ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಹಸಿರು ಮೇವಿನ ಕೊರತೆ- ಹಾಲು ಉತ್ಪಾದನೆ ಕುಂಠಿತ

ಚಾಮುಲ್‌: ಪ್ರತಿ ದಿನ 2.30 ಲಕ್ಷ ಲೀಟರ್‌ ಹಾಲು ಸಂಗ್ರಹ, ಲಕ್ಷ ಲೀಟರ್‌ ಹಾಲು, ಮೊಸರು ಮಾರಾಟ
Published 4 ಮೇ 2024, 9:07 IST
Last Updated 4 ಮೇ 2024, 9:07 IST
ಅಕ್ಷರ ಗಾತ್ರ

ಚಾಮರಾಜನಗರ: ಸುಡು ಬೇಸಿಗೆ ಕಾರಣದಿಂದ ಜಾನುವಾರುಗಳಿಗೆ ಹಸಿರು ಮೇವಿನ ಕೊರತೆ ಉಂಟಾಗಿದ್ದು, ಹಾಲಿನ ಉತ್ಪಾದನೆ ಕಡಿಮೆಯಾಗಿದೆ. 

ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟವು (ಚಾಮುಲ್‌) ಸದ್ಯ, ಪ್ರತಿ ದಿನ 2.30 ಲಕ್ಷ ಲೀಟರ್‌ಗಳಷ್ಟು ಹಾಲು ಸಂಗ್ರಹಿಸುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ, ಈ ಬಾರಿ 6,000 ಲೀಟರ್‌ಗಳಷ್ಟು ಕಡಿಮೆ ಹಾಲು ಉತ್ಪಾದನೆಯಾಗುತ್ತಿದೆ. 

ಸಾಮಾನ್ಯವಾಗಿ ಮೇವು ಚೆನ್ನಾಗಿದ್ದ ಸಂದರ್ಭದಲ್ಲಿ ಹಾಲಿನ ಪೂರೈಕೆ ಜಾಸ್ತಿ ಇರುತ್ತದೆ. ಪ್ರತಿ ದಿನ 2.90 ಲಕ್ಷದಿಂದ 3 ಲಕ್ಷ ಲೀಟರ್‌ವರೆಗೂ ಹಾಲು ಒಕ್ಕೂಟಕ್ಕೆ ಪೂರೈಕೆಯಾಗುತ್ತಿದೆ. 

ಚಾಮುಲ್‌ ವ್ಯಾಪ್ತಿಯಲ್ಲಿ 466 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 1.05 ಲಕ್ಷ ಸದಸ್ಯರಿದ್ದಾರೆ. ಈ ಪೈಕಿ 35 ಸಾವಿರದಷ್ಟು ಮಂದಿ ಪ್ರತಿ ದಿನ ಹಾಲು ಪೂರೈಸುತ್ತಿದ್ದಾರೆ. 

‘ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ಇದ್ದರೂ, ಹಾಲಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗಿಲ್ಲ’ ಎಂದು ಹೇಳುತ್ತಾರೆ ಚಾಮುಲ್‌ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್‌.

ಕೊಳವೆ ಬಾವಿಯ ನೀರಿನ ವ್ಯವಸ್ಥೆ ಇರುವ ಹೈನುಗಾರರಿಗೆ ಹಸಿರು ಮೇವಿನ ಕೊರತೆ ಉಂಟಾಗಿಲ್ಲ. ಜಮೀನು ಇಲ್ಲದಿದ್ದರೂ, ಜಾನುವಾರುಗಳನ್ನು ಸಾಕುತ್ತಿರುವವರಿಗೆ ಹಸಿರು ಮೇವು ಸಿಗುತ್ತಿಲ್ಲ. ಅನಿವಾರ್ಯವಾಗಿ ಒಣ ಮೇವನ್ನೇ ಅವರು ಜಾನುವಾರುಗಳಿಗೆ ಕೊಡಬೇಕಾಗಿದೆ. 

ಡೇರಿಗಳಲ್ಲಿ ಸಂಗ್ರಹ ಕಡಿಮೆ: ಕೆಲವು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗಿದೆ. 

‘ನಮ್ಮಲ್ಲಿ ದಿನಕ್ಕೆ 1,300ರಿಂದ 1,400 ಲೀಟರ್‌ ಹಾಲು ಸಂಗ್ರಹವಾಗುತ್ತಿತ್ತು. ಈಗ ಇದು 1,200 ಲೀಟರ್‌ಗಿಂತಲೂ ಕಡಿಮೆಯಾಗಿದೆ. ಹಸಿರು ಮೇವು ಸಿಗದಿರುವುದರಿಂದ ಹಾಲಿನ ಉತ್ಪಾದನೆ ಕಡಿಮೆಯಾಗಿದೆ’ ಎಂದು ಚಾಮರಾಜನಗರದ ಬೂದಿತಿಟ್ಟು ಕ್ರಾಸ್‌ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಈ ಬಾರಿ ಬರಗಾಲ ಇರುವುದರಿಂದ ಹಸಿರು ಮೇವು ಸುಲಭವಾಗಿ ಸಿಗುತ್ತಿಲ್ಲ’ ಎಂದು ಅವರು ಹೇಳಿದರು. 

‘ನಮಗೆ ಸ್ವಲ್ಪವೇ ಜಮೀನಿದೆ. ಅಲ್ಲಿ ಹಸಿರು ಹುಲ್ಲು ಬೆಳೆಯುತ್ತಿಲ್ಲ. ಹೀಗಾಗಿ ಹಸುಗಳಿಗೆ ಒಣಮೇವನ್ನೇ ಕೊಡುತ್ತಿದ್ದೇನೆ. ಮೊದಲು ನಾಲ್ಕು ಲೀಟರ್ ಹಾಲು ಸಿಗುತ್ತಿತ್ತು. ಈಗ ಎರಡು ಲೀಟರ್‌ಗೆ ಇಳಿದಿದೆ. ಎರಡು ಹೊತ್ತು ಕರೆಯುವುದಕ್ಕೆ ಆಗುವುದಿಲ್ಲ. ಮಳೆ ಬಿದ್ದು ಹುಲ್ಲು ಸಿಗುವಂತಾದರೆ ಹಾಲಿನ ಇಳುವರಿ ಹೆಚ್ಚಾಗಲಿದೆ’ ಎಂದು ತಾಲ್ಲೂಕಿನ ಹೆಗ್ಗವಾಡಿಪುರದ ರಾಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.  

‘ಈಗ ಮೊದಲಿನಷ್ಟು ಹಾಲು ಸಿಗುತ್ತಿಲ್ಲ. ನಮ್ಮ ಒಂದು ಹಸು ಗರ್ಭ ಧರಿಸಿದ್ದು, ಅದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮೇವು ನೀಡಲು ಆಗುತ್ತಿಲ್ಲ. ಇದರಿಂದ ಅದು ಆರೋಗ್ಯವಂತ ಕರು ಹಾಕುವುದೇ ಕಷ್ಟವಾಗಿದೆ. ಡೇರಿಗಳು ಹಸಿರು ಮೇವು ಒದಗಿಸಲು ಕ್ರಮ ವಹಿಸಬೇಕು’ ಎಂದು ದೇಶವಳ್ಳಿ ಗ್ರಾಮದ ಶಶಿಕಲಾ ಹೇಳಿದರು. 

ಬಾರದ ಪ್ರೋತ್ಸಾಹ ಧನ: ಈ ಮಧ್ಯೆ, ಹಾಲು ಉತ್ಪಾದಕರಿಗೆ ನಾಲ್ಕೈದು ತಿಂಗಳುಗಳಿಂದ ಸರ್ಕಾರದ ಪ್ರೋತ್ಸಾಹ ಧನ ಬಂದಿಲ್ಲ. 

‘ಹಾಲು ಉತ್ಪಾದನೆ ಕಡಿಮೆಯಾದ ಸಂದರ್ಭದಲ್ಲಿ ಹಾಲು ಒಕ್ಕೂಟ ಖರೀದಿ ದರವನ್ನು ಹೆಚ್ಚಿಸುತ್ತದೆ. ಆದರೆ, ಈ ಬಾರಿ ಅಂತಹ ನಿರ್ಧಾರವನ್ನು ಕೈಗೊಂಡಿಲ್ಲ. ಇದರಿಂದ ರೈತರಿಗೆ ಹೊರೆಯಾಗಿದೆ’ ಎಂದು ಹೇಳುತ್ತಾರೆ ಹೈನುಗಾರರು ಮತ್ತು ಡೇರಿಗಳ ಸಿಬ್ಬಂದಿ.

ಬೇಸಿಗೆ ಕಾರಣಕ್ಕೆ ಹಾಲಿನ ಉತ್ಪಾದನೆ ಸ್ವಲ್ಪ ಕಡಿಮೆಯಾಗಿದೆ. ಹಾಲು ಖರೀದಿ ದರ ಸಂಬಂಧ ಒಕ್ಕೂಟ ಯಾವುದೇ ನಿರ್ಧಾರ ಕೈಗೊಂಡಿಲ್ಲ

–ರಾಜ್‌ಕುಮಾರ್‌ ಚಾಮುಲ್‌ ವ್ಯವಸ್ಥಾಪಕ ನಿರ್ದೇಶಕ

ಹಾಲು ಮೊಸರಿಗೆ ಬೇಡಿಕೆ ಹೆಚ್ಚು

ಈ ಮಧ್ಯೆ ಬೇಸಿಗೆಯಲ್ಲಿ ಚಾಮುಲ್‌ ಮಾರಾಟ ಮಾಡುವ ಹಾಲು ಮೊಸರು ಮಜ್ಜಿಗೆಗೆ ಬೇಡಿಕೆ ಹೆಚ್ಚಾಗಿದೆ. 90 ಸಾವಿರದಿಂದ 1.10 ಲಕ್ಷ ಲೀಟರ್‌ವರೆಗೆ ಹಾಲು–ಮೊಸರು ಮಾರಾಟವಾಗುತ್ತದೆ. ‘ಪ್ರತಿ ದಿನ 60 ಸಾವಿರದಿಂದ 65 ಸಾವಿರ ಲೀಟರ್‌ ಹಾಲು 25 ಸಾವಿರ ಲೀಟರ್‌ ಮೊಸರು ಮತ್ತು 10 ಸಾವಿರ ಲೀಟರ್‌ಗಷ್ಟು ಮಜ್ಜಿಗೆಯನ್ನು ಮಾರಾಟ ಮಾಡುತ್ತಿದ್ದೇವೆ. ಬೇಸಿಗೆಯಾಗಿರುವುದರಿಂದ ಮೊಸರು ಮಜ್ಜಿಗೆಗೆ ಹೆಚ್ಚು ಬೇಡಿಕೆ ಕಂಡು ಬರುತ್ತಿದೆ’ ಎಂದು ರಾಜ್‌ಕುಮಾರ್‌ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT