ಚಾಮರಾಜನಗರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಸ್ಥಿತಿಗತಿಗಳು ಜಿಲ್ಲೆಯ ಬೇರೆ ತಾಲ್ಲೂಕುಗಳಲ್ಲಿರುವ ಕೆರೆ ಕಟ್ಟೆಗಳ ಸ್ಥಿತಿಗಿಂತ ಭಿನ್ನವಾಗಿಲ್ಲ.
ಕೆರೆಗಳಿಗೆ ನೀರು ಸಂಪರ್ಕ ಕಲ್ಪಿಸುವ ಕಾಲುವೆಗಳು ಒತ್ತುವರಿಯಿಂದ ಮುಚ್ಚಿರುವುದು, ನಿರ್ವಹಣೆ ಕೊರತೆ, ಹೂಳು, ಕಳೆಗಿಡಗಳ ಹಾವಳಿ, ಕೆರೆ ಅಂಗಳದ ಒತ್ತುವರಿ... ಹೀಗೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿವೆ.
ತಾಲ್ಲೂಕು ಆಡಳಿತ ನೀಡಿರುವ ಅಂಕಿ ಅಂಶಗಳ ಪ್ರಕಾರ ತಾಲ್ಲೂಕಿನಲ್ಲಿ ಒಟ್ಟು 160 ಕೆರೆಗಳಿವೆ. ಈ ಪೈಕಿ 28 ಕೆರೆಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ. 20 ಕೆರೆಗಳು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ, 12 ಕೆರೆಗಳು ಕಾವೇರಿ ನೀರಾವರಿ ನಿಗಮದ (ಜನ ಸಂಪನ್ಮೂಲ) ಒಡೆತನದಲ್ಲಿವೆ. ಉಳಿದವುಗಳು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುತ್ತವೆ.
ಕುಡಿಯುವ ನೀರಿನ ಉದ್ದೇಶಕ್ಕಾಗಿ ತಾಲ್ಲೂಕಿನ ಹಲವು ದೊಡ್ಡ ಕೆರೆಗಳಿಗೆ ಕಬಿನಿ ನದಿಯಿಂದ ನೀರು ತುಂಬಿಸುವ ಯೋಜನೆ ಜಾರಿಯಲ್ಲಿದೆ. ನಂಜನಗೂಡು ತಾಲ್ಲೂಕಿನ ಆಲಂಬೂರು ಗ್ರಾಮದ ಬಳಿ ಕಬಿನಿ ನದಿಯಿಂದ ನೀರೆತ್ತುವ ಆಲಂಬೂರು ಏತ ನೀರಾವರಿ ಯೋಜನೆಯ ವ್ಯಾಪ್ತಿಗೆ 15 ಕೆರೆಗಳು ಬರುತ್ತವೆ.
ನಾಲ್ಕು ಹಂತಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ನಾಲ್ಕನೇ ಹಂತದ ಯೋಜನೆ ವ್ಯಾಪ್ತಿಗೆ ಬರುವ ತಾಲ್ಲೂಕಿನ ಸುವರ್ಣನಗರ ಕೆರೆ ಹಾಗೂ ಅರಕಲವಾಡಿ ಕೆರೆಗಳಿಗೆ ಇನ್ನಷ್ಟೇ ನೀರು ಹರಿಯಬೇಕಿದೆ. ಎರಡನೇ ಹಂತದ ವ್ಯಾಪ್ತಿಗೆ ಸೇರಿದ ಆನೆ ಮಡುವಿನ ಕೆರೆಗೆ ಇನ್ನೂ ನೀರು ಹರಿದಿಲ್ಲ. ಈಗ ಯೋಜನೆಯನ್ನು ಪರಿಷ್ಕರಿಸಲಾಗುತ್ತಿದ್ದು, ನಂಜೇದೇವನಪುರದ ಕೆರೆಯಿಂದ ಆನೆಮಡುವಿನ ಕೆರೆಗೆ ನೀರು ತುಂಬಿಸುವ ಬಗ್ಗೆ ಕಾವೇರಿ ನೀರಾವರಿ ನಿಗಮ ಯೋಚಿಸುತ್ತಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಹುತ್ತೂರು ಕೆರೆಯಿಂದ ಪೈಪ್‌ಲೈನ್ ಮೂಲಕ ಈ ಕೆರೆಗಳಿಗೆ ನೀರು ಹರಿಯಲಿದೆ. ಪೈಪ್‌ಲೈನ್ ಕಾಮಗಾರಿ ಮುಕ್ತಾಯವಾಗಿದ್ದು, ಕಳೆದ ವರ್ಷ ಪ್ರಾಯೋಗಿಕವಾಗಿ ನೀರನ್ನೂ ಹರಿಸಲಾಗಿದೆ. ಆಲಂಬೂರು ಏತ ನೀರಾವರಿ ಯೋಜನೆಯ ಮೂರನೇ ಹಂತದಲ್ಲಿ ಬರುವ ಮಾಲಗೆರೆಗೆ ನೀರು ತುಂಬಿದ ನಂತರ ಹುತ್ತೂರು ಕೆರೆಗೆ ನೀರು ಹರಿಯಲಿದೆ. ಅದು ಭರ್ತಿಯಾದ ಬಳಿಕವಷ್ಟೇ ಈ ಕೆರೆಗಳಿಗೆ ಕಬಿನಿ ನೀರು ತಲುಪಲಿದೆ.
ಅರಕಲವಾಡಿ, ಯಾನಗಳ್ಳಿ ಸೇರಿದಂತೆ ಈ ಎರಡೂ ಕೆರೆಗಳ ಸುತ್ತಮುತ್ತಲಿರುವ ರೈತರು, ಕೆರೆಗೆ ನೀರು ಹರಿಯುವುದಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ನೀರು ಹರಿದರೆ ಅಂತರ್ಜಲ ವೃದ್ಧಿಯಾಗಿ ರೈತರಿಗೆ ಅನುಕೂಲವಾಗಲಿದೆ ಎಂಬುದು ಅವರ ಅಭಿಪ್ರಾಯ.
‘ಅರಕಲವಾಡಿ ಕೆರೆಯು ಅಂದಾಜು 95 ಎಕರೆ ವಿಸ್ತಾರವಾಗಿದೆ. ಕೆರೆ ತುಂಬದೇ ಎರಡು ದಶಕಗಳೇ ಕಳೆಯಿತು. ಕೆರೆ ತುಂಬಿಸುವ ಯೋಜನೆಯಿಂದ ಸುತ್ತಮುತ್ತಲಿನ ಐದು ಹಳ್ಳಿಗಳ ಜನರಿಗೆ ಅನುಕೂಲವಾಗಿದೆ. ಆದರೆ, ಪೈಪ್‌ಲೈನ್ ಕಾಮಗಾರಿ ಮುಗಿದು ವರ್ಷ ಸಂದರೂ, ಕೆರೆಗೆ ನೀರು ಹರಿಸಿಲ್ಲ. ಈ ಬಾರಿಯಾದರೂ ಬರಬಹುದು ಎಂಬುದು ನಮ್ಮ ನಿರೀಕ್ಷೆ. ಇಲ್ಲದಿದ್ದರೆ, ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಅರಕಲವಾಡಿ ಗ್ರಾಮದ ಮಹೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಯೋಜನೆ ವಿಳಂಬ: ಸುತ್ತೂರು ಏತ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ತಾಲ್ಲೂಕಿನ 21 ಕೆರೆಗಳು ಬರುತ್ತವೆ. 2017ರಲ್ಲೇ ಆರಂಭವಾದ ಈ ಯೋಜನೆಯ ಮೊದಲ ಹಂತ (10 ಕೆರೆಗಳಿಗೆ ನೀರು ತುಂಬಿಸುವುದು) ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ಯೋಜನೆ ವಿಳಂಬವಾಗಿದೆ. ಉಮ್ಮತ್ತೂರು ಕೆರೆಯವರೆಗೆ ಮಾತ್ರ ನೀರು ಹರಿದಿದೆ. ಇನ್ನೂ 20 ಕೆರೆಗಳಿಗೆ ನೀರು ಬರಬೇಕಿದೆ. ವಾರದ ಹಿಂದೆ ದೊಡ್ಡಮೋಳೆ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.
ಯೋಜನೆಯ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ, ಎಲ್ಲ ಕೆರೆಗಳಿಗೆ ನೀರು ಹರಿಸಬೇಕು ಎಂಬುದು ಕೃಷಿಕರ ಒತ್ತಾಯ.
34 ಕೆರೆಗಳ ಒತ್ತುವರಿ ತೆರವು
ಜಿಲ್ಲೆಯಾದ್ಯಂತ ನಡೆಯುತ್ತಿರುವ ಕೆರೆಗಳ ಒತ್ತುವರಿ ಗುರುತು ಹಾಗೂ ತೆರವು ಕಾರ್ಯಾಚರಣೆ ತಾಲ್ಲೂಕಿನಲ್ಲೂ ನಡೆಯುತ್ತಿದ್ದು, ಈ ತಿಂಗಳ ಆರಂಭದವರೆಗೆ 105 ಕೆರೆಗಳ ಅಳತೆ ಮಾಡಲಾಗಿದೆ. ಈ ಪೈಕಿ 40 ಕೆರೆಗಳು ಒತ್ತುವರಿಯಾಗಿರುವುದನ್ನು ಗುರುತಿಸಲಾಗಿದ್ದು, 34 ಜಲಮೂಲಗಳ ಒತ್ತುವರಿ ತೆರವುಗೊಳಿಸಲಾಗಿದೆ. 65 ಕೆರೆಗಳು ಒತ್ತುವರಿ ಮುಕ್ತವಾಗಿವೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಅವರು, ‘ಕೆರೆಗಳ ಒತ್ತುವರಿ ಗುರುತು ಹಾಗೂ ತೆರವು ಕಾರ್ಯಚರಣೆ ವೇಗವಾಗಿ ನಡೆಯುತ್ತಿದ್ದು, ಈಗಾಗಲೇ 105 ಕೆರೆಗಳ ಅಳತೆ ಪೂರ್ಣಗೊಂಡಿದೆ. ಉಳಿದ ಕೆರೆಗಳ ಅಳತೆ, ಒತ್ತುವರಿ ಗುರುತಿಸುವ ಕೆಲಸ ನಡೆಯುತ್ತಿದ್ದು, ನವೆಂಬರ್ ಒಳಗೆ ಎಲ್ಲ ಕೆರೆಗಳ ಗಡಿ ಗುರುತಿಸಿ ಆಯಾ ಇಲಾಖೆಗಳಿಗೆ ಹಸ್ತಾಂತರಿಸಲಾಗುವುದು’ ಎಂದರು.
ಕೆರೆ ತುಂಬಿಸುವ ಯೋಜನೆ: ಯಾವ್ಯಾವ ಕೆರೆಗಳು?
ಆಲಂಬೂರು ಏತ ನೀರಾವರಿ ಯೋಜನೆ: ಬೆಂಡರವಾಡಿ ಕೆರೆ, ಕೆರೆಹಳ್ಳಿ ಕೆರೆ, ತಮ್ಮಡಹಳ್ಳಿ ಕೆರೆ, ನಂಜೇದವನಪುರ ಕೆರೆ, ಆನೆಮಡುವಿನ ಕೆರೆ, ಕಾಳನಹುಂಡಿ ಕೆರೆ, ಬೇಡರಪುರ ಶಿವಗಂಗೆ ಕೆರೆ, ಮಾಲಗೆರೆ, ಅಮಚವಾಡಿ ಕೆರೆ, ನಿಜಲಿಂಗನಪುರ ಕೆರೆ, ನರಸಮಂಗಲಕೆರೆ, ಮೇಲೂರು ಕೆರೆ, ಕಿಲಗೆರೆ ಕೆರೆ, ಸುವರ್ಣನಗರ ಕೆರೆ ಮತ್ತು ಅರಕಲವಾಡಿ ಕೆರೆ.
ಸುತ್ತೂರು ಏತ ನೀರಾವರಿ ಯೋಜನೆ: ಬಾಗಳಿ ಕೆರೆ, ಉಮ್ಮತ್ತೂರು ಕೆರೆ, ಚಿಕ್ಕಹೊಮ್ಮ ಕೆರೆ, ಯಡಿಯೂರು ಅಡ್ಡಹಳ್ಳ ಕೆರೆ, ದೊಡ್ಡರಾಯನಪೇಟೆ ಕೆರೆ, ಕಣ್ಣೇಗಾಲ ಕೆರೆ, ಹೊಮ್ಮ ಕೆರೆ, ಕೋಡಿ ಮೋಳೆ ಕೆರೆ, ದೊಡ್ಡಕೆರೆ, ಚಿಕ್ಕಕೆರೆ, ಸಿಂಡಿಗೆರೆ ಕೆರೆ, ಮರಗದ ಕೆರೆ, ಬಂಡಿಗೆರೆ ಕೆರೆ, ನಗರದ ಕೆರೆ, ಸರಗೂರು ಮೋಳೆ ಕೆರೆ, ಹೆಬ್ಬಹಳ್ಳ ಕೆರೆ, ಮಲ್ಲದೇವನಹಳ್ಳಿ ಕೆರೆ, ಪುಟ್ಟನಪುರ ಕೆರೆ, ಹೊಂಡರಬಾಳು ಕೆರೆ, ನಾಗವಳ್ಳಿ ಕೆರೆ ಮತ್ತು ಕಾಗಲವಾಡಿ ಕೆರೆ.
**
ಅರಕಲವಾಡಿ ಹಾಗೂ ಸುವರ್ಣನಗರ ಕೆರೆಗಳಿಗೆ ಪೈಪ್‌ಲೈನ್ ಹಾಕಲಾಗಿದೆ. ಮಾಲಗೆರೆ ತುಂಬಿದ ಬಳಿಕ ಹುತ್ತೂರು ಕರೆಗೆ ನೀರು ಹರಿಯಲಿದ್ದು, ಅಲ್ಲಿಂದ ಈ ಕೆರೆಗಳಿಗೆ ಬರಲಿದೆ.
-ಸಿ.ಪುಟ್ಟರಂಗಶೆಟ್ಟಿ, ಶಾಸಕ
**
ಮಾಲಗೆರೆ ಶೇ 60ರಷ್ಟು ತುಂಬಿದ್ದು, ಭರ್ತಿಯಾದ ನಂತರ. ಹುತ್ತೂರು ಕೆರೆಗೆ ನೀರು ಹರಿಯಲಿದೆ. ತಾಲ್ಲೂಕಿನ ಎರಡು ಕೆರೆಗಳಿಗೆ ಕಳೆದ ವರ್ಷವೇ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ.
-ಮಂಜುನಾಥ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಾವೇರಿ ನೀರಾವರಿ ನಿಗಮ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.