ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾನು ಲೋಕಸಭಾ ಚುನಾವಣೆ ಟಿಕೆಟ್‌ ಆಕಾಂಕ್ಷಿಯಲ್ಲ: ಜಗದೀಶ ಶೆಟ್ಟರ್‌

Published 14 ಫೆಬ್ರುವರಿ 2024, 12:18 IST
Last Updated 14 ಫೆಬ್ರುವರಿ 2024, 12:18 IST
ಅಕ್ಷರ ಗಾತ್ರ

ಕೊಳ್ಳೇಗಾಲ (ಚಾಮರಾಜನಗರ): ‘ನಾನು ಯಾವುದೇ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಲ್ಲ. ಪಕ್ಷ ಸಂಘಟನೆ ಮಾಡುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಅದರಂತೆ ಸಂಘಟನೆ ಮಾಡುತ್ತಿದ್ದೇನೆ ಲೋಕಸಭೆಗೆ ಸ್ಪರ್ಧೆ ಮಾಡಿ ಎಂದರೆ ಸ್ಪರ್ಧೆ ಮಾಡುತ್ತೇನೆ’ ಎಂದು ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬುಧವಾರ ಹೇಳಿದರು. 

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ನನ್ನ ಮಾತೃ ಪಕ್ಷ. ಮತ್ತೆ ಗೂಡಿಗೆ ಬಂದಿದ್ದೇನೆ. ಅದರಲ್ಲಿ ತಪ್ಪೇನಿಲ್ಲ. ಬಿಜೆಪಿ ಹಿರಿಯ ಮುಖಂಡರು ಬಿಜೆಪಿ ಕಾರ್ಯಕರ್ತರು ನಾನು ಮತ್ತೆ ಬಿಜೆಪಿಗೆ ಬರುವುದನ್ನು ಬಯಸಿದ್ದರು. ಸ್ವ ಇಚ್ಛೆಯಿಂದ ನಾನು ಕಾಂಗ್ರೆಸ್‌ ಬಿಟ್ಟಿದ್ದೇನೆ. ಯಾರ ಒತ್ತಡಕ್ಕೂ ಮಣಿದು ತೊರೆದಿಲ್ಲ’ ಎಂದು ಹೇಳಿದರು. 

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರಾಗಬಹುದು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೆಟ್ಟರ್‌, ‘ಇಲ್ಲಿ ಅನೇಕ ಆಕಾಂಕ್ಷಿಗಳು ಇದ್ದಾರೆ. ಟಿಕೆಟ್ ‌ಯಾರಿಗೆ ನೀಡುತ್ತಾರೋ ಎಂಬುದು ಗೊತ್ತಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ. ವರಿಷ್ಠರು ಯಾರನ್ನು ಹೇಳುತ್ತಾರೋ ಅವರು ಸ್ಪರ್ಧಿಸಬೇಕು. ಇದು ಬಿಜೆಪಿಯ ಸಿದ್ಧಾಂತ’ ಎಂದರು. 

‘ದೇಶದ ಭದ್ರತೆ, ಉಳಿವು ಹಾಗೂ ಅಭಿವೃದ್ಧಿಗೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯು ಹೆಚ್ಚು ಸ್ಥಾನಗಳನ್ನು ಗಳಿಸಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವೇ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಹೇಳಿದರು. 

‘ತೆರಿಗೆ ಅನ್ಯಾಯ ಮಾಡಿಲ್ಲ’

ತೆರಿಗೆ ಕಡಿತ ಮಾಡಲಾಗಿದೆ ಎಂಬ ಕಾಂಗ್ರೆಸ್‌ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೇಂದ್ರ ಸರ್ಕಾರ ಯಾವ ರಾಜ್ಯಕ್ಕೂ ಅನ್ಯಾಯ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ. ಚುನಾವಣೆ ಹತ್ತಿರ ಬಂದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದರು. 

ದೆಹಲಿಯಲ್ಲಿ ರೈತರ ಹೋರಾಟದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇದು ರಾಜಕೀಯ ಷಡ್ಯಂತ್ರ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT