ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಪರಿಷತ್‌ ಚುನಾವಣೆ: ಶಿಕ್ಷಕರಿಂದ ಕಾಂಗ್ರೆಸ್‌ಗೆ ಬೆಂಬಲ; ವೆಂಕಟೇಶ್‌ ವಿಶ್ವಾಸ

Published 31 ಮೇ 2024, 16:00 IST
Last Updated 31 ಮೇ 2024, 16:00 IST
ಅಕ್ಷರ ಗಾತ್ರ

ಚಾಮರಾಜನಗರ: ಜೂನ್‌ 3ರಂದು ನಡೆಯಲಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜಿಲ್ಲೆಯ ಶಿಕ್ಷಕ ಬಂಧುಗಳು ಕಾಂಗ್ರೆಸ್‌ ಅಭ್ಯರ್ಥಿ ಮರಿತಿಬ್ಬೇಗೌಡ ಅವರನ್ನು ಬೆಂಬಲಿಸಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಚ್‌.ಎ.ವೆಂಕಟೇಶ್ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುತ್ತಾ ಬಂದಿದೆ. ಶಿಕ್ಷಕರು, ಉಪನ್ಯಾಸಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 1,240 ಪ್ರಾಧ್ಯಾಪಕರ ಮತ್ತು 330 ಪ್ರಾಂಶುಪಾಲರ ನೇಮಕಾತಿ ಪಕ್ರಿಯೆ ಕೊನೆಯ ಹಂತದಲ್ಲಿದೆ. ಪಟ್ಟಿ ಸಿದ್ಧವಾಗಿದ್ದು, ಲೋಕಸಭಾ ಚುನಾವಣೆ ನೀತಿ ಸಂಹಿತೆ ಮುಕ್ತಾಯದ ನಂತರ ಪ್ರಕಟವಾಗಿದೆ’ ಎಂದು ಹೇಳಿದರು. 

‘ಖಾಲಿಯಾಗಿರುವ ಶಿಕ್ಷಕರ ಹುದ್ದೆ ಸೇರಿದಂತೆ ಇತರ ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು ಎಂದು ನಾವು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಅದರಂತೆ ನೇಮಕಾತಿಯನ್ನೂ ಸರ್ಕಾರ ಮಾಡಲಿದೆ. ಬಿಜೆಪಿ, ಜೆಡಿಎಸ್‌ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಯಾವ ಅನುಕೂಲವನ್ನೂ ಮಾಡಿಲ್ಲ’ ಎಂದು ದೂರಿದರು. 

‘ಕಾಂಗ್ರೆಸ್‌ ಸರ್ಕಾರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಬೋಧಕರ ಸಂಬಳ ಹೆಚ್ಚಿಸಿದೆ. ಸೇವಾ ಭದ್ರತೆ ನೀಡಲೂ ಚಿಂತನೆ ಮಾಡುತ್ತಿದೆ. ಶಿಕ್ಷಕರು ಯಾವುದೇ ಆಮಿಷಕ್ಕೆ ಒಳಗಾಗದೆ ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ’ ಎಂದರು. 

‘ಬಿಜೆಪಿ ಜೆಡಿಎಸ್‌ನದ್ದು ಅಪವಿತ್ರ ಮೈತ್ರಿ ಎಂಬುದು ಶಿಕ್ಷಕರಿಗೂ ಗೊತ್ತಿದೆ. ಚುನಾವಣೆಯ ಬಳಿಕ ಮೈತ್ರಿ ಉಳಿಯುವುದಿಲ್ಲ. ಅವರು ಲಕ್ಷ್ಮಿ ಪುತ್ರನನ್ನು ಅಭ್ಯರ್ಥಿ ಮಾಡಿದ್ದಾರೆ. ಕಾಂಗ್ರೆಸ್‌ ಸರಸ್ವತಿ ಪುತ್ರನಿಗೆ ಟಿಕೆಟ್ ಕೊಟ್ಟಿದೆ. ಇದು ಉದ್ಯಮಿಗಳ ಕ್ಷೇತ್ರವಲ್ಲ. ಶಿಕ್ಷಕರ ಕ್ಷೇತ್ರ. ನಮ್ಮ ಅಭ್ಯರ್ಥಿ ಮರಿತಿಬ್ಬೇಗೌಡರು ಸದನದಲ್ಲಿ ಶಿಕ್ಷಕರ ಪರವಾಗಿ ಸಮರ್ಥವಾಗಿ ಮಾತನಾಡಿದ್ದಾರೆ. ಅವರನ್ನು ಗೆಲ್ಲಿಸುವುದರ ಮೂಲಕ ಪಕ್ಷದ ಕೈ ಬಲಪಡಿಸಬೇಕು’ ಎಂದು ವೆಂಕಟೇಶ್‌ ಮನವಿ ಮಾಡಿದರು. 

ಜಿಲ್ಲಾ ಕಾಂಗ್ರೆಸ್‌ ಸಮಿತಿ ಮತ್ತು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎ.ಮಹದೇವಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಮಹದೇವ್, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಅಸ್ಗರ್‌ ಮುನ್ನಾ, ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಕಾರ್ಯಾಧ್ಯಕ್ಷ ಮಧುಸೂದನ್ ಭಾಗವಹಿಸಿದ್ದರು. 

ವಿವಿಧೆಡೆ ಮತಯಾಚನೆ
ಕೆಪಿಸಿಸಿ ವಕ್ತಾರ ವೆಂಕಟೇಶ್‌ ಅವರು ಶುಕ್ರವಾರ ನಗರದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮರಿತಿಬ್ಬೇಗೌಡರ ಪರ ಮತಯಾಚನೆ ಮಾಡಿದರು.  ‘ಕಳೆದ ಚುನಾವಣೆಯಲ್ಲಿ ಮರಿತಿಬ್ಬೇಗೌಡರಿಗೆ ಅತ್ಯಧಿಕ ಮತಗಳನ್ನು ನೀಡಿ ಆಶೀರ್ವಾದ ಮಾಡಿದ್ದರು. ಅದೇ ರೀತಿ ಈ ಬಾರಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಿಕೊಡಬೇಕು. ಕ್ಷೇತ್ರದಲ್ಲಿ ಅವರ ಪರ ಉತ್ತಮ ವಾತಾವರಣ ಇದೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಪರಿಹರಿಸುವ ಇಚ್ಚಾಶಕ್ತಿ ಇರುವುದು ಕಾಂಗ್ರೆಸ್‌ಗೆ ಮಾತ್ರ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT