ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಬಚ್ಚಲು ಗುಂಡಿ, ಗ್ರಾಮೀಣ ಜನರಿಗೆ ಅನುಕೂಲ

ನರೇಗಾ ಅಡಿಯಲ್ಲಿ ₹14 ಸಾವಿರ ಸಹಾಯಧನ, ಜನರಿಂದ ಹೆಚ್ಚಿದ ಬೇಡಿಕೆ
Last Updated 1 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ತಾಲ್ಲೂಕಿನಲ್ಲಿ ನಿರ್ಮಿಸಲಾಗುತ್ತಿರುವ ಬಚ್ಚಲು ಗುಂಡಿಗಳಿಂದಾಗಿ (ಸೋಕಿಂಗ್‌ ‍ಪಿಟ್‌) ಗ್ರಾಮೀಣ ಭಾಗದ ಜನರಿಗೆ ಹಲವು ಅನೂಕೂಲಗಳು ಆಗುತ್ತಿವೆ.

ಈ ಗುಂಡಿಗಳಿಂದಾಗಿ ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರಿನ ವಿಲೇವಾರಿ ಸಮರ್ಪಕವಾಗುತ್ತಿದ್ದು,ಕೊಳಚೆ ನೀರು ಬೇಕಾಬಿಟ್ಟಿಯಾಗಿ ಹರಿಯುವುದು ನಿಂತಿದೆ. ಸೊಳ್ಳೆ ಸೇರಿದಂತೆ ಇತರ ಕ್ರಿಮಿ ಕೀಟಗಳ ಉಪಟಳ ಕಡಿಮೆಯಾಗಿದೆ. ಹಂದಿಗಳ ಕಾಟವೂ ಇಲ್ಲವಾಗಿದೆ.ಮನೆಯ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಬಚ್ಚಲು ಗುಂಡಿ ಸಹಕಾರಿಯಾಗಿದೆ.

ಗ್ರಾಮೀಣ ಭಾಗದಲ್ಲಿ ಚರಂಡಿಗಳಿದ್ದರೂ ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದರಿಂದ ಚರಂಡಿ ಕಟ್ಟಿಕೊಳ್ಳುವುದು, ಕೊಳಚೆ ನೀರು ತುಂಬಿ ರಸ್ತೆಗೆ ಚೆಲ್ಲಿ, ಬಡಾವಣೆಗಳಲ್ಲಿರುವ ಮನೆಯ ಮುಂದೆ ಹರಿವುದು ಸಾಮಾನ್ಯ. ಇದೇ ವಿಷಯಕ್ಕೆ ಅಕ್ಕ ಪಕ್ಕದ ಮನೆಯವರಿಗೆ ಜಗಳವೂ ನಡೆಯುತ್ತಿರುತ್ತದೆ. ಬಚ್ಚಲು ಗುಂಡಿಗಳು ಈ ಸಮಸ್ಯೆಗೂ ಪರಿಹಾರ ಒದಗಿಸಿವೆ.

ಕಾಡಂಚಿನ ಗ್ರಾಮದ ಜನರಿಗೆ ಇದು ವರವಾಗಿ ಪರಿಣಮಿಸಿದೆ. ಗ್ರಾಮಗಳಲ್ಲಿ ಕಾಡು ಹಂದಿಗಳ ಕಾಟ ಹೆಚ್ಚು. ಆಹಾರ ಅರಸಿಕೊಂಡು ಬರುವ ಹಂದಿಗಳು ಚರಂಡಿಯ ಕೊಳಚೆ ನೀರಿನಲ್ಲಿ ಉರುಳಾಡುತ್ತವೆ. ಇದರಿಂದಾಗಿ ಗ್ರಾಮಸ್ಥರಿಗೂ ತೊಂದರೆಯಾಗುತ್ತದೆ. ಎಲ್ಲ ಮನೆಗಳಲ್ಲೂ ಬಚ್ಚಲು ಗುಂಡಿ ನಿರ್ಮಾಣವಾದರೆ, ಚರಂಡಿಗಳಲ್ಲಿ ಕೊಳಚೆ ನೀರು ಹರಿಯುವ ಪ್ರಮೇಯವೇ ಇರುವುದಿಲ್ಲ. ಆಗ ಹಂದಿಗಳ ಕಾಟವೂ ಇರುವುದಿಲ್ಲ ಎಂಬುದು ಕಾಡಂಚಿನ ಜನರ ಅಭಿಪ್ರಾಯ.

ಹೇಗಿರುತ್ತದೆ ಗುಂಡಿ?: ಇದುವರೆಗೆ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಅಡಿಯಲ್ಲಿ 3,000ಕ್ಕೂ ಹೆಚ್ಚು ಬಚ್ಚಲು ಗುಂಡಿಗಳನ್ನು ನಿರ್ಮಿಸಲಾಗಿದೆ.

ಮನೆಗಳ ಹಿಂದೆ ಇರುವ ಜಾಗದಲ್ಲಿ ಶೌಚಾಲಯದ ಗುಂಡಿ ಮಾದರಿಯಲ್ಲಿ ಎರಡರಿಂದ ಮೂರು ಮೀಟರ್‌ ಆಳಕ್ಕೆ ಗುಂಡಿ ತೆಗೆಯಲಾಗುತ್ತದೆ. ಸಿಮೆಂಟ್‌ನ ನಾಲ್ಕು ರಿಂಗ್‌ಗಳನ್ನು ಹಾಕಲಾಗುತ್ತದೆ. ಮೂರು ಅಡಿಯಷ್ಟು ಕಲ್ಲನ್ನು ತುಂಬಿ. ಅದರ ಮೇಲೆ ಜಲ್ಲಿ ಹಾಕಿ, ನೈಲಾನ್‌ ಮೆಚ್‌ ಹಾಕಿ ಗುಂಡಿಗೆ ಮುಚ್ಚಳ ಹಾಕಲಾಗುತ್ತದೆ. ಮನೆಯಲ್ಲಿ ಉತ್ಪತ್ತಿಯಾಗುವ ಎಲ್ಲ ತ್ಯಾಜ್ಯ ನೀರನ್ನು ಪೈಪ್‌ ಮೂಲಕ ಈ ಗುಂಡಿಗೆ ಸಂಪರ್ಕಿಸಲಾಗುತ್ತದೆ.

₹14 ಸಾವಿರ ಸಹಾಯಧನ
ಬಚ್ಚಲು ಗುಂಡಿ ನಿರ್ಮಾಣಕ್ಕೆ ನರೇಗಾ ಅಡಿಯಲ್ಲಿ ₹14 ಸಾವಿರ ಸಹಾಯಧನ ದೊರೆಯುತ್ತದೆ.

₹14 ಸಾವಿರ ಅನುದಾನದಲ್ಲಿ ಉತ್ತಮವಾದ ಬಚ್ಚಲು ಗುಂಡಿ ನಿರ್ಮಾಣ ಮಾಡಿಕೊಳ್ಳಬಹುದು. ಇದರಿಂದಾಗಿ ಮನೆಯ ಮುಂದೆ ಕೊಳಚೆ ನೀರು ನಿಲ್ಲುವುದು ತಪ‍್ಪಿದೆ. ಸೊಳ್ಳೆ ಕಾಟ, ಕಾಡು ಹಂದಿಗಳ ಸಮಸ್ಯೆಯೂ ದೂರವಾಗಿದೆ’ ಎಂದು ಹಂಗಳ ಗ್ರಾಮದ ಗೌರಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಯೋಜನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕುಲ್‌ದೀಪ್‌ ಅವರು, ‘ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ 3000ಕ್ಕೂ ಹೆಚ್ಚು ಬಚ್ಚಲು ಗುಂಡಿಗಳನ್ನು ನಿರ್ಮಿಸಲಾಗಿದೆ. ಜನರಿಗೆ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಮನೆಯ ಸುತ್ತಮುತ್ತ ನೈರ್ಮಲ್ಯ ಕಾಪಾಡಿಕೊಳ್ಳುವುದರ ಜೊತೆಗೆ ಅಂತರ್ಜಲ ಅಭಿವೃದ್ಧಿಗೂ ಇದು ಸಹಕಾರಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT