ಶನಿವಾರ, ಆಗಸ್ಟ್ 13, 2022
26 °C
ಠಾಣೆಯಲ್ಲಿ‌ ದೂರು, ಅರ್ಚಕರಿಗೆ‌ ನೋಟಿಸ್

ಮಹದೇಶ್ವರ ಬೆಟ್ಟ: ಉತ್ಸವಮೂರ್ತಿಯ ಕರಡಿಗೆ‌ ನಾಪತ್ತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಮಹದೇಶ್ವರ ಬೆಟ್ಟ: ಇಲ್ಲಿನ  ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಉತ್ಸವ ಮೂರ್ತಿ ಧರಿಸುವ ಚಿನ್ನದ ಕರಡಿಗೆ (ಲಿಂಗ‌ ಇಡುವ‌ ಡಬ್ಬಿ) ಕಾಣೆಯಾಗಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಆರು ದಿನಗಳ ಹಿಂದೆಯೇ, ಕರಡಿಗೆ ಕಾಣೆಯಾಗಿದ್ದು, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಬುಧವಾರ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ. ಚಿನ್ನದ ಕರಡಿಗೆಯು 32 ಗ್ರಾಂ ತೂಕ ಇದೆ.

ಕಳೆದ ಗುರುವಾರ ಸಾಲೂರು ಮಠದ ಸ್ವಾಮೀಜಿ ಅವರ ನೇತೃತ್ಬದಲ್ಲಿ ಮಹಾರುದ್ರಾಭಿಷೇಕ ಕಾರ್ಯಕ್ರಮವನ್ನು ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂಧರ್ಭದಲ್ಲಿ ಉತ್ಸವ ಮೂರ್ತಿಯನ್ನು ಅಲಂಕರಿಸಿ ಗರ್ಭಗುಡಿಯ ಒಳಭಾಗದಲ್ಲಿ ವಿಶೇಷ ಪೂಜೆಯನ್ನು ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳು ಹಾಗೂ ಇನ್ನಿತರರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಪೂಜೆ ಮುಗಿದ ಬಳಿಕ ಉತ್ಸವ ಮೂರ್ತಿಯನ್ನು ಮೂಲಸ್ಥಾನಕ್ಕೆ ತಂದಿರಿಸಿದ್ದಾರೆ.

ಆ ಬಳಿಕ ಕರಡಿಗೆ ಕಾಣೆಯಾಗಿರುವ ವಿಚಾರ ಗೊತ್ತಾಗಿದೆ. ಪ್ರಾಧಿಕಾರದ ಕಾರ್ಯದರ್ಶಿ ಅವರಿಗೆ ತಡವಾಗಿ ಘಟನೆ ಗಮನಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

'ಸ್ವಾಮಿಯ ಕೆಲವು ಆಭರಣಗಳು‌ ಅರ್ಚಕರ ಸುಪರ್ದಿಯಲ್ಲಿರುತ್ತವೆ. ಅರ್ಚಕರ ಸರದಿ ಪ್ರತಿ ತಿಂಗಳು ಬದಲಾಗುವುದರಿಂದ ಒಮ್ಮೆ ನಮಗೆ ಕೊಡುತ್ತಾರೆ. ನಾವು ಅದನ್ನು ಮತ್ತೊಂದು ತಂಡಕ್ಕೆ ಹಸ್ತಾಂತರಿಸುತ್ತೇವೆ' ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಬೆಟ್ಟದಲ್ಲಿ ಅರ್ಚಕರ ಮೂರು ಪಾಲು ಇವೆ. ತಿಂಗಳಿಗೊಮ್ಮೆ ಸರತಿ ಆಧಾರದಲ್ಲಿ ಬದಲಾಗುತ್ತಿರುತ್ತವೆ. ಪರಸ್ಪರರ ನಡುವೆ ಉತ್ತಮ‌ ಸಂಬಂಧ ಇಲ್ಲ ಎಂದು ಹೇಳಲಾಗುತ್ತಿದೆ. ವೈಯಕ್ತಿಕ ದ್ವೇಷದ ಕಾರಣಕ್ಕೂ ಈ ಘಟನೆ‌ ನಡೆದಿರುವ ಸಾಧ್ಯತೆ ಇದೆ. ಇನ್ಯಾರನ್ನೋ ಸಿಕ್ಕಿಸಿಹಾಕಬೇಕು ಎಂಬ ಉದ್ದೇಶದಿಂದ ಕರಡಿಗೆಯನ್ನು ಹುಂಡಿಗೆ ಹಾಕಿರುವ ಸಾಧ್ಯತೆಯೂ ಇದೆ‌ ಎಂದು‌ ಮೂಲಗಳು ತಿಳಿಸಿವೆ.

'ಕರಡಿಗೆ ಕಾಣದಿರುವ ವಿಚಾರ ಗಮನಕ್ಕೆ ಬಂದ ತಕ್ಷಣ ಕ್ರಮ ಕೈಗೊಂಡಿದ್ದೇವೆ. ಪೊಲೀಸರಿಗೆ ದೂರು‌ ನೀಡಿದ್ದೇವೆ. ಸಂಬಂಧಿಸಿದ ಅರ್ಚಕರಿಗೆ ನೋಟಿಸ್ ನೀಡಲಾಗಿದೆ. ಕರಡಿಗೆ ಸಿಗದೇ ಇದ್ದರೆ ಹೊಸ ಕರಡಿಗೆ ಮಾಡಿಸಿಕೊಡಲು ಅರ್ಚಕರು ಒಪ್ಪಿದ್ದಾರೆ. ಪೊಲೀಸರು ತನಿಖೆಯನ್ನೂ‌ ನಡೆಸುತ್ತಾರೆ. ಕಳ್ಳತನ ಆಗಿರುವ ಸಾಧ್ಯತೆ ತುಂಬಾ ಕಡಿಮೆ' ಎಂದು ಜಯವಿಭವಸ್ವಾಮಿ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು