ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ನೆಟ್ ವರ್ಕ್ ಸಮಸ್ಯೆ– ಗ್ರಾಮಸ್ಥರ ಪಡಿಪಾಟಲು

ತಾಲ್ಲೂಕಿನ ಗಡಿಭಾಗ, ಅರಣ್ಯ ಅಂಚಿನಲ್ಲಿ ಮೊಬೈಲ್ ಸಿಗ್ನಲ್ ಇಲ್ಲ
Last Updated 4 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಗಡಿಭಾಗಗಳಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ತಲೆದೋರಿದ್ದು ವಿದ್ಯಾರ್ಥಿಗಳು, ಉದ್ಯೋಗಸ್ಥರು ಮತ್ತು ಗ್ರಾಮಸ್ಥರು ನಿತ್ಯವೂ ಪರದಾಡುತ್ತಿದ್ದಾರೆ.

ತಾಲ್ಲೂಕು ವ್ಯಾಪ್ತಿಯ, ಅರಣ್ಯದಂಚಿನ ಗ್ರಾಮ ಮತ್ತು ಕುಗ್ರಾಮ ಸೇರಿದಂತೆ ಅನೇಕ ಕಡೆ ಈ ಸಮಸ್ಯೆ ಇದೆ. ಗುಡ್ಡಗಾಡು ಪ್ರದೇಶದಲ್ಲಿರುವ ಮನೆಗಳಿಗೆ ಸಂಪರ್ಕ ಸಾಧನ ಬಳಕೆ ಕಷ್ಟವಾಗಿದೆ. ಅನಾರೋಗ್ಯ ಪೀಡಿತ, ತುರ್ತು ಸಂದರ್ಭ, ಸಾವು ನೋವಿನ ಸಂದರ್ಭದಲ್ಲೂ ಮಾಹಿತಿ ರವಾನೆಗೆ ಮೊಬೈಲ್ ಹಿಡಿದು ಗುಡ್ಡ ಅಥವಾ ಮರದ ಮೇಲೆ ಅಥವಾ ಮನೆ ಮೇಲೆ ಏರಬೇಕಾದ ಸ್ಥಿತಿ ಉಂಟಾಗಿದೆ.

ತಾಲ್ಲೂಕಿನ ಯರೆಕಟ್ಟೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಬಹುತೇಕ ಗ್ರಾಮಸ್ಥರು ಇದೇ ಸಮಸ್ಯೆ ಮುಂದಿಟ್ಟಿದ್ದರು.

'ಜಿಲ್ಲಾಧಿಕಾರಿ ಅವರೂ ಅಂದಿನ ದಿನ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಎದುರಿಸಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು' ಎಂದು ಯರೆಕಟ್ಟೆ ಗ್ರಾಮದ ಚೆಲುವ ಅವರು ಹೇಳಿದರು.

ಮರ, ಗುಡ್ಡ ಏರಿದರೆ ಮಾತ್ರ ನೆಟ್ ವರ್ಕ್: ತಾಲ್ಲೂಕಿನ ಯರೆಕಟ್ಟೆ, ಕರಳಕಟ್ಟೆ, ಜಾಗೇರಿ, ಜಕ್ಕಳಿ, ಅರೇಪಾಳ್ಯ, ಚಿಕ್ಕಲ್ಲೂರಿನ ರಾಚಪ್ಪಾಜಿನಗರ, ಕೊತ್ತನೂರು, ಮರಿಪುರ, ಚೆನ್ನಿಪುರದೊಡ್ಡಿ, ಹಳೇ ಕೋಟೆ, ಶೆಲುವೈಪುರ, ಶಾಂತಿ ನಗರ, ಡಿ.ಜಿ.ದೊಡ್ಡಿ, ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಹೆಚ್ಚಿದೆ. ಇದರ ಬಗ್ಗೆ ಯಾವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೂ ತೆಲೆಕೆಡಿಸಿಕೊಳ್ಳುವುದಿಲ್ಲ ಎಂದು ಗ್ರಾಮಸ್ಥರು ದೂರಿದರು.

ಮೊಬೈಲ್‍ನಲ್ಲಿ ಮಾತನಾಡಬೇಕಾದರೆ ಗ್ರಾಮದಲ್ಲಿ ಕೆಲವು‌ ನಿರ್ದಿಷ್ಟ ಜಾಗದಲ್ಲಿ ಹೋಗಿ ನಿಲ್ಲಬೇಕು. ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆ ಸಂದರ್ಭದಲ್ಲಿ ನಗರ ಪ್ರದೇಶ ಸಂಬಂಧಿಗಳ ಮನೆಯಲ್ಲಿ ಅಥವಾ ಸ್ನೇಹಿತರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಯರೆಕಟ್ಟೆ ಗ್ರಾಮದಲ್ಲಿ ಮಧ್ಯರಾತ್ರಿ ಗರ್ಭಿಣಿಯೊಬ್ಬರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. 108 ಆಂಬುಲೆನ್ಸ್‌‌‌ಗೆ ಕರೆ ಮಾಡಲು ಗ್ರಾಮಸ್ಥರು ಗುಡ್ಡ ಏರಿದರೂ ನೆಟ್ ವರ್ಕ್ ಸಿಗಲಿಲ್ಲ. ನಂತರ ಎತ್ತಿನ ಗಾಡಿ ಮೇಲೆ ಕರೆದೊಯ್ದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆನೆಗಳು ಜಮೀನುಗಳಿಗೆ ದಾಳಿ ಮಾಡಿದ ಸಂದರ್ಭಗಳಲ್ಲೂ ಇಂತಹ ಪರಿಸ್ಥಿತಿ ಎದುರಿಸಿದ್ದಾರೆ.

***
‘ನಾವೂ ಮನುಷ್ಯರೇ. ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಇರುವ ಕೆಲವು ಸೌಲಭ್ಯಗಳು ನಮ್ಮ ಗ್ರಾಮ ತಲುಪುತ್ತಿಲ್ಲ. ನೆಟ್ ವರ್ಕ್ ಇಲ್ಲದೆ ಯಾರಿಗೂ ನಮ್ಮ ಸಮಸ್ಯ ಹೇಳಲು ಆಗುವುದಿಲ್ಲ’

–ಸೌಮ್ಯ, ಕರಳಕಟ್ಟೆ‌

***

‘ನೆಟ್ ವರ್ಕ್ ಸಮಸ್ಯೆಯಿಂದ ಬೇರೆಯವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ದೂರು‌ ನೀಡಿದರೂ ಪ್ರಯೋಜನವಾಗಿಲ್ಲ. ಈ ಸಮಸ್ಯೆಯಿಂದ ನಮಗೆ ಯಾವಾಗ ಮುಕ್ತಿ ಸಿಗುತ್ತದೆಯೋ ತಿಳಿಯದು’

-ಮುಗುಗೇಶ್, ಅರೇಪಾಳ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT