ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಎಸ್‌ಪಿ ಭೇಟಿ: 15 ದೂರು ದಾಖಲು

Last Updated 21 ಏಪ್ರಿಲ್ 2022, 4:34 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು ವಿಭಾಗದ ಕರ್ನಾಟಕ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಸಿ.ಮಲ್ಲಿಕ್ ಅವರು ನಗರಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದು ಕೊರತೆ ಹಾಗೂ ದೂರುಗಳನ್ನು ಸ್ವೀಕರಿಸಿದರು.

ನಗರ, ವಿವಿಧ ತಾಲ್ಲೂಕುಗಳಿಂದ ಬಂದಿದ್ದ 15 ಮಂದಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ದೂರು ನೀಡಿದರು.

ನಗರಸಭೆಯ ಕಾರ್ಯವ್ಯಾಪ್ತಿಗೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ದಾಖಲಾದವು. ಪಟ್ಟಣದ 8ನೇ ವಾರ್ಡ್‌ನ ಹೊಸ ಗೃಹ ಮಂಡಳಿಯ ಬಡಾವಣೆಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ. ಸ್ಟೇಡಿಯಂ ರಸ್ತೆ ಬದಲು ನಂಜನಗೂಡು ರಸ್ತೆ ಎಂಬುದಾಗಿ ದಾಖಲಾತಿಗಳಲ್ಲಿ ನಮೂದಿಸಿ ಹೆಚ್ಚಾಗಿ ಮನೆ ತೆರಿಗೆಯನ್ನು ವಿಧಿಸುತ್ತಿದ್ದು ಇದರಿಂದ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಸ್ಥಳೀಯರು ದೂರು ನೀಡಿದರು.

ಈ ಸಂಬಂಧ ನಗರಸಭೆಯ ಆಯುಕ್ತರನ್ನು ದೂರು ಸ್ವೀಕಾರಕ್ಕೆ ಬರಲು ಸೂಚಿಸಲಾಯಿತು. ಸಾರ್ವಜನಿಕರ ಮನವಿ ಬಗ್ಗೆ ತಿಳಿಸಿ ಕೂಡಲೇ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮಲ್ಲಿಕ್‌ ಅವರು ಸೂಚಿಸಿದರು. ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿಯನ್ನೂ ನೀಡಿದರು.

‘ನಗರದ ನ್ಯಾಯಾಲಯದ ರಸ್ತೆಯಲ್ಲಿ ಕ್ರಿಯಾ ಯೋಜನೆಯಂತೆ ರಸ್ತೆ ನಿರ್ಮಾಣ ಮಾಡದೇ ಕಡಿಮೆ ವಿಸ್ತೀರ್ಣದ ರಸ್ತೆ ನಿರ್ಮಾಣ ಮಾಡಿ ಅಕ್ರಮ ಎಸಗಿದ್ದಾರೆ’ ಎಂಬ ದೂರನ್ನು ಸಾರ್ವಜನಿಕರೊಬ್ಬರು ನೀಡಿದರು.ಸೂಕ್ತ ದಾಖಲೆಗಳೊಂದಿಗೆ ದೂರು ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ದೂರುದಾರರಿಗೆ ಸೂಚಿಸಿದರು.

ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಇ-ಸ್ವತ್ತು ಮಾಡಿಕೊಡಲು ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.

ಯಳಂದೂರು ತಾಲ್ಲೂಕಿನ ವೈ.ಕೆ.ಮೋಳೆ ಗ್ರಾಮದ ಉಪ್ಪಾರ ಬೀದಿಯ 22,920 ಚದರ ಅಡಿಗಳಷ್ಟು ಜಾಗವನ್ನು ವಿತರಣಾ ನಾಲೆ 44ರ ನಿರ್ಮಾಣಕ್ಕೆ ವೈ.ಕೆ.ಮೋಳೆ ಗ್ರಾಮದ ಗ್ರಾಮಠಾಣಾ ಭೂಮಿಯನ್ನು ಉಪಯೋಗಿಸಿಕೊಳ್ಳಲಾಗಿದೆ. ಇದರಲ್ಲಿ ಕೆಲವು ಫಲಾನುಭವಿಗಳಿಗೆ ಪರಿಹಾರ ನೀಡದೆ ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಸ್ಥಳೀಯರು ದೂರು ನೀಡಿದರು.

ಈ ಬಗ್ಗೆ ಮಾಹಿತಿ ಹಾಗೂ ದಾಖಲೆಗಳನ್ನು ನೀಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಸೂಚನೆ ನೀಡಿದರು.

ಬುಧವಾರದ ದೂರು ಸ್ವೀಕಾರ ಕಾರ್ಯಕ್ರಮದಲ್ಲಿಭಾಗವಹಿಸಲು ಸಾಧ್ಯವಾಗದ ಸಾರ್ವಜನಿಕರು ಮೈಸೂರಿನಲ್ಲಿರುವ ಮೈಸೂರು ವಿಭಾಗದ ಕರ್ನಾಟಕ ಲೋಕಾಯುಕ್ತ ಎಸ್‌ಪಿ ಕಚೇರಿ ಅಥವಾ ನಗರದಲ್ಲಿರುವ ಲೋಕಾಯುಕ್ತ ಡಿವೈಎಸ್‌ಪಿ ಕಚೇರಿಗೆ ಭೇಟಿ ನೀಡಬಹುದು ಎಂದು ಲೋಕಾಯುಕ್ತ ಡಿವೈಎಸ್‌ಪಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಣಿ ಪರಿಶೀಲಿಸಿ, ವರದಿಗೆ ಸೂಚನೆ

‘ಚಾಮರಾಜನಗರ ತಾಲ್ಲೂಕಿನ ಕಾಡಳ್ಳಿ ಗ್ರಾಮ, ಮಸಗಾಪುರ, ಕಿರಗಸೂರು, ಮರಿಯಾಲ, ಮರಿಯಾಲದಹುಂಡಿ ಮತ್ತು ಕೆಲ್ಲಂಬಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಈ ಎಲ್ಲ ಗ್ರಾಮಗಳಿಗೆ ಪರಸ್ಪರ ಸಂಪರ್ಕಿಸಲು ಗಣಿ ಮಾಲೀಕರಿಗೆ ಅಧಿಕಾರಿಗಳು ಅನುಕೂಲ ಮಾಡಿಕೊಟ್ಟಿದ್ದಾರೆ. ಗಣಿಗಾರಿಕೆಯಲ್ಲಿ ಅಕ್ರಮವಾಗಿ ಹೆಚ್ಚು ಸ್ಪೋಟಕಗಳನ್ನು ಬಳಸುತ್ತಿದ್ದಾರೆ’ ಎಂಬ ದೂರನ್ನು ಸಾರ್ವಜನಿಕರು ಎಸ್‌ಪಿಯವರಿಗೆ ನೀಡಿದರು.

ಕೂಡಲೇ ಸ್ಥಳ ಪರಿಶೀಲನೆ ಮಾಡಿ ಅಕ್ರಮ ಗಣಿಗಾರಿಕೆಗಳ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ವರದಿಯನ್ನು ನೀಡುವಂತೆ ಎಸ್‌ಪಿ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT