ಶುಕ್ರವಾರ, ಏಪ್ರಿಲ್ 3, 2020
19 °C
ನಗರಸಭೆ: ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ, ಚಾಮರಾಜನಗರ, ಕೊಳ್ಳೇಗಾಲ ಎರಡೂ ಅತಂತ್ರ

ಆಡಳಿತ ಚುಕ್ಕಾಣಿ: ಪಕ್ಷಗಳಲ್ಲಿ ಲೆಕ್ಕಾಚಾರ ಶುರು

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೊಳ್ಳೇಗಾಲ ಹಾಗೂ ಚಾಮರಾಜನಗರ ನಗರಸಭೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ರಾಜಕೀಯ ಗರಿಗೆದರಿದೆ. ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ಹೂಡಬೇಕಾದ ಕಾರ್ಯತಂತ್ರ ರೂಪಿಸಲು ಸಿದ್ಧತೆ ನಡೆಸಿವೆ. 

ರಾಜ್ಯ ಸರ್ಕಾರ ಬುಧವಾರ ಹೊರಡಿಸಿರುವ ಹೊಸ ಅಧಿಸೂಚನೆ ಪ್ರಕಾರ, ಚಾಮರಾಜನಗರ ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ವರ್ಗದ ಮಹಿಳೆಗೆ ಮೀಸಲು. ಅದೇ ರೀತಿ, ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.  

ತಲಾ 31 ಸದಸ್ಯ ಬಲದ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳಿಗೆ 2018ರ ಆಗಸ್ಟ್‌ 31ರಂದು ಚುನಾವಣೆ ನಡೆದಿತ್ತು. ಸೆಪ್ಟೆಂಬರ್‌ 3ರಂದು ಫಲಿತಾಂಶ ‍ಪ್ರಕಟವಾಗಿತ್ತು.‌ 

ಹಿಂದಿನ ಸರ್ಕಾರ ಪ್ರಕಟಿಸಿದ್ದ ಅಧ್ಯಕ್ಷರ, ಉಪಾಧ್ಯಕ್ಷ ಮೀಸಲಾತಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದರಿಂದ ಒಂದೂವರೆ ವರ್ಷದಿಂದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. 

ಹಿಂದಿನ ಅಧಿಸೂಚನೆಯ ಪ್ರಕಾರ, ಚಾಮರಾಜನಗರ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಕೊಳ್ಳೇಗಾಲದಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ–ಎ ಗೆ ಮೀಸಲಿಡಲಾಗಿತ್ತು. 

ಎರಡೂ ಕಡೆ ಅತಂತ್ರ: ಎರಡೂ ನಗರಸಭೆಗಳಲ್ಲಿ ಅಧಿಕಾರ ಹಿಡಿಯಲು ಒಂದು ಪಕ್ಷಕ್ಕೆ ಕನಿಷ್ಢ 16 ಸದಸ್ಯ ಬಲ ಬೇಕು. ಆದರೆ, ಎರಡೂ ಕಡೆಗಳಲ್ಲಿ ಯಾರಿಗೂ ಬಹುಮತ ಇಲ್ಲದಿರುವುದರಿಂದ ಅತಂತ್ರವಾಗಿದೆ. ಹಾಗಾಗಿ, ಯಾರು ಅಧಿಕಾರ ಹಿಡಿಯುತ್ತಾರೆ ಎಂಬ ಕುತೂಹಲ ಜಿಲ್ಲೆಯ ರಾಜಕೀಯ ವಲಯದಲ್ಲಿ ಮನೆ ಮಾಡಿದೆ. ಚಾಮರಾಜನಗರದಲ್ಲಿ ದೊಡ್ಡ ಪಕ್ಷವಾಗಿ ಹೊಮ್ಮಿರುವ ಬಿಜೆಪಿ, ಕೊಳ್ಳೇಗಾಲದಲ್ಲಿ ಹೆಚ್ಚು ಸ್ಥಾನ ಗಳಿಸಿರುವ ಕಾಂಗ್ರೆಸ್‌, ಅಧಿಕಾರಕ್ಕೆ ಏರಲು ಯಾರನ್ನು ಸೆಳೆಯಬಹುದು ಎಂಬ ಲೆಕ್ಕಾಚಾರದಲ್ಲಿ ಮುಳುಗಿವೆ.

ಚಾಮರಾಜನಗರ

31 ವಾರ್ಡ್‌ಗಳಿರುವ ಚಾಮರಾಜನಗರ ನಗರಸಭೆಯಲ್ಲಿ 15 ಸ್ಥಾನಗಳನ್ನು ಗಳಿಸಿರುವ ಗೆದ್ದಿರುವ ಬಿಜೆಪಿ ದೊಡ್ಡ ಪಕ್ಷವಾಗಿದೆ. ಅಧಿಕಾರಕ್ಕೆ ಏರಲು ಅದಕ್ಕೆ ಒಬ್ಬ ಸದಸ್ಯರ ಬೆಂಬಲ ಅಗತ್ಯವಿದೆ. 27ನೇ ವಾರ್ಡ್‌ನಲ್ಲಿ ಬಿಎಸ್‌ಪಿಯಿಂದ ಗೆದ್ದಿರುವ ಪ್ರಕಾಶ್‌ ಹಾಗೂ 17ನೇ ವಾರ್ಡ್‌ನಿಂದ ಗೆದ್ದಿರುವ ಪಕ್ಷೇತರ ಸದಸ್ಯ ಬಸವಣ್ಣ ಇದ್ದಾರೆ. ಇವರಲ್ಲಿ ಒಬ್ಬರು ಬೆಂಬಲ ಕೊಟ್ಟರೂ ಬಿಜೆಪಿ ಅನಾಯಾಸವಾಗಿ ಅಧಿಕಾರಕ್ಕೆ ಬರುತ್ತದೆ. 

ಇತ್ತ ಎಂಟು ಸ್ಥಾನಗಳಲ್ಲಿ ಗೆದ್ದಿರುವ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕಾದರೆ, ಎಸ್‌ಡಿಪಿಐನ ಆರು ಸದಸ್ಯರ ಬೆಂಬಲದ ಜೊತೆಗೆ ಬಿಎಸ್‌ಪಿ ಹಾಗೂ ಪಕ್ಷೇತರ ಸದಸ್ಯರ ಬೆಂಬಲವನ್ನೂ ಪಡೆಯಬೇಕು. ಬಸವಣ್ಣ ಅವರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಗೆದ್ದಿದ್ದರೂ, ನಂತರ ಕಾಂಗ್ರೆಸ್‌ ಪರವೇ ಒಲವು ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಎಸ್‌ಪಿ ಸದಸ್ಯ ಪ್ರಕಾಶ್‌ ಅವರ ನಿರ್ಧಾರ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ. 

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಯಾರು ಬೇಕಾದರೂ ಅಧಿಕಾರಕ್ಕೆ ಬರಬಹುದು. ತಮಗೆ ಸ್ಥಾನಮಾನ ಸಿಗುವುದಿಲ್ಲ ಎಂಬ ಕಾರಣಕ್ಕೆ ಕೆಲವು ಸದಸ್ಯರು ಬೇರೆ ಪಕ್ಷಕ್ಕೆ ಬೆಂಬಲ ಕೊಟ್ಟರೂ ಕೊಡಬಹುದು ಎಂದು ಹೇಳುತ್ತಾರೆ ಮುಖಂಡರು. 

ಕೊಳ್ಳೇಗಾಲ ನಗರಸಭೆಗೆ ಯಾರಿಗೆ?

31 ವಾರ್ಡ್‌ಗಳ ಪೈಕಿ 11 ವಾರ್ಡ್‌ಗಳಲ್ಲಿ ಗೆದ್ದಿರುವ ಕಾಂಗ್ರೆಸ್‌ ಕೊಳ್ಳೇಗಾಲದಲ್ಲಿ ಅತ್ಯಂತ ದೊಡ್ಡ ಪಕ್ಷ. ಅಧಿಕಾರಕ್ಕೆ ಏರಬೇಕಾದರೆ ಕನಿಷ್ಠ 5 ಸದಸ್ಯರ ಬೆಂಬಲ ಅದಕ್ಕೆ ಬೇಕಾಗಿದೆ. ಒಂಬತ್ತು ಸದಸ್ಯರನ್ನು ಹೊಂದಿರುವ ಬಿಎಸ್‌ಪಿ ಬೆಂಬಲ ಕೊಟ್ಟರೆ ಸುಲಭವಾಗಿ ಮೈತ್ರಿ ಆಡಳಿತ ಅಸ್ತಿತ್ವಕ್ಕೆ ಬರುತ್ತದೆ.

ಏಳು ಸದಸ್ಯರನ್ನು ಹೊಂದಿರುವ ಬಿಜೆಪಿ ಜೊತೆಗೆ ಬಿಎಸ್‌ಪಿ ಮೈತ್ರಿ ಮಾಡಿಕೊಂಡರೆ ಆಗಲೂ ಬಹುಮತ ಸಿಕ್ಕಿ ಅಧಿಕಾರಕ್ಕೆ ಬರಬಹುದು. ಒಂಬತ್ತು ಬಿಎಸ್‌ಪಿ ಸದಸ್ಯರ ಪೈಕಿ ಏಳು ಮಂದಿ ಎನ್‌.ಮಹೇಶ್‌ ಬೆಂಬಲಿಗರು. ‌ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಸರ್ಕಾರದ ಪತನದ ನಂತರ ಬಿಎಸ್‌ಪಿಯಿಂದ ಉಚ್ಛಾಟನೆಗೊಂಡಿರುವ ಮಹೇಶ್‌ ಅವರು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಒಂದು ವೇಳೆ ನಗರಸಭೆಯಲ್ಲಿ ಬಿಜೆಪಿಗೆ ಬೆಂಬಲ ಕೊಟ್ಟರೆ, ಅವರ ಬೆಂಬಲಿಗ ಸದಸ್ಯರು ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಾಗಿದ್ದರೂ, ಈ ಮೈತ್ರಿಗೆ ಸರಳ ಬಹುಮತ ಸಿಗುವುದಿಲ್ಲ. ಮತ್ತೆ ಇಬ್ಬರು ಸದಸ್ಯರ ಬೆಂಬಲ ಬೇಕು.

ಹಾಗಾಗಿ, ಕೊಳ್ಳೇಗಾಲ ನಗರಸಭೆಯಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. 

***

ನಾವು ಬಿಜೆಪಿಯೊಂದಿಗೆ ಕೈಜೋಡಿಸುವ ಪ್ರಶ್ನೆ ಇಲ್ಲ. ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೇ, ಬೇಡವೇ ಎಂಬ ಬಗ್ಗೆ ಪಕ್ಷ ನಿರ್ಧರಿಸುತ್ತದೆ. ಅದಕ್ಕೆ ನಾವು ಬದ್ಧ
-ಎಂ.ಮಹೇಶ್‌, ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ

***

ಅಧ್ಯಕ್ಷನಾಗಿದ್ದರೂ ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ ಇನ್ನು ಎರಡು ಮೂರು ದಿನಗಳಲ್ಲಿ ಜಿಲ್ಲಾ ಪ್ರಮುಖ ಸಭೆ ನಡೆಸಿ, ಈ ಬಗ್ಗೆ ಚರ್ಚಿಸುತ್ತೇವೆ
-ಆರ್‌. ಸುಂದರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

***

ಒಂದೆರಡು ದಿನಗಳಲ್ಲಿ ಪಕ್ಷದ ಮುಖಂಡರ ಸಭೆ ನಡೆಸಿ ಈ ವಿಚಾರವಾಗಿ ಚರ್ಚಿಸುತ್ತೇವೆ. ಎರಡೂ ಕಡೆಗಳಲ್ಲಿ ಅಧಿಕಾರಕ್ಕೆ ಹಿಡಿಯಲು ನಾವು ಪ್ರಯತ್ನಿಸುತ್ತೇವೆ

-ಪಿ.ಮರಿಸ್ವಾಮಿ, ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು