ಸೋಮವಾರ, ಅಕ್ಟೋಬರ್ 19, 2020
24 °C
ಸಿಬ್ಬಂದಿ ಕೊರತೆಯಿಂದ ನಲುಗಿದ ಪ್ರಾಥಮಿಕ ಆರೋಗ್ಯ ಕೇಂದ್ರ, ಆಂಬುಲೆನ್ಸ್‌ ಸೌಲಭ್ಯವೂ ಇಲ್ಲ

ಮಹದೇಶ್ವರ ಬೆಟ್ಟದಲ್ಲಿ ಆರೋಗ್ಯ ಸೇವೆಗೇ ಅನಾರೋಗ್ಯ!

ಜಿ.ಪ್ರದೀಪ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದ್ದು, ಸುಮುತ್ತಲಿನ ಹಳ್ಳಿಗಳ ಜನರಿಗೆ ಸರಿಯಾದ ಆರೋಗ್ಯ ಸೇವೆ ಲಭ್ಯವಾಗುತ್ತಿಲ್ಲ. ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಇಲ್ಲಿ ಆಂಬುಲೆನ್ಸ್‌ ಸೌಲಭ್ಯವೂ ಇಲ್ಲ. 

ಬೆಟ್ಟದ ಸುತ್ತಮುತ್ತ 18 ಹಳ್ಳಿಗಳಿವೆ. 20 ಸಾವಿರದಷ್ಟು ಮಂದಿ ಇಲ್ಲಿ ವಾಸವಿದ್ದಾರೆ. ಆರೋಗ್ಯ ಸೇವೆಗಳಿಗಾಗಿ ಅವರು ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ನಂಬಿದ್ದಾರೆ. ಇದಲ್ಲದೇ, ಮಲೆ ಮಹದೇಶ್ವರಸ್ವಾಮಿ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಾರೆ. ಯಾರಿಗಾದರೂ ಅನಾರೋಗ್ಯ ಕಾಡಿದರೆ ತುರ್ತು ಚಿಕಿತ್ಸೆಗಾಗಿ ಇದೇ ಕೇಂದ್ರವನ್ನು ಅವಲಂಬಿಸಬೇಕಿದೆ.

ಕೇಂದ್ರದಲ್ಲಿ ಒಬ್ಬರು ಆಯುಷ್‌ ವೈದ್ಯರು ಹಾಗೂ ಇಬ್ಬರು ಕಿರಿಯ ಮಹಿಳಾ ಸಹಾಯಕಿಯರು ಬಿಟ್ಟರೆ ಬೇರೆ ಯಾರೂ ಇಲ್ಲ. ದಿನದ 24 ಗಂಟೆಗಳ ಸೇವೆ ಎಂಬುದು ಕೇಂದ್ರದ ಫಲಕದಲ್ಲಿರುವ ಬರಹಕ್ಕೆ ಸೀಮಿತವಾಗಿದೆ.  

‘ಹಲವು ವರ್ಷಗಳಿಂದ ಈ ಆಸ್ಪತ್ರೆಯು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿಯೇ ಉಳಿದಿದೆ. ಮೇಲ್ದರ್ಜೆಗೇರಿಸಲು ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಸ್ಥಳೀಯರಾದ ಕುಮಾರ್‌ ಹಾಗೂ ನಾಗರಾಜ್‌ ಅವರು ಆರೋಪಿಸಿದರು. 

ಮಹದೇಶ್ವರ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಹಲವಾರು ಗ್ರಾಮಗಳು ಕಾಡಂಚಿನಲ್ಲಿದ್ದು, ರಸ್ತೆ ಹಾಗೂ ಇನ್ನಿತರ ಸೌಲಭ್ಯಗಳಿಂದ ವಂಚಿತವಾಗಿವೆ. ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಈ ಊರುಗಳ ಗ್ರಾಮಸ್ಥರು ಇಂದಿಗೂ ನೆಣೆ ಕಟ್ಟಿ ಮುಖ್ಯ ರಸ್ತೆಗೆ ರೋಗಿಗಳನ್ನು ಸಾಗಿಸುತ್ತಾರೆ. ರೋಗಿಗಳು ಗಂಭೀರ ಪರಿಸ್ಥಿತಿಯಲ್ಲಿ ಇಲ್ಲಿನ ಆರೋಗ್ಯ ಕೇಂದ್ರದಲ್ಲಿ  ಪ್ರಾಥಮಿಕ ಚಿಕಿತ್ಸೆ ಮಾತ್ರ ಕೊಡಿಸಬಹುದು. ಬೇರೆ ಆಸ್ಪತ್ರೆಗೆ ಶೀಘ್ರವಾಗಿ ಹೋಗಬೇಕೆಂದಿದ್ದರೆ ಇಲ್ಲಿ ಆಂಬು‌ಲೆನ್ಸ್‌ ಸೌಕರ್ಯವೂ ಇಲ್ಲ. ಬಾಡಿಗೆ ವಾಹನಗಳ ನೆರವು ಪಡೆಯಬೇಕು ಅಥವಾ ಬೇರೆ ಊರುಗಳಿಂದ ಆಂಬುಲೆನ್ಸ್‌ ತರಿಸಬೇಕಾಗಿದೆ.  

ಇತ್ತೀಚೆಗೆ ರಾತ್ರಿ ವೇಳೆ ಕೇಂದ್ರದಲ್ಲಿ ವೈದ್ಯರು ಇರುವುದಿಲ್ಲ ಮತ್ತು ಸಂಜೆ 6 ರಿಂದ ರಾತ್ರಿ 8 ಗಂಟೆಯ ತನಕ ಮಹಿಳಾ ಕಿರಿಯ ಸಹಾಯಕಿಯರು ಕೆಲಸ ನಿರ್ವಹಿಸುತಿಲ್ಲ. 6 ರಿಂದ 8 ಜನ ಸಹಾಯಕಿಯರು ಇರಬೇಕಾದ ಸ್ಥಳದಲ್ಲಿ ಇಬ್ಬರು ಮಾತ್ರ ಒತ್ತಡದಿಂದ ಕೆಲಸ ನಿರ್ವಹಿಸುತಿದ್ದಾರೆ. ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸದಿದ್ದರೂ ತೊಂದರೆ ಇಲ್ಲ; ಈಗಿರುವ ಕೇಂದ್ರದಲ್ಲಿ ಬೇಕಾಗುವಷ್ಟು ಸಿಬ್ಬಂದಿಯನ್ನು ನಿಯೋಜಿಸಿದರೆ ಸಾಕು ಎಂದು ಬೆಟ್ಟದ ನಿವಾಸಿಗಳು ಹೇಳುತ್ತಾರೆ. 

ಇಲ್ಲಿ ಉತ್ತಮ ಆರೋಗ್ಯ ಸೇವೆ ಲಭ್ಯವಿಲ್ಲದಿರುವುದರಿಂದ ಬೆಟ್ಟದ ಸುತ್ತಮುತ್ತಲಿನ ಜನರು ಆರೋಗ್ಯ ಸೇವೆಗಾಗಿ ನೆರೆಯ ತಮಿಳುನಾಡಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳನ್ನು ನಂಬಿದ್ದಾರೆ. ಅಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಲಭ್ಯವಿದ್ದು, ಇಲ್ಲಿಯೂ ಅದೇ ರೀತಿಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು ಒತ್ತಾಯಿಸುತ್ತಾರೆ ಸಾರ್ವಜನಿಕರು. 

‘ವಾರದಿಂದೀಚೆಗೆ ಆರೋಗ್ಯ ಇಲಾಖೆಯ ಹೊರಗುತ್ತಿಗೆ/ಗುತ್ತಿಗೆ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಆರೋಗ್ಯ ಸೇವೆ ಸರಿಯಾಗಿ ಸಿಗದಿರುವುದರಿಂದ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುತ್ತಲೇ ಇದ್ದೇವೆ. ಅವರು ಗಮನ ಹರಿಸುತ್ತಿಲ್ಲ. ಇದೇ ರೀತಿ ಮುಂದುವರಿದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಕುಮಾರ್‌ ಹಾಗೂ ನಾಗರಾಜ್‌ ಅವರು ಹೇಳಿದರು.  

ಮತ್ತಿಬ್ಬರ ನೇಮಕ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಗೋಪಾಲ್‌ ಅವರು, ‘ಬೆಟ್ಟದ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಇಬ್ಬರು ನರ್ಸ್‌ಗಳು ಇದ್ದಾರೆ. ಮತ್ತಿಬ್ಬರನ್ನು ನೇಮಕ ಮಾಡಲಾಗಿದೆ. ಕೆಲವು ದಿನಗಳಲ್ಲಿ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಆಂಬುಲೆನ್ಸ್‌ ಸೇವೆ ಒದಗಿಸುವ ವಿಚಾರದಲ್ಲಿ ಮೇಲಿನ ಅಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು