ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹದೇಶ್ವರ ಬೆಟ್ಟ: ನಾಗಮಲೆ ಪ್ರವೇಶಕ್ಕೆ ಆನ್‌ಲೈನ್ ಟಿಕೆಟ್‌

ವ್ಯವಸ್ಥೆಗೆ ಅರಣ್ಯ ಇಲಾಖೆ ಸಿದ್ಧತೆ: ಭಕ್ತರ ಸಂತಸ; ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗದಿರಲಿ– ಒತ್ತಾಯ
Published : 19 ಸೆಪ್ಟೆಂಬರ್ 2024, 4:44 IST
Last Updated : 19 ಸೆಪ್ಟೆಂಬರ್ 2024, 4:44 IST
ಫಾಲೋ ಮಾಡಿ
Comments

ಹನೂರು/ಮಹದೇಶ್ವರ ಬೆಟ್ಟ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳವಾದ ನಾಗಮಲೆ ಪ್ರವೇಶಕ್ಕೆ ಅರಣ್ಯ ಇಲಾಖೆ ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ ಜಾರಿಗೆ ಸಿದ್ಧತೆ ಮಾಡಿಕೊಂಡಿರುವುದು ಭಕ್ತರಿಗೆ ಹಾಗೂ ಚಾರಣ ಪ್ರಿಯರಿಗೆ ಸಂತಸ ತಂದಿದೆ.

ಅದರ ಬೆನ್ನಲ್ಲೇ, ‘ನಾಗಮಲೆ ಕ್ಷೇತ್ರದ ಪಾವಿತ್ರ್ಯಕ್ಕೆ, ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂಬ ಒತ್ತಾಯ ಕೇಳಿಬಂದಿದೆ.

‘ನಾಗಮಲೆಯು ಭಕ್ತರ ಭಕ್ತಿ ಸಮರ್ಪಣೆಗೆ ಮೀಸಲಾಗಿರಬೇಕೇ ಹೊರತು ಅಕ್ರಮ ಮದ್ಯ ಸಾಗಾಟ, ಗಾಂಜಾ ಮಾರಾಟದಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಹದ್ದಿನ ಕಣ್ಣಿರಿಸಬೇಕು’ ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಜಾನಪದ, ಸಾಹಿತ್ಯ, ಸಂಸ್ಕೃತಿ, ಪರಂಪರೆಗೆ ಹೆಸರಾಗಿರುವ, ಜನಪದ ಕಲೆಗಳ ತವರೂರಾದ ಜಿಲ್ಲೆಯು ಮಹದೇಶ್ವರ, ಸಿದ್ದಪ್ಪಾಜಿ ಸಹಿತ ಹಲವು ಪವಾಡ ಪುರುಷರು ನಡೆದಾಡಿ ಐಕ್ಯಗೊಂಡ ಪ್ರಸಿದ್ಧ ಸ್ಥಳ. ‘77 ಮಲೆಗಳ ಒಡೆಯ’ ಎಂದು ಕರೆಸಿಕೊಳ್ಳುವ ಮಾದಪ್ಪ ನಡೆದಾಡಿ, ಪವಾಡ ಮೆರೆದಿದ್ದಾರೆ ಎನ್ನಲಾದ ಸ್ಥಳಗಳು ಜಿಲ್ಲೆಯ ದಟ್ಟಾರಣ್ಯದೊಳಗಿವೆ.

ನಾಗಮಲೆ, ಪಾದಧರೆ (ಶಂಕಮ್ಮನ ಬೋಳಿ), ತಪಸ್ಸೆರೆ (ಕಂಬದಬೋಳಿ), ಇಂಡಿ ಬಸವೇಶ್ವರ, ಕಾರಯ್ಯ-ಬಿಲ್ಲಯ್ಯನ ಬೋಳಿ, ಎದುರುಬೋಳಿ ವೀರೇಶ್ವರ, ಕೋಬೆ ಮಹದೆಶ್ವರ, ಗೋಜಲಕ್ಕಿ ಬಸವೇಶ್ವರ, ಆದೇ ಮಾದೇಶ್ವರ, ಕೋಡುಗಲ್ಲು ಮಹದೇಶ್ವರ, ಆನೆ ತಲಕೆದಿಂಬ (ಕಣಿವೆ ಬಸಪ್ಪ), ಬಿಳಿಕಲ್ಲು ಬಸವೇಶ್ವರ ಸೇರಿದಂತೆ ಹಲವು ಮಲೆಗಳಿಗೆ ದಶಕಗಳ ಹಿಂದೆ ಭಕ್ತರು ನಡಿಗೆಯಲ್ಲಿಯೇ ತೆರಳಿ ಭಕ್ತಿ ಸಮರ್ಪಿಸಿ ಬರುತ್ತಿದ್ದರು.

ಮಲೆ ಮಹದೇಶ್ವರ ಬೆಟ್ಟಕ್ಕೆ ಬರುತ್ತಿದ್ದ ಬಹುತೇಕ ಭಕ್ತರು ತಪ್ಪಲಿನ ಮಲೆಗಳಿಗೆ ತೆರಳಿ ಪೂಜೆ, ಹರಕೆ ಸಲ್ಲಿಸುವುದು ಸಂಪ್ರದಾಯವಾಗಿತ್ತು. ಅರಣ್ಯ ಸಂರಕ್ಷಣೆ ಕಾಯ್ದೆ, ವನ್ಯಧಾಮ ಘೋಷಣೆಯಾದ ಬಳಿಕ ನಾಗಮಲೆ ಹೊರತುಪಡಿಸಿ ಬಹುತೇಕ ಮಲೆಗಳಿಗೆ ಭಕ್ತರ ಪ್ರವೇಶ ನಿರ್ಬಂಧವಾಯಿತು. ಕೆಲವು ತಿಂಗಳ ಹಿಂದೆಯಷ್ಟೆ ಚಾರಣ ಪ್ರದೇಶಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ ಬೆನ್ನಲ್ಲೇ ನಾಗಮಲೆಗೂ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು.

ಇದೀಗ ‌ನಾಗಮಲೆಗೆ ಭಕ್ತರ ಪ್ರವೇಶಕ್ಕೆ ಒತ್ತಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಆನ್‌ಲೈನ್‌ ಟಿಕೆಟ್‌ ವ್ಯವಸ್ಥೆ ಜಾರಿಗೆ ಅರಣ್ಯ ಇಲಾಖೆ ಮುಂದಾಗಿದೆ.

ಮಹದೇಶ್ವರ ಬೆಟ್ಟದ ಜತೆಗೆ ನಾಗಮಲೆಯೂ ಭಕ್ತರಿಗೆ ಧಾರ್ಮಿಕ ಶ್ರದ್ದಾ ಭಕ್ತಿಯ ಕೇಂದ್ರವಾಗಿದೆ. ಅರಣ್ಯಇಲಾಖೆ ಭಕ್ತರ ಭಾವನೆಗಳಿಗೆ ಸ್ಪಂದಿಸಬೇಕು. ಭಕ್ತರು ಸಹ ಧಾರ್ಮಿಕ ಸ್ಥಳದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು
ಕೆ.ವಿ ಮಾದೇಶ್ ಬೇಡ ಗಂಪಣ ಆರ್ಚಕರು
ನಾಗಮಲೆಗೆ ತೆರಳುವ ಭಕ್ತರು ಭಕ್ತಿಯ ಜತೆಗೆ ಪರಿಸರಕ್ಕೂ ಹಾನಿಯಾಗದಂತೆ ನಡೆದುಕೊಳ್ಳಬೇಕು. ಸ್ಥಳೀಯ ಜನರು ಹೊರಗಿನಿಂದ ಬರುವ ಭಕ್ತರಿಗೆ ಕ್ಷೇತ್ರದ ಪಾವಿತ್ರತ್ಯೆ ಬಗ್ಗೆ ಅರಿವು ಮೂಡಿಸಬೇಕು
ಶಾಂತಮಲ್ಲಿಕಾರ್ಜುನಸ್ವಾಮಿ ಸಾಲೂರು ಬೃಹನ್ಮಠ ಮಹದೇಶ್ವರ ಬೆಟ್ಟ
ನಾಗಮಲೆಗೆ ಮೋಜು ಮಸ್ತಿಗಾಗಿ ತೆರಳುವುದಿಲ್ಲ. ಅಲ್ಲಿಗೆ ತೆರಳುವ ಭಕ್ತರು ಕಾಲಿಗೆ ಪಾದರಕ್ಷೆಯನ್ನು ಹಾಕುವುದಿಲ್ಲ. ನಿಜವಾದ ಭಕ್ತರು ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತಾರೆ
ಚಿಕ್ಕಮಾದು ಮಹದೇಶ್ವರ ಬೆಟ್ಟ
ನಾಗಮಲೆಗೆ ಪ್ರವೇಶ ನೀಡಿದರೆ ಪರಿಸರಕ್ಕೆ ಹಾನಿಯಾಗುವುದಿಲ್ಲ. ಭಕ್ತರು ನಾಗಮಲೆಗೆ ತೆರಳಲು ಮುಕ್ತ ಅವಕಾಶ ನೀಡಬೇಕು. ಆದರೆ ಕ್ಷೇತ್ರದ ಪಾವಿತ್ರ್ಯತೆ ಹಾಳಾದರೆ ಕಠಿಣ ಕ್ರಮ ಜರುಗಿಸಬೇಕು
ಮಹದೇವಸ್ವಾಮಿ ತುಳಸಿಕೆರೆ
‘ಇನ್ನೆರಡು ದಿನಗಳಲ್ಲಿ ಕ್ರಮ’
ಅರಣ್ಯ ಸಚಿವರ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಚಾರಣ ಪ್ರದೇಶಗಳ ಪ್ರವೇಶಕ್ಕೆ ಆನ್‌ಲೈನ್ ಟಿಕೆಟ್‌ ವ್ಯವಸ್ಥೆ ಜಾರಿಗೆ ಬಂದಿದ್ದು ಅದರಂತೆ ನಾಗಮಲೆ ಪ್ರವೇಶಕ್ಕೂ ಆನ್‌ಲೈನ್ ಟಿಕೆಟ್‌ ವ್ಯವಸ್ಥೆ ಮಾಡಲಾಗಿದ್ದು ಇನ್ನೆರಡು ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಸ್ಥಳೀಯ ಭಕ್ತರಿಗೆ ನಾಗಮಲೆ ಪ್ರವೇಶಕ್ಕೆ ಮುಕ್ತ ಅವಕಾಶ ನೀಡುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ನಾಗಮಲೆಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯದಂತೆ ಅರಣ್ಯ ಇಲಾಖೆ ಹದ್ದಿನ ಕಣ್ಣಿಡಲಿದೆ- ಹೀರಾಲಾಲ್‌ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಾಮರಾಜನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT