ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಬೇಸಿಗೆ ರಜೆಯಲ್ಲಿ 39 ಸಾವಿರ ಮಕ್ಕಳಿಗೆ ಬಿಸಿಯೂಟ

ಐದು ತಾಲ್ಲೂಕುಗಳಲ್ಲಿ ಯೋಜನೆ ಅನುಷ್ಠಾನ, ಪೋಷಕರಿಂದ ಅನುಮತಿ ಪಡೆದವರಿಗೆ ಸೌಲಭ್ಯ
Published 16 ಏಪ್ರಿಲ್ 2024, 5:23 IST
Last Updated 16 ಏಪ್ರಿಲ್ 2024, 5:23 IST
ಅಕ್ಷರ ಗಾತ್ರ

ಚಾಮರಾಜನಗರ/ಯಳಂದೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬೇಸಿಗೆ ರಜೆ ಅವಧಿಯಲ್ಲೂ ಮಕ್ಕಳಿಗೆ ಬಿಸಿಯೂಟ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಜಿಲ್ಲೆಯಲ್ಲೂ 39,086 ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ. 

ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ 41 ದಿನಗಳ ಬೇಸಿಗೆ ರಜೆ ಬಿಸಿಯೂಟ ಯೋಜನೆಗೆ ಇದೇ  12ರಂದು ಚಾಲನೆ ಸಿಕ್ಕಿದೆ. ಮೇ 28ರವರೆಗೆ ನಡೆಯಲಿದೆ. 

ರಜಾ ದಿನವಾದ ಭಾನುವಾರ ಬಿಟ್ಟು, ಉಳಿದ ದಿನಗಳಲ್ಲಿ ಮಕ್ಕಳು ಮಧ್ಯಾಹ್ನ ಪ್ರತಿ ದಿನ ಶಾಲೆಗೆ ಬಂದು ಬಿಸಿಯೂಟ ಸವಿಯಬಹುದು. ಶಾಲಾ ದಿನಗಳಲ್ಲಿ ನೀಡುವ ಹಾಲು, ಮೊಟ್ಟೆ, ಬಾಳೆಹಣ್ಣು ಹಾಗೂ ಚಿಕ್ಕಿ‌ಯನ್ನು ರಜಾ ದಿನಗಳಲ್ಲಿ ನೀಡಲಾಗುವುದಿಲ್ಲ. 

39,086 ಮಕ್ಕಳು: ಜಿಲ್ಲೆಯಲ್ಲಿ ಬಿಸಿಯೂಟ ಯೋಜನೆಯ ಫಲಾನುಭವಿ ಮಕ್ಕಳು 84 ಸಾವಿರದಷ್ಟು ಇದ್ದಾರೆ. ಬೇಸಿಗೆ ರಜೆಯಲ್ಲಿ 685 ಶಾಲೆಗಳ 39,086 ಮಕ್ಕಳಿಗೆ ಶಿಕ್ಷಣ ಇಲಾಖೆ ಊಟದ ವ್ಯವಸ್ಥೆ ಮಾಡಲಿದೆ.

ಬಿಸಿಯೂಟ ಕೊಡುವುದಕ್ಕೆ ಆರಂಭಿಸಿದ್ದೇವೆ. 84 ಸಾವಿರ ಮಕ್ಕಳ ಪೈಕಿ 39 ಸಾವಿರ ಮಕ್ಕಳು ಮಧ್ಯಾಹ್ನ ಶಾಲೆಗೆ ಬರುವುದಾಗಿ ಹೇಳಿದ್ದಾರೆ.
ಗುರುಲಿಂಗಯ್ಯ, ಬಿಸಿಯೂಟ ವಿಭಾಗದ ಶಿಕ್ಷಣಾಧಿಕಾರಿ

‘ಮಧ್ಯಾಹ್ನದ ಬಿಸಿಯೂಟ ಅಗತ್ಯವಿರುವ ಬಗ್ಗೆ ಮಕ್ಕಳ ಪೋಷಕರಿಂದ ಖಾತರಿ ಪಡಿಸಿಕೊಂಡಿದ್ದೇವೆ. ಕೆಲವು ಪೋಷಕರು ತಮಗೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅವರ ಮಕ್ಕಳನ್ನು ಕೈಬಿಟ್ಟಿದ್ದೇವೆ’ ಎಂದು ಜಿಲ್ಲಾ ಬಿಸಿಯೂಟ ವಿಭಾಗದ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 

ಒಂದು ಗ್ರಾಮದಲ್ಲಿ ಹೆಚ್ಚು ಶಾಲೆಗಳು ಇದ್ದಲ್ಲಿ, ಹೆಚ್ಚು ವಿದ್ಯಾರ್ಥಿಗಳಿರುವ  ಶಾಲೆಯನ್ನು ಬಿಸಿಯೂಟ ಪೂರೈಸುವ ಕೇಂದ್ರವನ್ನಾಗಿ ಗುರುತಿಸಲಾಗಿದೆ. ಸುತ್ತಲಿನ ಒಂದೆರಡು ಕಿ.ಮೀ ವ್ಯಾಪ್ತಿಯೊಳಗಿನ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೂ ಈ ಕೇಂದ್ರದಲ್ಲಿ ಊಟ ಸವಿಯಬಹುದು. 

‘ಬರದ ಸಂದರ್ಭದಲ್ಲಿ ಶಾಲೆಗಳಲ್ಲಿ ದಾಸೋಹಕ್ಕೆ ಸರ್ಕಾರ ಒತ್ತು ನೀಡಿರುವುದು ಉತ್ತಮ ಬೆಳವಣಿಗೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೂ ಅನುಕೂಲವಾಗಿದೆ, ಬಿಸಿಲಿನಲ್ಲಿ ಅಲೆಯುವುದು ತಪ್ಪಿದೆ’ ಎಂದು ಪೋಷಕ ಯಳಂದೂರಿನ ನಾಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಅಡುಗೆ ಸಿಬ್ಬಂದಿಗೂ ಸಭೆ ನಡೆಸಿ ಮಾರ್ಗದರ್ಶನ ಮಾಡಲಾಗಿದೆ. ಆಹಾರ ಸಂಗ್ರಹಿಸುವ ಸ್ಥಳದಲ್ಲಿ ನೈರ್ಮಲ್ಯ ಕಾಪಾಡುವುದು, ತಟ್ಟೆ, ಲೋಟ ಸ್ವಚ್ಛತೆ, ಕುಡಿಯುವ ನೀರನ್ನು ಸಂಗ್ರಹ ಮೊದಲಾದ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ’ ಎಂದು ಬಿಆರ್‌ಪಿ ಸತೀಶ್ ತಿಳಿಸಿದರು. 

‘ಈ ಯೋಜನೆಗೆ ದಾನಿಗಳೂ ನೆರವು ನೀಡಬಹುದು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬಹುದು. ಬೇಸಿಗೆ ಶಿಬಿರಗಳನ್ನು ಆಯೋಜಿಸಿ ಉತ್ತಮ ಸಾಂಸ್ಕೃತಿಕ ವಾತಾವರಣ ಸೃಷ್ಟಿಸಲು ಅವಕಾಶ ಇದೆ. ಇಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮತ್ತು ಪಾಲಕರು ಈಗಾಗಲೇ ಒಪ್ಪಿಗೆ ಪತ್ರ ನೀಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಕೃಷ್ಣಪುರ ಶಾಲೆಯ ಮುಖ್ಯ ಶಿಕ್ಷಕ ರಾಜು ತಿಳಿಸಿದರು.

ಸಕಲ ಸಿದ್ಧತೆ: ಬಿಇಒ

‘ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛತೆ ಕಾಪಾಡಲು ತಿಳಿಸಲಾಗಿದೆ. ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು ತಾಲ್ಲೂಕು ಹಂತದಲ್ಲಿ ಬಿಇಒ ಸಿಆರ್‌ಪಿ ಬಿಆರ್‌ಪಿ ಬಿಆರ್‌ಸಿ ಇಸಿಒ ಹಾಗೂ ಸಹಾಯಕ ನಿರ್ದೇಶಕರಿಗೆ ಮೇಲು ಉಸ್ತುವಾರಿ ಜವಾಬ್ಧಾರಿ ನೀಡಲಾಗಿದೆ. ಈಗಾಗಲೇ ಸಭೆ ನಡೆಸಿ ವ್ಯವಸ್ಥಿತವಾಗಿ ಬಿಸಿಯೂಟ ವಿತರಿಸಲು ಕ್ರಮ ವಹಿಸಲಾಗಿದೆ. 56 ಕೇಂದ್ರಗಳಲ್ಲಿ 2180 ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ’ ಎಂದು ಯಳಂದೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT