ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಬೀದಿಯಲ್ಲಿದ್ದ ಕುಟುಂಬ ತಾತ್ಕಾಲಿಕ ವಸತಿ ಗೃಹಕ್ಕೆ

ಬಲವಂತ ಮನೆ ಖಾಲಿ ಪ್ರಕರಣ ಸುಖಾಂತ್ಯ, ಗುತ್ತಿಗೆ ಆಧಾರದ ಕೆಲಸ ನೀಡಲು ಒಪ್ಪಿಗೆ
Last Updated 22 ಜನವರಿ 2022, 12:53 IST
ಅಕ್ಷರ ಗಾತ್ರ

ಚಾಮರಾಜನಗರ: ಅವಧಿ ಮೀರಿ ವಾಸವಿದ್ದರು ಎಂಬ ಕಾರಣಕ್ಕೆ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ‌ಪ್ರಾಧಿಕಾರದ ಅಧಿಕಾರಿಗಳು ಮೃತಪಟ್ಟ ನೌಕರ ಜಯಸ್ವಾಮಿ ಕುಟುಂಬವನ್ನು ಬಲವಂತವಾಗಿ ಮನೆ ಖಾಲಿ ಮಾಡಿಸಿದ ಪ್ರಕರಣ ಸುಖಾಂತ್ಯ ಕಂಡಿದ್ದು, ಸಂತ್ರಸ್ತ ಕುಟುಂಬಕ್ಕೆ ತಾತ್ಕಾಲಿಕ ವಸತಿ ಕಲ್ಪಿಸಲು ಪ್ರಾಧಿಕಾರ ಒಪ್ಪಿದೆ.

ಅಲ್ಲದೇ, ಜಯಸ್ವಾಮಿ ಅವರ ಮಗ ಶಾಂತಮಲ್ಲೇಶ್‌ ಅವರಿಗೆ ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲೂ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಶುಕ್ರವಾರ ಸಂಜೆ ಪ್ರಾಧಿಕಾರದ ಅಧಿಕಾರಿಗಳು, ಸಂತ್ರಸ್ತ ಕುಟುಂಬ, ನೌಕರರ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಪದಾಧಿಕಾರಿಗಳು ಸಭೆ ಸೇರಿ ಈ ಪ್ರಕರಣದ ಬಗ್ಗೆ ಚರ್ಚಿಸಿ ರಾಜಿ ಸಂಧಾನಕ್ಕೆ ಪರಸ್ಪರ ತೀರ್ಮಾನಿಸಿದರು.

ಬಲವಂತವಾಗಿ ಮನೆ ಖಾಲಿ ಮಾಡಿಸಿದ್ದಕ್ಕೆ ಪ್ರಾಧಿಕಾರದ ಅಧಿಕಾರಿಗಳು ವಿವರಣೆ ನೀಡಿದರು.

ಜಯಸ್ವಾಮಿ ಅವರ ಮಗ ಶಾಂತ ಮಲ್ಲೇಶ್‌ ಅವರು ಹೊರಗುತ್ತಿಗೆಯಲ್ಲಿ ನಾಲ್ಕು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಸಮರ್ಪಕವಾಗಿ ಕೆಲಸ ನಿರ್ವಹಿಸದ ಹಾಗೂ ಕೆಲಸದ ಒತ್ತಡ ಇಲ್ಲದೇ ಇದ್ದುದರಿಂದ ಕಳೆದ ವರ್ಷ ಕೆಲವರ ಸೇವೆ ಸ್ಥಗಿತಗೊಳಿಸಲಾಗಿತ್ತು. ಅದರಲ್ಲಿ‌ ಇವರೂ ಒಬ್ಬರಾಗಿದ್ದರು. ಈಗ ಅವರಿಗೆ ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಶೀಘ್ರ ಪಾವತಿ: ’ಜಯಸ್ವಾಮಿ ಅವರ ಗ್ರ್ಯಾಚ್ಯುಟಿ ಹಣದಲ್ಲಿ ₹3.11 ಲಕ್ಷವನ್ನು ಈಗಾಗಲೇ ಪಾವತಿಸಲಾಗಿದೆ. ₹1.35 ಲಕ್ಷ ಬಾಕಿ ಇದೆ. ಮನೆ ಬಾಡಿಗೆ ಹಣವನ್ನು ಕಡಿತ ಮಾಡಿ ಉಳಿದ ಹಣವನ್ನು ಶೀಘ್ರ ಪಾವತಿಸಲು ಕ್ರಮ ವಹಿಸಲಾಗುವುದು. ಜಯಸ್ವಾಮಿ ಅವರ ಪಿಎಫ್‌ ಮೊತ್ತವನ್ನು ಪಡೆಯಲು ಬೇಕಾದ ದಾಖಲೆಗಳನ್ನು ಕುಟುಂಬದವರು ಸಲ್ಲಿಸಿಲ್ಲ. ಅವರು ಸಲ್ಲಿಸಿದ ನಂತರ ಆದಷ್ಟು ಬೇಗ ಹಣ ಬಿಡುಗಡೆ ಮಾಡಲು ಪ್ರಸ್ತಾವ ಕಳುಹಿಸಲಾಗುವುದು‘ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ತಾತ್ಕಾಲಿಕ ವಸತಿಗೆ ಸ್ಥಳಾಂತರ: ಈ ಮಧ್ಯೆ, ವಾರದಿಂದ ಬೀದಿಯಲ್ಲಿದ್ದ ಜಯಸ್ವಾಮಿ ಅವರ ಕುಟುಂಬ ಶನಿವಾರ ತಾತ್ಕಾಲಿಕ ವಸತಿ ಗೃಹಕ್ಕೆ ಸ್ಥಳಾಂತರಗೊಂಡಿದೆ.

’ಈ ಪ್ರಕರಣದಲ್ಲಿ ಪ್ರಾಧಿಕಾರ ನಿಯಮಾನುಸಾರ ಕ್ರಮ ಕೈಗೊಂಡಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಅಕ್ರಮವಾಗಿ ವಾಸವಿರುವವರನ್ನು ಖಾಲಿ ಮಾಡುವ ವಿಚಾರದಲ್ಲಿ ಪ್ರಾಧಿಕಾರದ ಗಮನಕ್ಕೆ ತರಲಾಗುವುದು ಹಾಗೂ ನೌಕರರ ಸಂಘದವರೊಡನೆ‌ ಚರ್ಚಿಸಿ ನಂತರ ಕ್ರಮ ಕೈಗೊಳ್ಳಲಾಗುವುದು. ಕಾಯಂ ವಸತಿ ಗೃಹಗಳನ್ನು ಕಾಯಂ ನೌಕರರಿಗೆ ಹಂಚಿಕೆ ಮಾಡಲಾಗುವುದು‘ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

’ಕಾನೂನು ಬದ್ಧ ಸೌಲಭ್ಯ‘
ಸಂಧಾನ ಸಭೆಯ ಬಗ್ಗೆ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್‌ ಅವರು, ’ಮನೆ ಖಾಲಿ ಮಾಡಿಸಿದ ಮರುದಿನದಿಂದಲೇ ಈ ಪ್ರಕರಣವನ್ನು ಇತ್ಯರ್ಥ ಪಡಿಸಲು ಪ್ರಯತ್ನ ಮಾಡುತ್ತಿದ್ದೆವು. ಪ್ರಾಧಿಕಾರದ ಕಾರ್ಯದರ್ಶಿ ಜಯವಿಭಸ್ವಾಮಿ ಅವರೊಂದಿಗೆ ಹಲವು ಬಾರಿ ಮಾತನಾಡಿದ್ದೇನೆ. ಶುಕ್ರವಾರ ಎಲ್ಲರೂ ಕೂತು ಚರ್ಚೆ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದೇವೆ. ಸಂತ್ರಸ್ತ ಕುಟುಂಬಕ್ಕೆ ಕಾನೂನು ಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಲಾಗಿದೆ. ಪ್ರಾಧಿಕಾರದ ಅಧಿಕಾರಿಗಳು ನಮಗೆ ಸಹಕರಿಸಿದ್ದಾರೆ‘ ಎಂದರು.

’ಹಿಂದೆ ಇದ್ದ ಮನೆಯ ಹಿಂಭಾಗದಲ್ಲಿನ ತಾತ್ಕಾಲಿಕ ಮನೆಗೆ ಜಯಸ್ವಾಮಿ ಅವರ ಕುಟುಂಬ ಸ್ಥಳಾಂತರಗೊಂಡಿದೆ. ಮಹಾಸಭಾದ ಪದಾಧಿಕಾರಿಗಳು ಮನೆ ಸ್ಥಳಾಂತರಕ್ಕೆ ಸಹಾಯ ಮಾಡಿದ್ದಾರೆ. ಮಹಾಸಭಾದ ವತಿಯಿಂದ ಕುಟುಂಬಕ್ಕೆ ಆರ್ಥಿಕ ನೆರವನ್ನೂ ನೀಡಿದ್ದೇವೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT