಹೆಚ್ಚು ನಷ್ಟವಾಗಿದೆ ಎಂಬುದು ಕಲ್ಯಾಣ ಮಂಟಪಗಳ ಮಾಲೀಕರ ಹೇಳಿಕೆ.

‘ಈ ವರ್ಷದ ‘ಮದುವೆ ಸೀಸನ್‌’ ಮುಗಿಯಿತು. ಮಾರ್ಚ್‌ 19ರ ನಂತರ ಜೂನ್‌ 14ರವರೆಗೆ ನಮ್ಮ ಕಲ್ಯಾಣ ಮಂಟಪದಲ್ಲಿ ಮದುವೆಯೇ ನಡೆದಿಲ್ಲ. 2 ದಿನಗಳ ಹಿಂದೆ (ಜೂನ್‌ 14, 15) ಒಂದು ಮದುವೆ ನಡೆದಿದೆ. ಈ ವರ್ಷ ಭಾರಿ ಪ್ರಮಾಣದಲ್ಲಿ ನಷ್ಟವಾಗಿದೆ’ ಎಂದು ಗುಂಡ್ಲುಪೇಟೆ ರಸ್ತೆಯಲ್ಲಿರುವ ಸೂರ್ಯೋದಯ ಕಲ್ಯಾಣ ಮಂಟಪ‍ದ ಮಾಲೀಕ ಶಿವಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಮಗೆ ಮಾತ್ರ ಅಲ್ಲ, ಕಲ್ಯಾಣ ಮಂಟಪಗಳನ್ನು ನಂಬಿಕೊಂಡು 50 ಹೆಚ್ಚು ವ್ಯವಹಾರಗಳು ನಡೆಯುತ್ತವೆ. ಅದನ್ನು ನಂಬಿರುವವರಿಗೆ ತೊಂದರೆಯಾಗಿದೆ. ಕೆಲಸದವರು, ಅಡುಗೆಯವರು, ಛಾಯಾಗ್ರಾಹಕರು, ಧ್ವನಿವರ್ಧಕದವರು, ಅಲಂಕಾರ ಮಾಡುವವರು, ಹೂ ಮಾರಾಟಗಾರರು, ಅರ್ಚಕರು, ದಿನಸಿ ಅಂಗಡಿಗಳು.. ಹೀಗೆ ಹಲವರು ಈ ಪಟ್ಟಿಯಲ್ಲಿದ್ದಾರೆ’ ಎಂದು ಅವರು ಹೇಳಿದರು. 

ಬಾಡಿಗೆ ಕಡಿಮೆ ಮಾಡಿದರೂ ಬರುತ್ತಿಲ್ಲ: ಅನ್‌ಲಾಕ್‌ ಮೊದಲ ಹಂತ ಆರಂಭವಾದ ನಂತರ 50 ಜನಕ್ಕಿಂತ ಹೆಚ್ಚು ಜನರು ‌ಮದುವೆಯಲ್ಲಿ ಭಾಗವಹಿಸಬಾರದು ಎಂಬ ನಿಯಮ ಇರುವುದರಿಂದ, ಮಾಲೀಕರು ಕಲ್ಯಾಣ ಮಂಟಪಗಳ ಬಾಡಿಗೆಯನ್ನು ಅರ್ಧಕ್ಕರ್ಧ ಕಡಿಮೆ ಮಾಡಿದ್ದಾರೆ. ಹಾಗಾಗಿದ್ದರೂ ಛತ್ರಗಳಲ್ಲಿ ಮದುವೆಗಳು ನಡೆಯುತ್ತಿಲ್ಲ.

‘ದೊಡ್ಡ ಛತ್ರಗಳಲ್ಲಿ ₹50 ಸಾವಿರದಿಂದ ₹60 ಸಾವಿರ ಬಾಡಿಗೆ ಇದೆ, ಎಲ್ಲ ಖರ್ಚುಗಳು ಸೇರಿ ₹80 ಸಾವಿರ ಆಗುತ್ತದೆ. ಈಗ ಹೆಚ್ಚು ಜನರು ಬರದಿರುವುದರಿಂದ ಬಾಡಿಗೆಯನ್ನು ಕಡಿಮೆ ಮಾಡಿದ್ದೇವೆ. ಆದರೂ ಮದುವೆಗಳು ಆಗುತ್ತಿಲ್ಲ. ಅಷ್ಟರಲ್ಲಿ ಆಷಾಢ ಮಾಸ ಬರುತ್ತಿದೆ. ಶ್ರಾವಣ ಮಾಸದಲ್ಲೂ ಕಡಿಮೆ ಸಮಾರಂಭಗಳು ನಡೆಯುತ್ತವೆ. ಕಾರ್ತಿಕ ಮಾಸದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎಂದು ಶಿವಶಂಕರ್‌ ಹೇಳಿದರು. 

ಕೆಲವು ಮಾಲೀಕರು ಸಾಲ ಮಾಡಿ ಕೋಟ್ಯಂತರ ರೂಪಾಯಿ ಬಂಡವಾಳವನ್ನು ಕಲ್ಯಾಣ ಮಂಟಪಕ್ಕೆ ಹೂಡಿದ್ದರು. ಈಗ ಕಾರ್ಯಕ್ರಮಗಳೇ ನಡೆಯದಿರುವುದರಿಂದ ಸಾಲದ ಕಂತನ್ನು ಪಾವತಿಸುವುದಕ್ಕೆ ಕಷ್ಟ ಪಡುತ್ತಿದ್ದಾರೆ. 

19ಕ್ಕೆ ಸಭೆ: ಈ ಮಧ್ಯೆ, ಛತ್ರಗಳ ಮಾಲೀಕರು ಇದೇ 19ರಂದು ನಂದಿ ಭವನದಲ್ಲಿ ಸಭೆ ಸೇರಲಿದ್ದಾರೆ. 

‘ಮಾಲೀಕರಲ್ಲೆರೂ ಸಭೆ ಸೇರಿ ಚರ್ಚಿಸುತ್ತೇವೆ. ಮಾಲೀಕರ ಸಂಘ ರಚನೆ, ಮುಂದೆ ಏನೇನು ಮಾಡಬಹುದು ಎಂಬುದರ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತೇವೆ’ ಎಂದು ಶಿವಕುಮಾರಸ್ವಾಮಿ ಸಭಾ ಭವನದ ಮಾಲೀಕ ಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಹಸಿರು ವಲಯದಲ್ಲಿ ಮಿತಿ ಸಡಿಲಿಸಿ’

‘ಸದ್ಯ 50 ಮಂದಿಗಷ್ಟೇ ಮದುವೆಗಳಲ್ಲಿ ಭಾಗವಹಿಸಲು ಮಿತಿ ಹೇರಲಾಗಿದೆ. ಹಸಿರು ವಲಯಗಳಲ್ಲಿ ಈ ಮಿತಿಯನ್ನು ಹೆಚ್ಚಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಶಿವಶಂಕರ್‌ ಅವರ ಪತ್ನಿ ಮೀರಾ ‘ಪ್ರಜಾವಾಣಿ’ಗೆ ತಿಳಿಸಿದರು. 

‘ದೊಡ್ಡ ಛತ್ರಗಳಲ್ಲಿ ಸಾಕಷ್ಟು ಸ್ಥಳಾವಕಾಶ ಇರುತ್ತದೆ. ಪ್ರವೇಶ ಹಾಗೂ ಹೊರ ಬರುವುದಕ್ಕೆ ಪ್ರತ್ಯೇಕ ದ್ವಾರಗಳಿರುತ್ತವೆ. ಹಾಗಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ನಮ್ಮ ಜಿಲ್ಲೆ ಹಸಿರು ವಲಯದಲ್ಲಿದ್ದು, ಮಿತಿಯನ್ನು ಸಡಿಲಿಸುವುದಕ್ಕೆ ಅವಕಾಶ ಇದೆ. ಜಿಲ್ಲಾಡಳಿತ ಈ ಬಗ್ಗೆ ಯೋಚನೆ ಮಾಡಬೇಕು’ ಎಂದು ಅವರು ಹೇಳಿದರು. 

ಸರಳ ಮದುವೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳು, ಸಾರ್ವಜನಿಕ ವಲಯಗಳಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಹತ್ತಾರು ಜನರನ್ನು ಆಮಂತ್ರಿಸಿ ಮದುವೆ ಮಾಡುವುದು, ಊಟ ಹಾಕುವುದು ಎಂಬುದು ನಮ್ಮ ಸಂಸ್ಕೃತಿ. ಇದರ ಜೊತೆಗೆ ಛತ್ರಗಳಲ್ಲಿ ನಡೆಯುವ ಮದುವೆಗಳನ್ನು ನಂಬಿಕೊಂಡಿರುವ ಹಲವು ಉದ್ಯಮಗಳಿವೆ. ಅವರ ಜೀವನಕ್ಕೆ ಒಂದು ದಾರಿಯಾಗುತ್ತದೆ ಎಂಬುದನ್ನು ನಾವು ಮರೆಯಬಾರದು. ಸರಳ ಮದುವೆ ಮಾಡುವವರು ಈಗಲೂ ಸಣ್ಣ ಛತ್ರ, ದೇವಾಲಯಗಳಲ್ಲೇ ಮಾಡುತ್ತಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು