ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಹಲಸು ಸೀಸನ್‌ ಶುರು, ಮಾರಾಟ ಜೋರು

ಬರಗಾಲ: ಇಳುವರಿ ಕಡಿಮೆ, ಇನ್ನೂ ನಾಲ್ಕೈದು ತಿಂಗಳು ಹಣ್ಣುಗಳು ಲಭ್ಯ
Published 19 ಮೇ 2024, 6:53 IST
Last Updated 19 ಮೇ 2024, 6:53 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಹಲಸಿನ ಸೀಸನ್‌ ಆರಂಭವಾಗಿದೆ. ಕಳೆದ ವರ್ಷ ಮಳೆ ಕೊರತೆಯ ಕಾರಣಕ್ಕೆ ಉಂಟಾದ ಬರಗಾಲವು ಈ ಬಾರಿ ಹಲಸಿನ ಋತು ಆರಂಭವನ್ನು ಕೊಂಚ ಮುಂದೂಡಿದೆ. ಅಲ್ಲದೆ, ಇಳುವರಿ ಕಡಿಮೆಯಾಗುವಂತೆ ಮಾಡಿದೆ. 

‘ಕಳೆದ ವರ್ಷದ ಸೀಸನ್‌ನಲ್ಲಿ ಹಲಸಿನ ಇಳುವರಿ ಭರ್ಜರಿಯಾಗಿತ್ತು. ಹಿಂದಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದ ಪರಿಣಾಮ ಫಸಲು ಹೆಚ್ಚಾಗಿತ್ತು. ಈ ವರ್ಷ ಕಡಿಮೆ ಇದೆ. ಗಿಡಗಳಲ್ಲಿ ಗೊಂಚಲು ಗೊಂಚಲಾಗಿ ಹಲಸು ಕಂಡು ಬರುತ್ತಿಲ್ಲ’ ಎಂದು ಹೇಳುತ್ತಾರೆ ರೈತರು. 

ಮಾರಾಟ ಜೋರು: ಮಳೆ ಆರಂಭವಾಗುತ್ತಿದ್ದಂತೆಯೇ ಮರಗಳಲ್ಲಿ ಬಿಟ್ಟಿದ್ದ ಹಲಸಿನ ಕಾಯಿಗಳು ಹಣ್ಣಾಗುವುದಕ್ಕೆ ಆರಂಭವಾಗಿದೆ. ಚಾಮರಾಜನಗರದ ದೊಡ್ಡರಾಯಪೇಟೆ ಕ್ರಾಸ್‌, ಚಂದಕವಾಡಿ, ಬಿಳಿಗಿರಿರಂಗನಬೆಟ್ಟ ಸೇರಿದಂತೆ ವಿವಿಧ ಕಡೆಗಳಲ್ಲಿ ಎರಡು ವಾರಗಳ ಹಿಂದಿನಿಂದಲೇ ಹಲಸಿನ ಹಣ್ಣಿನ ಮಾರಾಟ ಆರಂಭವಾಗಿತ್ತು. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳು ಬರುತ್ತಿರಲಿಲ್ಲ. ಕೆಲವು ದಿನಗಳಿಂದ ಹೆಚ್ಚೆಚ್ಚು ಹಣ್ಣುಗಳು ಲಭ್ಯವಾಗುತ್ತಿದ್ದು, ಮಾರಾಟ ಬಿರುಸುಗೊಂಡಿದೆ. 

ಚಾಮರಾಜನಗರ ತಾಲ್ಲೂಕಿನ ಆಲೂರು, ಕೂಡ್ಲೂರು ಭಾಗ, ಚಂದಕವಾಡಿ ಭಾಗದಲ್ಲಿ ಬೆಳೆಯುವ ಹಲಸಿನ ಹಣ್ಣುಗಳು ಹೆಚ್ಚು ರುಚಿಯಾಗಿರುತ್ತವೆ. ಹಾಗಾಗಿ, ಇವಕ್ಕೆ ಬೇಡಿಕೆ ಹೆಚ್ಚು.

ಸಂತೇಮರಹಳ್ಳಿ ಕಡೆಗೆ ಹೋಗುವ ಹೆದ್ದಾರಿಯಲ್ಲಿ ದೊಡ್ಡರಾಯಪೇಟೆ ಕ್ರಾಸ್‌ ಬಳಿ ಹಲಸಿನ ಹಣ್ಣು ಮಾರಾಟ ಮಾಡುವವರು ಕಾಣಸಿಗುತ್ತಾರೆ. ಬಿಳಿಗಿರಿರಂಗನಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಚಂದಕವಾಡಿ ಬಳಿಯಲ್ಲೂ ಹಲಸಿನ ಹಣ್ಣು ಮಾರಾಟ ಮಾಡುವುದನ್ನೇ ಕಾಯಕ ಮಾಡಿಕೊಂಡವರನ್ನು ಕಾಣಬಹುದು. ಪ್ರವಾಸಿ ತಾಣಗಳಲ್ಲಿ, ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರಸ್ತೆಗಳ ಬದಿ ವ್ಯಾಪಾರಿಗಳು ಹಲಸಿನ ಕಾಯಿ, ಹಣ್ಣುಗಳನ್ನು ರಾಶಿ ಹಾಕಿ ಮಾರಾಟ ಮಾಡುತ್ತಾರೆ.  

ಸಾಮಾನ್ಯವಾಗಿ ಹಣ್ಣುಗಳನ್ನು ಮಾರಾಟ ಮಾಡುವ ಇವರು, ಹಲಸಿನಕಾಯಿ ಸೀಸನ್‌ ಆರಂಭವಾಗುತ್ತಲೇ, ಹಲಸಿನ ಮಾರಾಟ ಆರಂಭಿಸುತ್ತಾರೆ. ಸೀಸನ್‌ ಆರಂಭದಲ್ಲಿ ಬೆಲೆ ಕೊಂಚ ದುಬಾರಿ ಇರುತ್ತದೆ. ಮಳೆ ಶುರುವಾಗಿ ಆವಕ ಹೆಚ್ಚಾಗುತ್ತಿದ್ದಂತೆಯೇ ಬೆಲೆ ಕಡಿಮೆಯಾಗುತ್ತದೆ. 

ಎರಡು ವಾರಗಳ ಹಿಂದೆ ಕೆಲವು ಕಡೆಗಳಲ್ಲಿ ಒಂದು ತೊಳೆಗೆ ₹4ರವರೆಗೂ ಹೇಳುತ್ತಿದ್ದರು. ಬಿಳಿಗಿರಿರಂಗನಬೆಟ್ಟದಲ್ಲಿ ಈಗಲೂ ಅಷ್ಟೇ ಇದೆ. ಉಳಿದ ಕಡೆಗಳಲ್ಲಿ ಸದ್ಯ ತೊಳೆಗೆ ₹2 ಇದೆ. ಕೆಲವು ವ್ಯಾಪಾರಿಗಳು ಹಣ್ಣಿನಿಂದ ತೊಳೆ ಬಿಡಿಸಿ ಮಾರಾಟ ಮಾಡಿದರೆ, ಇನ್ನೂ ಕೆಲವರು, 10–12 ತೊಳೆಗಳಿರುವ ಹಣ್ಣಿನ ತುಂಡನ್ನೇ ಕೊಡುತ್ತಿದ್ದಾರೆ. ಇಂತಹ ಒಂದು ತುಂಡಿಗೆ ₹20ರವರೆಗೆ ಇದೆ. ಇಡೀ ಹಲಸಿನ ಹಣ್ಣಿಗೆ ಗಾತ್ರಕ್ಕೆ ಅನುಸಾರವಾಗಿ ಬೆಲೆ ಹೇಳುತ್ತಿದ್ದಾರೆ. 

‘ಈಗಷ್ಟೇ ಹಣ್ಣುಗಳು ಬರುವುದಕ್ಕೆ ಆರಂಭವಾಗಿದೆ. ಮಳೆ ಸುರಿಯಲು ಆರಂಭವಾದರೆ, ಹಣ್ಣಿನ ರುಚಿ ಇನ್ನಷ್ಟು ಹೆಚ್ಚುತ್ತದೆ. ನಮ್ಮಲ್ಲಿ ₹50ರಿಂದ ಹಿಡಿದು ₹300 ವರೆಗಿನ ಹಲಸಿನ ಕಾಯಿ, ಹಣ್ಣುಗಳು ಲಭ್ಯವಿವೆ’ ಎಂದು ದೊಡ್ಡರಾಯಪೇಟೆ ಕ್ರಾಸ್‌ ಬಳಿ ಮಳಿಗೆ ಇಟ್ಟಿರುವ ಮಹದೇವಯ್ಯ ಕಾಡಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು. 

'15 ವರ್ಷಗಳಿಂದ ಮಾರಾಟ ಮಾಡುತ್ತಿದ್ದೇನೆ. ಆಲೂರು ಸೇರಿದಂತೆ ಎಲ್ಲಿ ಹಲಸಿನಕಾಯಿ ಲಭ್ಯ ಇದೆಯೋ ಅಲ್ಲಿಂದ ಖರೀದಿ ಮಾಡುತ್ತೇನೆ. ಕೆಲವು ಕಡೆಗಳಲ್ಲಿ ನಾವೇ ಮರಗಳನ್ನು ಗುತ್ತಿಗೆಗೆ ಪಡೆದಿದ್ದೇನೆ. ಒಮ್ಮೆ ಹಲಸು ಸಿಗಲು ಆರಂಭಿಸಿದರೆ ಐದರಿಂದ ಆರು ತಿಂಗಳ ಕಾಲ ಸಿಗುತ್ತದೆ. ಈ ಬಾರಿ ಇಳುವರಿ ಸ್ವಲ್ಪ ಕಡಿಮೆಯಂತೆ ಕಾಣುತ್ತಿದೆ’ ಎಂದು ಅವರು ವಿವರಿಸಿದರು. 

ಬೆಲೆ ಹೆಚ್ಚಿಲ್ಲ: ‘ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಮಳೆ ಕೊರತೆಯಿಂದ ಹಲಸಿನ ವೃಕ್ಷಗಳಲ್ಲಿ ಇಳುವರಿ ಕಡಿಮೆಯಾಗಿದೆ. ಗುಣಮಟ್ಟದ ಕಾಯಿಗಳ ಕೊರತೆ ಇದೆ. ಹಾಗಾಗಿ ಬೆಲೆ ಹೇಳಿಕೊಳ್ಳುವಷ್ಟಿಲ್ಲ. ಸ್ಥಳೀಯ ಹಣ್ಣುಗಳು ಗ್ರಾಮೀಣಮಟ್ಟದಲ್ಲೇ ಮಾರಾಟವಾಗುತ್ತದೆ. ದೊಡ್ಡ ಕಾಯಿಗಳು ಕಾಣುತ್ತಿಲ್ಲ.  ಪ್ರತಿ ಕಾಯಿಗೆ ₹30 ರಿಂದ ₹50ರ ಬೆಲೆಯಲ್ಲಿ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ’ ಎಂದು ತಾಲ್ಲೂಕಿನ ಗೂಳಿಪುರ ಗ್ರಾಮದ ಬೆಳೆಗಾರ ಚಾಮುಂಡಿ ನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಜನಪ್ರಿಯವಾಗುತ್ತಿದೆ ಹಲಸು

ಜಿಲ್ಲೆಯಲ್ಲಿ ಹಲಸನ್ನು ಬೆಳೆಯಾಗಿ ಬೆಳೆಯುವವರು ಕಡಿಮೆ. ಆದರೆ ಇತ್ತೀಚೆಗೆ ವಿವಿಧ ತಳಿಗಳ ಹಲಸಿನ ಗಿಡಗಳನ್ನು ನೆಡುವವರ ಸಂಖ್ಯೆ ಹೆಚ್ಚಾಗಿದೆ.  ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಈಗಲೂ ನಾಟಿ ತಳಿಯ ಹಲಸಿನ ಗಿಡ ಮರಗಳೇ ಕಾಣಸಿಗುತ್ತಿವೆ. ಇತ್ತೀಚೆಗೆ ಹಲಸಿನ ಕಾಯಿ ಹಣ್ಣುಗಳಿಗೆ ಬೇಡಿಕೆ ಇರುವುದನ್ನು ಕಂಡುಕೊಂಡಿರುವ ಕೆಲವು ಕೃಷಿಕರು ಸಿದ್ದು ಹಲಸು ಚಂದ್ರಹಲಸು ಸೇರಿದಂತೆ ಆಕರ್ಷಕ ಬಣ್ಣದ ತೊಳೆ ಹೊಂದಿರುವ ವಿವಿಧ ರೀತಿಯ ಹೆಚ್ಚು ರುಚಿಯಾಗಿರುವ ಕಡಿಮೆ ಅವಧಿಯಲ್ಲಿ ಫಲಕೊಡುವ ಹಲಸಿನ ಗಿಡಗಳನ್ನು ನೆಡುತ್ತಿದ್ದಾರೆ.  ದಕ್ಷಿಣ ಕನ್ನಡ ಮಲೆನಾಡು ಕೇರಳ ಭಾಗದಲ್ಲಿ ಹಲಸು ಮೇಳಗಳನ್ನು ನಡೆಸಲಾಗುತ್ತದೆ. ಹಲಸಿನಿಂದ ಮಾಡಬಹುದಾದ ವಿವಿಧ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಅಂತಹ ಪ್ರಯತ್ನಗಳು ನಡೆದಿಲ್ಲ. ಆದರೆ ಹಲಸಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಹಲಸಿನಿಂದಲೂ ಆದಾಯ ಗಳಿಸಬಹುದು ಎಂಬುದನ್ನು ಕಂಡುಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT