ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಟಳ್ಳಿ: ಚಿರತೆ ಹಾವಳಿ, ಜನರಲ್ಲಿ ಆತಂಕ

10 ದಿನಗಳಿಂದಲೂ ಜಾನುವಾರುಗಳ ಮೇಲೆ ಚಿರತೆ ದಾಳಿ
Last Updated 3 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಮಾರ್ಟಳ್ಳಿ ಭಾಗದಲ್ಲಿ ಹತ್ತು ದಿನಗಳಿಂದ ಚಿರತೆಯೊಂದು ಕರು, ಮೇಕೆಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಅರಣ್ಯದ ಅಂಚಿನಲ್ಲಿರುವ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.

ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಶಿಲುವೆ ನಗರ, ಕೊಂಬೈಕ್ಕಾಡು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ. ಬಹುತೇಕ ಅರಣ್ಯಕ್ಕೆ ಹೊಂದಿಕೊಂಡಂತಿರುವ ಇಲ್ಲಿನ ಜನರು ಕೃಷಿ ಜತೆಗೆ ಜಾನುವಾರುಗಳನ್ನು ಸಾಕುತ್ತಿದ್ದಾರೆ.

ಈಚೆಗೆ ಜಮೀನಿಗೆ ನುಗ್ಗುತ್ತಿರುವ ಚಿರತೆ ಮನೆಯ ಮುಂಭಾಗ, ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸು, ಕರು, ಮೇಕೆ, ನಾಯಿಗಳನ್ನು ತಿಂದು ಹಾಕುತ್ತಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಹತ್ತು ದಿನದ ಅವಧಿಯಲ್ಲಿ ಕೊಂಬೈಕ್ಕಾಡು ಗ್ರಾಮದ ಆರೋಗ್ಯಯಮ್ಮಾಳ್, ನಿರ್ವಾಣಿ ಬೆಳ್ಳಿ ಎಂಬುವರ ಮೇಕೆಗಳನ್ನು ತಿಂದು ಹೋಗಿದೆ. ನಿರ್ವಾಣಿ ನಾಗ, ಮಾರಿಗುಡಿ ಪುಟ್ಟ ಎಂಬುವರ ಕರುಗಳನ್ನು ತಿಂದಿದೆ. ಅಂಥೋಣಿಯಪ್ಪ ಎಂಬುವರ ಎರಡು ನಾಯಿಗಳನ್ನು ಎತ್ತಿಕೊಂಡು ಹೋಗಿದೆ. ಮಂಗಳವಾರ ರಾತ್ರಿ, ಶಿಲುವೆ ನಗರದ ಮಣಿ ಎಂಬುವರು ತಮ್ಮ ಮನೆ ಮುಂದೆ ಕಟ್ಟಿ ಹಾಕಿದ್ದ ಮೇಕೆಯನ್ನು ಚಿರತೆ ಎತ್ತಿಕೊಂಡು ಹೋಗಿದೆ.

ರಾಮಾಪುರ ವನ್ಯಜೀವಿ ವಲಯದ ಮಾರ್ಟಳ್ಳಿ ಬೀಟ್‌ನಲ್ಲಿ ಒಂದು ತಿಂಗಳಿನಿಂದ ಚಿರತೆ ಅಡ್ಡಾಡುತ್ತಿರುವುದನ್ನು ಸ್ಥಳೀಯರು ನೋಡಿದ್ದಾರೆ. ಹತ್ತು ದಿನಗಳಿಂದೀಚೆಗೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ತೋಟದ ಮನೆಗಳಲ್ಲಿ ಮಕ್ಕಳು, ವೃದ್ಧರು ಎಲ್ಲರೂ ಇದ್ದಾರೆ. ನೇರವಾಗಿ ಜಮೀನಿಗೆ ನುಗ್ಗುವ ಚಿರತೆ ಮನೆಗಳಿಗೆ ನುಗ್ಗಿದರೆ ಗತಿಯೇನು? ಚಿರತೆ ಹಾವಳಿ ತಪ್ಪಿಸಲು ಅರಣ್ಯ ಇಲಾಖೆ ತಕ್ಷಣವೇ ಶಾಶ್ವತ ಕ್ರಮ ಕೈಗೊಳ್ಳಬೇಕು’ ಎಂದು ಶಿಲುವೆ ನಗರದ ನಿವಾಸಿ ಸಬಾಸ್ಟಿಯನ್ ಒತ್ತಾಯಿಸಿದರು.

‘ಇರುವ ಅಲ್ಪ ಜಮೀನಿನಲ್ಲಿ ಕೃಷಿ ಜತೆಗೆ ಹಸು, ಮೇಕೆಗಳನ್ನು ಸಾಕಿಕೊಂಡಿದ್ದೇನೆ. ಮಂಗಳವಾರ ರಾತ್ರಿ ಮನೆ ಮುಂಭಾಗ ಕಟ್ಟಿಹಾಕಿದ್ದ ಮೇಕೆಯನ್ನು ಚಿರತೆ ಎಳೆದೊಯ್ದಿದೆ. ಮಧ್ಯ ರಾತ್ರಿ ಮಳೆಯಾಗುತ್ತಿರುವಾಗ ಮನೆಯ ಅಂಗಳಕ್ಕೆ ಬಂದಿದೆ. ಮನೆಯಲ್ಲಿ ಮಕ್ಕಳು, ವೃದ್ಧರು ಇದ್ದಾರೆ. ಜಮೀನು ಅರಣ್ಯಕ್ಕೆ ಹತ್ತಿರವಿರುವುದರಿಂದ ಒಂದು ಬಾರಿ ಮಾಂಸದ ರುಚಿ ನೋಡಿದ ಮೇಲೆ ಮತ್ತೆ ಅದು ನಮ್ಮ ಜಮೀನಿಗೆ ಬರುವ ಸಾಧ್ಯತೆಯಿದೆ. ಆದ್ದರಿಂದ ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿದು ಬೇರೆಡೆಗೆ ಬಿಟ್ಟು ನಮ್ಮ ಆತಂಕವನ್ನು ದೂರ ಮಾಡಬೇಕು’ ಎಂದು ಮಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದೂರು ಬಂದಿದೆ, ಶೀಘ್ರ ಭೇಟಿ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು, ‘ಜಾನುವಾರುಗಳು ಕಾಣೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರಿಂದ ದೂರು ಬಂದ ಮೇಲೆ ಅಲ್ಲಿನ ಸ್ಥಳೀಯ ಅರಣ್ಯಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ಗ್ರಾಮಸ್ಥರು ಚಿರತೆ ದಾಳಿ ಎಂದು ಹೇಳುತ್ತಿದ್ದಾರೆ. ನಮ್ಮ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ಶೀಘ್ರದಲ್ಲೇ ನಾನು ಕೂಡ ಸ್ಥಳಕ್ಕೆ ಭೇಟಿ ನೀಡುತ್ತೇನೆ’ ಎಂದರು.

--

ಜನರು ಆತಂಕ ಪಡುವ ಅಗತ್ಯವಿಲ್ಲ. ಪ್ರಾಣಿಗಳು ಅರಣ್ಯದಿಂದ ಹೊರಗೆ ಬಂದರೆ ಕೂಡಲೇ ಸ್ಥಳೀಯ ಸಿಬ್ಬಂದಿಗೆ ಕರೆ ಮಾಡಿ ತಿಳಿಸಬೇಕು

-ವಿ.ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

--

ಚಿರತೆ ಮನೆ ಬಳಿಗೆ ಬಂದಿರುವುದರಿಂದ ಎಲ್ಲರೂ ಆತಂಕಗೊಂಡಿದ್ದೇವೆ. ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿದು ಬೇರೆಡೆ ಬಿಡಬೇಕು
ಮಣಿ, ಶಿಲುವೆ ನಗರ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT