ಸೋಮವಾರ, ಮೇ 17, 2021
23 °C

ಚಾಮರಾಜನಗರ: ಗಣಿ ಪ್ರದೇಶಗಳಿಗೆ ಸಚಿವ ಸಿ.ಸಿ.ಪಾಟೀಲ ಭೇಟಿ, ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಎರಡು ದಿನಗಳ ಭೇಟಿಗಾಗಿ ಮಂಗಳವಾರ ಜಿಲ್ಲೆಗೆ ಬಂದಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಅವರು  ಜಿಲ್ಲೆಯ ವಿವಿಧ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಾಮರಾಜನಗರ ತಾಲ್ಲೂಕಿನ ಕೆಂಪನಪುರ, ಹುಲ್ಲೇಪುರ, ರೇಚಂಬಳ್ಳಿ, ನಂಜರಾಜಪುರ, ಶಿವಪುರ, ಯಡಪುರ, ಮಲ್ಲಯ್ಯನಪುರ, ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಸಚಿವರು ಪರಿಶೀಲಿಸಿದರು.

ಕಪ್ಪು ಅಲಂಕಾರಿಕ ಶಿಲೆಯ (ಗ್ರ್ಯಾನೈಟ್‌) ಪಟ್ಟಾ ಪ್ರದೇಶಗಳಿಗೆ ಭೇಟಿ ನೀಡಿ ಸಚಿವರು ಪರಿಶೀಲಿಸಿದರು. ಗಣಿ ಪ್ರದೇಶಗಳಲ್ಲಿ ತೆಗೆದಿರುವ ಕಲ್ಲಿನ ಪ್ರಮಾಣ ಮತ್ತು ಪ್ರಮಾಣಗಳ ಉಲ್ಲಂಘನೆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಉಪನಿರ್ದೇಶಕಿಗೆ ಸೂಚಿಸಿದರು.

ಪರಿಶೀಲನೆ ಬಳಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಪ್ಪು ಅಲಂಕಾರಿಕ ಶಿಲಾ ಗಣಿಗಾರಿಕೆ ಬಗ್ಗೆ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಫಾರಂ ಸಿ ಮುಖಾಂತರ ಪರವಾನಗಿ ಪಡೆದು ಕಾರ್ಯ ನಿರ್ವಹಿಸಲಾಗುತ್ತಿರುವ ಕ್ರಷರ್ ಘಟಕಗಳು ಮತ್ತು ಕಟ್ಟಡ ಕಲ್ಲು ಗಣಿ ಗುತ್ತಿಗೆಗಳ ಬಗ್ಗೆ ವಿವರ ಪಡೆದುಕೊಂಡರು.

‘ತಾಲ್ಲೂಕಿನ ಗಾಳಿಪುರದಲ್ಲಿ 31 ಎಕರೆ ಪ್ರದೇಶದಲ್ಲಿ  ನೈಸರ್ಗಿಕ ಭೂ ವಿಜ್ಞಾನ ಮ್ಯೂಸಿಯಂ ಸ್ಥಾಪನೆಗೆ ಅಗತ್ಯವಿರುವ ಭೂ ಮಂಜೂರಾತಿಗೆ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲಕರವಾಗುವಂತೆ ಮ್ಯೂಸಿಯಂ ರೂಪುಗೊಳ್ಳಬೇಕು’ ಎಂದು ಸಿ.ಸಿ.ಪಾಟೀಲ ಅವರು ಹೇಳಿದರು. 

‘ಇಲಾಖೆಗೆ ಸ್ವಂತ ಕಚೇರಿಯ ಕಟ್ಟಡ ಮತ್ತು ವಶಪಡಿಸಿಕೊಳ್ಳಲಾಗುವ ಖನಿಜ ದಾಸ್ತಾನಿಗೆ ಸ್ಟಾಕ್ ಯಾರ್ಡ್ ನಿರ್ಮಾಣ ಮತ್ತು ವೇಬ್ರಿಡ್ಜ್ ಸ್ಥಾಪನೆಗೆ ಉದ್ದೇಶಿಸಿ ಗುರುತಿಸಲಾಗಿರುವ ಎರಡು ಎಕರೆ ಪ್ರದೇಶ ಸಂಬಂಧ ಮಂಜೂರಾತಿ ಪ್ರಕ್ರಿಯೆಯು ತ್ವರಿತವಾಗಿ ನಡೆಯಬೇಕು’ ಎಂದು ಸೂಚಿಸಿದರು. 

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ, ‘ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಆರೋಗ್ಯ ಪೂರಕ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ ಶೇ 30ರಷ್ಟನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ. ಇದರಿಂದ ವಿಶೇಷವಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಆರೋಗ್ಯ ಸೌಕರ್ಯಗಳು ಲಭಿಸಿವೆ’ ಎಂದರು. 

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ರಮೇಶ್, ಸಚಿವರ ಆಪ್ತ ಕಾರ್ಯದರ್ಶಿ ವಿರೂಪಾಕ್ಷ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಲಕ್ಷ್ಮಮ್ಮ ಇತರರು ಇದ್ದರು. 

ಅಕ್ರಮ ಗಣಿ: 24 ಗಂಟೆಗಳಲ್ಲಿ ಕ್ರಮ

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಸಿ.ಪಾಟೀಲ ಅವರು, ‘ಜಿಲ್ಲೆಯಲ್ಲಿ ಜಾಗವನ್ನು ಒತ್ತುವರಿ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ನಾನು ಹೇಳಲಾರೆ. ಆದರೆ, ನನ್ನ ಗಮನಕ್ಕೆ ಬಂದಿಲ್ಲ. ನಾನು ಎಂಟು ಗಣಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಎಲ್ಲರೂ ಅವರಿಗೆ ನಿಗದಿಪಡಿಸಿರುವ ಜಾಗದಲ್ಲೇ ನಡೆಸುತ್ತಿದ್ದಾರೆ. ಒಂದು ವೇಳೆ ಉಲ್ಲಂಘಟನೆ ನಡೆಯುತ್ತಿರುವ ಬಗ್ಗೆ ನೇರವಾಗಿ ನನ್ನ ಗಮನಕ್ಕೆ ತಂದರೆ ಸಾಕು. 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು. 

‘ಕೋವಿಡ್‌ನಿಂದಾಗಿ ರಾಜಧನ ಸಂಗ್ರಹ ಸ್ವಲ್ಪ ಕುಂಠಿತವಾಗಿದೆ. ಆರ್ಥಿಕ ವರ್ಷ ಮುಗಿಯಲು ಇನ್ನೂ ಮೂರು ತಿಂಗಳಿದ್ದು, ಸಂಗ್ರಹಣೆ ಚೇತರಿಸಿಕೊಳ್ಳಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು