ಭಾನುವಾರ, ಆಗಸ್ಟ್ 1, 2021
27 °C
ಮಹದೇಶ್ವರ ಬೆಟ್ಟ: ವ್ಯಾಪಾರಿಗಳು, ಪ್ರಾಧಿಕಾರದ ಕೆಲಸ ಕಳೆದುಕೊಂಡ ಹೊರಗುತ್ತಿಗೆ ನೌಕರರಿಗೆ ಕೆಲಸ

ಚಾಮರಾಜನಗರ | ಸಂಕಷ್ಟದಲ್ಲಿರುವವರಿಗೆ ನರೇಗಾ ವರದಾನ

ಜಿ.ಪ್ರದೀಪ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಕೋವಿಡ್‌–19 ಹಾವಳಿಯಿಂದ ವ್ಯಾಪಾರ ಇಲ್ಲದೆ ನಷ್ಟ ಅನುಭವಿಸುತ್ತಿರುವ ವ್ಯಾಪಾರಿಗಳು ಹಾಗೂ ಕೆಲಸ ಕಳೆದುಕೊಂಡಿರುವ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಹೊರಗುತ್ತಿಗೆ ನೌಕರರು ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. 

ಪ್ರಸಿದ್ಧ ತೀರ್ಥಕ್ಷೇತ್ರವಾಗಿರುವ ಮಹದೇಶ್ವರ ಬೆಟ್ಟದ ಹಲವಾರು ಜನರು ವ್ಯಾಪಾರವನ್ನೇ ತಮ್ಮ ಜೀವನವನ್ನಾಗಿಸಿಕೊಂಡಿದ್ದಾರೆ. ಸ್ಥಳೀಯರಲ್ಲಿ ಹಲವರು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸಿಕೊಂಡು ಜೀವನ ನಡೆಸುತ್ತಿದ್ದರು. ಕೋವಿಡ್‌–19 ತಡೆಗೆ ಹೇರಲಾಗಿದ್ದ ಲಾಕ್‌ಡೌನ್‌ ಅವಧಿಯಲ್ಲಿ ದೇವಸ್ಥಾನ ಕಾರ್ಯನಿರ್ವಹಿಸದೇ ಇದ್ದುದರಿಂದ ಹೊರಗುತ್ತಿಗೆ ನೌಕರರಿಗೆ ಕೆಲಸಕ್ಕೆ ಬರದಂತೆ ಸೂಚಿಸಲಾಗಿತ್ತು. ಭಕ್ತರು ಬಾರದೇ ಇದ್ದುದರಿಂದ ಸ್ಥಳೀಯವಾಗಿ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟು ವ್ಯಾಪಾರ ಮಾಡಿಕೊಂಡಿದ್ದವರು ಸಂಪಾದನೆ ಇಲ್ಲದೇ ಕಷ್ಟಕ್ಕೆ ಸಿಲುಕಿದ್ದರು.

ಇವರೆಲ್ಲ ಈಗ ನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ವಲ್ಪ ಸಂಪಾದನೆಯನ್ನೂ ಮಾಡುತ್ತಿದ್ದಾರೆ. 

‘ನಾಲ್ಕೈದು ತಿಂಗಳುಗಳಿಂದ ವ್ಯಾಪಾರ ಇಲ್ಲದೆ ಜೀವನ ಸಾಗಿಸುವುದು ತುಂಬಾ ಕಷ್ಟಕರವಾಗಿತ್ತು. ವ್ಯಾಪಾರ ಮಾಡುತ್ತಿದ್ದ ಸಂದರ್ಭದಲ್ಲಿ ನೆಮ್ಮದಿಯಿಂದ ಜೀವನವನ್ನು ಸಾಗಿಸುತಿದ್ದೆವು. ಕೋವಿಡ್‌–19 ತಂದೊಡ್ಡಿರುವ ಸಂಕಷ್ಟದಿಂದಾಗಿ ಮನೆಯಲ್ಲಿ ಚಹಾ ಪುಡಿ ತೆಗೆದುಕೊಳ್ಳಲೂ ಹಣ ಸಿಗದಂತಾಗಿತ್ತು. ಪ್ರತಿ ದಿನ ಸಾವಿರಾರು ರೂಪಾಯಿ ನೋಡುತಿದ್ದ ನಮಗೆ ಇಂದು ಕೋರೋನಾ ಜೀವನದ ಪಾಠ ಕಲಿಸಿದೆ. ನರೇಗಾ ಅಡಿಯಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಮೈಮಗ್ಗಿ ಕೆಲಸ ಮಾಡುತ್ತಿದ್ದೇವೆ. ದಿನಕ್ಕೆ ₹275 ಕೂಲಿ ಸಿಗುತ್ತಿದೆ’ ಎಂದು ಸ್ಥಳೀಯ ವ್ಯಾಪಾರಿಗಳಾದ ವಿಜಯ್ ಕುಮಾರ್ ಹಾಗೂ ನಾಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಈ ಹಿಂದೆ ಕೆಲಸ ಮಾಡಿ ಅಭ್ಯಾಸ ಇಲ್ಲದೇ ಇದ್ದುದರಿಂದ ಮೊದಲು ನಾಲ್ಕೈದು ದಿನಗಳು ಮೈ ಕೈ ನೋವು ಕಾಣಿಸಿಕೊಂಡಿತ್ತು. ನಂತರದ ದಿನಗಳಲ್ಲಿ ಅಭ್ಯಾಸ ಆಯಿತು. ಒಂದೂವರೆ ತಿಂಗಳಿನಿಂದ ಕಾಡಿನಲ್ಲಿರುವ ಕೆರೆಗಳ ಹೂಳೆತ್ತುವ ಕೆಲಸವನ್ನು ಮಾಡುತ್ತಿದ್ದೇವೆ. ಮಾಡುವಂತಹ ಕೆಲಸದಲ್ಲಿ ಶ್ರದ್ಧೆ ಇದ್ದರೆ ಯಾವ ಕೆಲಸ ಆದರೇನು? ನರೇಗಾ ಕೆಲಸ ಇಲ್ಲದಿದ್ದರೆ ನಮ್ಮ ಹೊಟ್ಟೆಗೆ ತಣ್ಣೀರ ಬಟ್ಟೆನೆ ಗತಿಯಾಗುತ್ತಿತ್ತು’ ಎಂದು ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು