ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಆರು ದಿನಗಳಲ್ಲಿ ₹3.24 ಕೋಟಿ ಆದಾಯ

ಲಾಡು ಮಾರಾಟದಿಂದ ₹1.13 ಕೋಟಿ, ಉತ್ಸವಗಳಿಂದ ₹90.25 ಲಕ್ಷ ಸಂಗ್ರಹ
Published 13 ಮಾರ್ಚ್ 2024, 6:41 IST
Last Updated 13 ಮಾರ್ಚ್ 2024, 6:41 IST
ಅಕ್ಷರ ಗಾತ್ರ

ಮಹದೇಶ್ವರಬೆಟ್ಟ: ಇಲ್ಲಿನ ಯಾತ್ರಾ ಸ್ಥಳ ಮಲೆ ಮಹದೇಶ್ವರ ಸ್ವಾಮಿ ದೇವಾಲಯಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ನಡೆದ ಆರು ದಿನಗಳ ಅವಧಿಯಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ₹3.24 ಕೋಟಿ ಆದಾಯ ಬಂದಿದೆ. 

ಹುಂಡಿ ಕಾಣಿಕೆ, ವಸತಿ ಗೃಹಗಳ ಶುಲ್ಕ ಬಿಟ್ಟು ಇತರೆ ಸೇವೆಗಳು, ಲಾಡು ಮಾರಾಟ ಸೇರಿದಂತೆ ವಿವಿಧ ಮೂಲಗಳಿಂದ ಮಾರ್ಚ್‌ 6ರಿಂದ ಜಾತ್ರೆ ಮುಕ್ತಾಯಗೊಂಡ 11ರವರೆಗೆ ಸಂಗ್ರಹವಾಗಿರುವ ಆದಾಯವನ್ನು ಪ್ರಾಧಿಕಾರ ಲೆಕ್ಕಹಾಕಿದೆ.   

ಆರು ದಿನಗಳ ‍ಪೈಕಿ 10ರಂದು (ಭಾನುವಾರ) ಗರಿಷ್ಠ ₹87.92 ಲಕ್ಷ ಆದಾಯ ಬಂದಿದೆ. ಜಾತ್ರೆಯ ಮೊದಲ ದಿನ, ಅಂದರೆ 7ರಂದು ₹30.21 ಲಕ್ಷ ಹಣ ಸಂಗ್ರಹವಾಗಿದೆ. 

ಉಳಿದಂತೆ, ‘6ರಂದು ₹40.17 ಲಕ್ಷ, 8ರಂದು ₹70.85 ಲಕ್ಷ, 9ರಂದು ₹62.78 ಲಕ್ಷ ಹಾಗೂ ರಥೋತ್ಸವದ ದಿನವಾದ ಸೋಮವಾರ (ಮಾರ್ಚ್‌ 11) ₹32.21 ಲಕ್ಷ ಆದಾಯ ಸಂಗ್ರಹವಾಗಿದೆ’ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.  

ಉತ್ಸವಗಳು, ವಿಶೇಷ ಪ್ರವೇಶ ಶುಲ್ಕ, ಲಾಡು ಮಾರಾಟ, ಮಾಹಿತಿ ಕೇಂದ್ರ, ಸೇವೆಗಳು, ಮಿಶ್ರ ಪ್ರಸಾದ, ಕಲ್ಲು ಸೆಕ್ಕರೆ, ತೀರ್ಥ ಪ್ರಸಾದ, ಬ್ಯಾಗ್, ಪುದುವಟ್ಟು, ಅಕ್ಕಿಸೇವೆ, ಗುತ್ತಿಗೆ ಹಾಗೂ ಇತರೆ ಮೂಲಗಳಿಂದ ಬಂದಿರುವ ಆದಾಯ ಇದಾಗಿದೆ. 

ಲಾಡು ಪ್ರಸಾದ ಮಾರಾಟದಿಂದಲೇ ಆರು ದಿನಗಳಲ್ಲಿ ₹1.13 ಕೋಟಿ ಆದಾಯ ಸಂಗ್ರಹವಾಗಿದೆ. ಚಿನ್ನದ ತೇರು ಸೇರಿದಂತೆ ಇತರೆ ಉತ್ಸವಗಳಿಂದಾಗಿ ₹90.25 ಲಕ್ಷ ಬಂದಿದೆ. ವಿಶೇಷ ಪ್ರವೇಶ ಶುಲ್ಕದಿಂದ ₹67.70 ಲಕ್ಷ, ಮಿಶ್ರ ಪ್ರಸಾದದಿಂದ ₹11.93 ಲಕ್ಷ, ಗುತ್ತಿಗೆಯಿಂದ ₹10.52 ಲಕ್ಷ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  

ಓಕುಳಿಯ ಪೂಜಾ ಸೇವೆ

ಈ ಮಧ್ಯೆ ಶಿವರಾತ್ರಿ ಜಾತ್ರೆ ಮುಕ್ತಾಯಗೊಂಡ ಮಾರನೇ ದಿನ ಮಂಗಳವಾರ ಬೆಟ್ಟದಲ್ಲಿ ಪಟ್ಟಗಾರ ರಾಯಣ್ಣ ನಾಯಕನ ವಂಶಸ್ಥರಿಂದ ಪಡಿತರದ ಓಕುಳಿಯ ಪೂಜಾ ಸೇವೆ ನಡೆಯಿತು.  ರಾತ್ರಿ ಮಹದೇಶ್ವರಸ್ವಾಮಿಗೆ ಪೂಜೆ ಅಭಿಷೇಕ ನೆರವೇರಿಸಿದ ಬಳಿಕ ಮಹದೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಬಸವ ವಾಹನದಲ್ಲಿ ಪ್ರತಿಷ್ಠಾಪಿಸಿ ದೂಪ ದೀಪದ ಆರತಿಯಿಂದ ಪೂಜೆ ವಿಶೇಷ ಸಲ್ಲಿಸಲಾಯಿತು.  ಬಳಿಕ ಛತ್ರಿ ಚಾಮರಗಳು ದೀವಟಿಗೆ ಸತ್ತಿಗೆ ಸೇರಿದಂತೆ ನಂದಿಕಂಬಗಳ ಸೇವೆ ಮಾಡಿ ದೇವಾಲಯದ ಒಳಾಂಗಣದಲ್ಲಿ ಪ್ರದಕ್ಷಿಣೆ ಹಾಕಲಾಯಿತು.  ನಂತರ ಪಟ್ಟಗಾರ ರಾಯಣ್ಣ ನಾಯಕನ ಮಂಟಪಕ್ಕೆ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಮೆರವಣಿಗೆ ಸಾಗಿತು.  ನಂದಿವಾಹನ ಸಹಿತ ಪಟ್ಟಗಾರ ರಾಯಣ್ಣ ನಾಯಕನ ಕುಲಸ್ಥರು ಸಂಕಲ್ಪ ಮಾಡಿ ಶಿವ ನಾಮವಳಿಯ ಶತಬಿಲ್ವಾರ್ಚನೆ ನೆರವೇರಿಸಿದರು. ಮಂಗಳಾರತಿ ಬೆಳಗಿ ಸೇವೆ ಸಲ್ಲಿಸಿ ಅರಿಸಿನ ನೀರಿನಿಂದ ಸ್ವಾಮಿಗೆ ಹಾಗೂ ಭಕ್ತವೃಂದಕ್ಕೆ ಓಕುಳಿಯನ್ನು ಪ್ರೋಕ್ಷಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT