ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಖರ್ಚು, ತೃಪ್ತಿಕರ ಲಾಭ: ಯುವ ರೈತನ ಸೂತ್ರ

ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ದೊಡ್ಡತೂಪ್ಪೂರು ಗ್ರಾಮದ ಶಶಿಕುಮಾರ್‌
Last Updated 1 ಜನವರಿ 2020, 19:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ‘ಹೆಚ್ಚು ಖರ್ಚು ಮಾಡಿ ಹೆಚ್ಚು ಲಾಭ ಪಡೆಯುವುದಕ್ಕಿಂತ, ಕಡಿಮೆ ಖರ್ಚು ಮಾಡಿ ತೃಪ್ತಿಕರ ಆದಾಯ ಗಳಿಸಿದರೆ ಸಾಕು. ನಾವು ಮಾಡುವ ವೆಚ್ಚದಲ್ಲಿ ಆಗುವ ಉಳಿತಾಯವೇ ದೊಡ್ಡ ಲಾಭ...’

ತಾಲ್ಲೂಕಿನ ದೊಡ್ಡತೂಪ್ಪೂರು ಯುವ ರೈತ ಶಶಿಕುಮಾರ್‌ ಅವರ ಮಾತಿದು. ಅದನ್ನು ಅವರು ಕೃತಿಯಲ್ಲಿ ಅನುಸರಿಸಿದ್ದಾರೆ.

ರಾಸಾಯನಿಕಗಳಿಂದ ತಮ್ಮ ಕೃಷಿ ಜಮೀನನ್ನು ದೂರ ಇರಿಸಿರುವ ಅವರು ಸಾವಯವ ಪದ್ಧತಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇಳುವರಿ ಕಡಿಮೆಯಾದರೂ ಅವರ ಲಾಭಕ್ಕೇನೂ ಕೊರತೆಯಾಗಿಲ್ಲ.

ಶಶಿಕುಮಾರ್‌ ಅವರು ಪದವೀಧರ. ಕೃಷಿಯ ಮೇಲೆ ಅವರಿಗೆ ಹೆಚ್ಚು ಒಲವು. ವ್ಯಾಸಂಗದ ಬಳಿಕ ಪೂರ್ಣವಾಗಿ ವ್ಯವಸಾಯದಲ್ಲಿ ತೊಡಗಿಕೊಂಡರು. ಮೂರು ಎಕರೆ ಜಮೀನಿನಲ್ಲಿ ಬಾಳೆ ಬೆಳೆಯುತ್ತಾರೆ. ಇದರ ಮಧ್ಯೆ ಮೆಣಸಿನಕಾಯಿ, ತೊಗರಿ, ಟೊಮೆಟೊ, ಬೀನ್ಸ್‌ ಮುಂತಾದ ತೆರಕಾರಿಗಳನ್ನೂ ಬೆಳೆಯುತ್ತಾರೆ. ಒಂದು ಎಕರೆ ಜಮೀನಿನಲ್ಲಿ ಅರಿಸಿನವನ್ನೂ ಬೆಳೆಯುತ್ತಾರೆ.

ನೀರು ಕಡಿಮೆ ಇದ್ದರೂ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡು ಬೇಸಾಯ ಮಾಡುತ್ತಿದ್ದಾರೆ. ತೇಗ, ತೆಂಗಿನ ಗಿಡಗಳು ಇವೆ. ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡಿದ್ದಾರೆ.

ಜೀವಾಮೃತ: ದೇಸಿಹಸುವಿನ ಗಂಜಲ, ಸಗಣಿ, ಎಲೆ ಹಾಗೂ ಇನ್ನಿತರ ಹಸಿರು ತ್ಯಾಜ್ಯ, ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು ಬಳಸಿಕೊಂಡು ಜೀವಾಮೃತ, ಘನ ಜೀವಾಮೃತ ತಯಾರಿಸುತ್ತಾರೆ. ಇವನ್ನೇ ಬೆಳೆಗಳಿಗೆ ಕೊಡುತ್ತಾರೆ. ಎರಡು ವರ್ಷಗಳಿಂದ ಅವರು ಈ ವಿಧಾನವನ್ನು ಅನುಸರಿಸಿಕೊಂಡು ಕೃಷಿ ಮಾಡುತ್ತಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

‘ರಾಸಾಯನಿಕ ಪದಾರ್ಥಗಳನ್ನು ಬಳಸಿದರೆ ಶ್ರಮ ಕಡಿಮೆ, ಖರ್ಚು ಹೆಚ್ಚು. ಮಾರುಕಟ್ಟೆ ಇದ್ದಂತೆ ಲಾಭ ನಷ್ಟ ಆಗುತ್ತದೆ. ಆದರೆ, ಸಾವಯವ ಕೃಷಿಯಲ್ಲಿ ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಬರುತ್ತದೆ. ಮಾರುಕಟ್ಟೆ ಏರಿಳಿತವಾದರೂ ನಷ್ಟವಾಗುವುದಿಲ್ಲ. ಏಕೆಂದರೆ ಖರ್ಚು ಕಡಿಮೆಯಾಗಿರುತ್ತದೆ’ ಎಂದು ಶಶಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಸಾಯನಿಕ ಬಳಸಿ ಬೆಳೆದ ತರಕಾರಿಗಳಿಗೂ ಸಾವಯವದಲ್ಲಿ ಬೆಳೆದಿರುವ ತರಕಾರಿಗಳಿಗೂ ವ್ಯತ್ಯಾಸ ಇದೆ. ಸಾವಯವದಿಂದ ಬೆಳೆದಿರುವ ತರಕಾರಿಗಳು ಶೀಘ್ರವಾಗಿ ಕೆಡುವುದಿಲ್ಲ, ಶೈನಿಂಗ್ ಇರುತ್ತದೆ. ನೇರವಾಗಿ ಸೇವಿಸಬಹದು. ರುಚಿ ಹಾಗೂ ಆರೋಗ್ಯ ಉತ್ತಮವಾಗಿರುತ್ತದೆ. ರಾಸಾಯನಿಕ ಬಳಸಿದರೆ ಸರಿಯಾಗಿ ಸ್ವಚ್ಛಗೊಳಿಸಬೇಕು. ಕೆಡುವುದೂ ಬೇಗ’ ಎಂದು ವಿವರಿಸಿದರು.

‘ಕೆವಿಕೆ ಹರದನಹಳ್ಳಿಯಲ್ಲಿ ನಡೆದ ಸಾವಯವ ಕೃಷಿ ಮೇಳದಲ್ಲಿ ಭಾಗವಹಿಸಿ ಸಾವಯವ ಕೃಷಿ ಮೇಲೆ ಆಸಕ್ತಿ ಹೆಚ್ಚಾಯಿತು. ಜೊತೆಗೆ ಸಾವಯವ ಕೃಷಿ ಮಾಡುವ ರೈತರಿಂದ ಪ್ರೇರಣೆಗೊಂಡು ನನಗೂ ಮಾಡಬೇಕು ಎನಿಸಿತು’ ಎಂದು ಶಶಿಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT