ಮಂಗಳವಾರ, ಅಕ್ಟೋಬರ್ 4, 2022
26 °C
ಟೊಮೆಟೊ, ಕ್ಯಾರೆಟ್‌ ತುಟ್ಟಿ, ಹೂವು ಕೇಳುವವರೇ ಇಲ್ಲ

ಸೇಬಿನ ಭರಾಟೆ, ಗ್ರಾಹಕರಿಂದ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸೇಬಿನ ಸೀಸನ್‌ ಶುರುವಾಗಿದೆ. ಹಣ್ಣುಗಳ ಮಳಿಗೆಗಳಲ್ಲಿ, ಬೀದಿ ಬದಿಗಳಲ್ಲಿ ಈಗ ಸೇಬಿನ ರಾಶಿಗಳು. ವಿವಿಧ ಗಾತ್ರದ ಸೇಬುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. 

ತಿಂಗಳ ಹಿಂದೆ ಸೇಬು ದುಬಾರಿಯಾಗಿತ್ತು. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬರಲು ಆರಂಭವಾದ ಬಳಿಕ ಬೆಲೆ ಇಳಿಕೆಯಾಗಿದೆ. ₹100ಕ್ಕೆ ಕೆಜಿ ಸೇಬು ಸಿಗುತ್ತಿದೆ. 

ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹100 ಬೆಲೆ ಇದೆ. ಹೊರಗಡೆ, ಸೇಬಿನ ಗಾತ್ರಕ್ಕೆ ಅನುಗುಣವಾಗಿ ವ್ಯಾ‍ಪಾರಿಗಳು ಬೆಲೆ ನಿಗದಿ ಮಾಡಿದ್ದಾರೆ. ದೊಡ್ಡ ಗಾತ್ರದ, ಗುಣಮಟ್ಟದ ಸೇಬಿಗೆ ₹140ರವರೆಗೂ ಹೇಳುತ್ತಿದ್ದಾರೆ. ಸಾಮಾನ್ಯ ಸೇಬುಗಳನ್ನು ₹100–₹120ಕ್ಕೆ ಮಾರಾಟ ಮಾಡುತ್ತಿದ್ದಾರೆ. 

‘ಮೂರು ವಾರಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಸೇಬು ಬರುತ್ತಿದೆ. ಬೆಲೆ ಕಡಿಮೆಯಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಸದ್ಯ ಶಿಮ್ಲಾ ಸೇಬು ಮಾತ್ರ ಲಭ್ಯವಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಶ್ಮೀರ ಸೇಬು ಕೂಡ ಬರಲಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ತಿಳಿಸಿದರು. 

ಮೂಸಂಬಿ, ಕಿತ್ತಳೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಮೂಸಂಜಿ ಕೆಜಿಗೆ ₹60 ಇದೆ. ನಾಗಪುರ ಕಿತ್ತಳೆ ಕೆಜಿಗೆ ₹80 ಇದೆ. ಈಗ ಬರುತ್ತಿರುವ ಮೂಸಂಬಿ, ಕಿತ್ತಳೆಗಳ ರುಚಿಯೂ ಸಿಹಿಯಾಗಿದೆ. 

ಕಳೆದ ವಾರಕ್ಕೆ ಹೋಲಿಸಿದರೆ, ಈ ವಾರ ಪಚ್ಚೆ ಬಾಳೆ ಹಣ್ಣಿನ ಬೆಲೆಯಲ್ಲಿ ₹10 ಇಳಿಕೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕಳೆದವಾರ ಕೆಜಿಗೆ ₹40 ಇತ್ತು. ಉಳಿದ ಹಣ್ಣುಗಳ ಬೆಲೆ ಸ್ಥಿರವಾಗಿದೆ. 

ಟೊಮೆಟೊ ತುಟ್ಟಿ: ತರಕಾರಿಗಳ ಪೈಕಿ ಟೊಮೆಟೊ, ಕ್ಯಾರೆಟ್‌ ಬೆಲೆ ಈ ವಾರ ಜಾಸ್ತಿಯಾಗಿದೆ. 

‘ಟೊಮೆಟೊ ಧಾರಣೆ ₹30ರಿಂದ ₹40ಕ್ಕೆ ಏರಿದೆ. ಕ್ಯಾರೆಟ್‌ ಬೆಲೆ ಕೆಜಿಗೆ ₹20 ಜಾಸ್ತಿಯಾಗಿ ₹60ಕ್ಕೆ ತಲುಪಿದೆ. ಹಸಿಮೆಣಸಿನಕಾಯಿ ಬೆಲೆಯೂ ₹10 ಹೆಚ್ಚಾಗಿದೆ. ಉಳಿದ ತರಕಾರಿಗಳ ಧಾರಣೆಯಲ್ಲಿ ಬದಲಾವಣೆಯಾಗಿಲ್ಲ’ ಎಂದು ಮಧು ಮಾಹಿತಿ ನೀಡಿದರು. 

ಹೂವಿನ ಬೆಲೆ ಪಾತಾಳಕ್ಕೆ: ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಈ ವಾರ ಹೂವಿನ ಬೆಲೆ ಮತ್ತಷ್ಟು ಕುಸಿದಿದೆ. 

ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ಬರುತ್ತಿವೆ. ಆದರೆ, ಗ್ರಾಹಕರಿಂದ ಬೇಡಿಕೆ ಇಲ್ಲ ಎಂಬುದು ವ್ಯಾಪಾರಿಗಳ ಮಾತು.

ಚೆನ್ನೀಪುರ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕನಕಾಂಬರಕ್ಕೆ ಕೆಜಿಗೆ ₹400 ಇತ್ತು. ಉಳಿದಂತೆ ಕಾಕಡ ₹80, ಸುಗಂಧರಾಜ ₹30, ಚೆಂಡು ಹೂವು ₹10‌ಕ್ಕೆ ಮಾರಾಟವಾಗುತ್ತಿತ್ತು. ಸೇವಂತಿಗೆ ಬೆಲೆ ₹50ಕ್ಕೆ ಕುಸಿದಿದೆ. ಬಟನ್‌ ಗಲಾಬಿ ಕೆಜಿಗೆ ₹50 ಇದೆ. 

‘ನವರಾತ್ರಿ ಆರಂಭವಾಗುವವರೆಗೂ ಹೂವಿಗೆ ಬೇಡಿಕೆ ಇಲ್ಲ. ಹಾಗಾಗಿ, ಬೆಲೆಯೂ ಕಡಿಮೆ ಇದೆ. ಹೆಚ್ಚು ಹೂವು ಬರುತ್ತಿದೆ. ಆದರೆ, ಕೇಳುವವರೇ ಇಲ್ಲದಂತಾಗಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು