ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ₹276 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ

Last Updated 21 ಜನವರಿ 2021, 13:14 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರಕ್ಕೆ ಕುಡಿಯುವ ನೀರುಪೂರೈಸುವ ₹276 ಕೋಟಿ ವೆಚ್ಚದ ಮೂರನೇ ಹಂತದ ಯೋಜನೆಗೆ ನಗರಸಭೆಯ ಕೌನ್ಸಿಲ್‌ ಸಭೆ ಒಪ್ಪಿಗೆ ನೀಡಿದೆ.

ಗುರುವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರು ಒಕ್ಕೊರಲಿನಿಂದ ಯೋಜನೆಯನ್ನು ಬೆಂಬಲಿಸಿದರು.

ಮಾಲಂಗಿ ಗ್ರಾಮದ ಬಳಿಯ ಕಾವೇರಿ ನದಿಯಿಂದ ಪೈಪ್‌ಲೈನ್‌ ಮೂಲಕ ನೇರವಾಗಿ ಚಾಮರಾಜನಗರಕ್ಕೆ ನೀರು ಪೂರೈಸುವ ಯೋಜನೆ ಇದಾಗಿದೆ. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಈಗಾಗಲೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದು, ಇದಕ್ಕೆ ₹276 ಕೋಟಿ ವೆಚ್ಚವಾಗಲಿದೆ.

ಸಭೆಯಲ್ಲಿ ಯೋಜನೆ ಬಗ್ಗೆ ಪ್ರಸ್ತಾಪಿಸಿದ ನಗರಸಭೆ ಆಯುಕ್ತ ಎಂ.ರಾಜಣ್ಣ ಅವರು, ‘ಈಗಾಗಲೇ ನಮ್ಮಲ್ಲಿ ಎರಡು ಹಂತಗಳ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ಸದ್ಯ ತಿ.ನರಸೀಪುರದ ಬಳಿ ಕಬಿನಿ ನದಿಯಿಂದ ಎಂಟು ಎಂಎಲ್‌ಡಿಯಷ್ಟು ನೀರನ್ನು ನಗರಕ್ಕೆ ಪೂರೈಸಲಾಗುತ್ತಿದೆ. ನಗರಕ್ಕೆ ಹೆಚ್ಚು ಪ್ರಮಾಣದ ನೀರಿನ ಅಗತ್ಯವಿದ್ದು, ಮೂರನೇ ಹಂತದ ಯೋಜನೆಯನ್ನು ರೂಪಿಸಲಾಗಿದೆ’ ಎಂದರು.

‘ಜನಸಂಖ್ಯೆಗೆ ಆಧಾರದಲ್ಲಿ ಹೊಸ ಯೋಜನೆಯನ್ನು ರೂಪಿಸಲಾಗಿದ್ದು 35 ಎಂಎಲ್‌ಡಿಯಷ್ಟು ನೀರು ಸರಬರಾಜು ಆಗಲಿದೆ. ಮಾರ್ಗ ಮಧ್ಯೆ ಆರು ಗ್ರಾಮಗಳಿಗೆ ಹಾಗೂ ಕುದೇರಿನಲ್ಲಿರುವ ಚಾಮುಲ್‌ ಘಟಕಕ್ಕೂ ನೀರು ಪೂರೈಕೆಯಾಗಲಿದೆ. ಇದರಿಂದ ನಗರಸಭೆಗೆ ಆದಾಯವೂ ಬರಲಿದೆ’ ಎಂದರು.

‘ವಿಸ್ತೃತ ಯೋಜನಾ ವರದಿ ಪ್ರಕಾರ, ಯೋಜನೆಗೆ ₹276 ಕೋಟಿ ವೆಚ್ಚವಾಗಲಿದೆ. ರಾಜ್ಯ ಸರ್ಕಾರ ಶೇ 60ರಷ್ಟು ಅಂದರೆ ₹159.38 ಕೋಟಿ ಭರಿಸಲಿದ್ದು, ಹಣಕಾಸು ಸಂಸ್ಥೆಗಳಿಂದ ಶೇ 30 ರಷ್ಟು ಸಾಲ, ಅಂದರೆ ₹79.69 ಕೋಟಿ, ನಗರಸಭೆಯು ಶೇ 10ರಷ್ಟು ₹26.56 ಕೋಟಿ ಅನುದಾನ ನೀಡುವ ಪ್ರಸ್ತಾವವನ್ನು ಯೋಜನಾ ವರದಿಯಲ್ಲಿ ಮಾಡಲಾಗಿದೆ. ಆರು ಗ್ರಾಮಗಳಿಗೂ ನೀರು ಪೂರೈಕೆಯಾಗಿರುವುದರಿಂದ ಗ್ರಾಮೀಣಾಭಿವೃದ್ಧಿ ಇಲಾಖೆ ಕೂಡ ₹10.35 ಕೋಟಿ ಅನುದಾನ ನೀಡಬೇಕಾಗುತ್ತದೆ’ ಎಂದು ರಾಜಣ್ಣ ವಿವರಿಸಿದರು.

ಯೋಜನೆಗೆ ಸಭೆಯು ಒಪ್ಪಿಗೆ ನೀಡಿರುವುದರಿಂದ ನೇರವಾಗಿ ಸರ್ಕಾರಕ್ಕೆ ಹೋಗಲಿದ್ದು, ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಗಬೇಕಿದೆ.

ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ವಿರುದ್ಧ ಕ್ರಮಕ್ಕೆ ಆಗ್ರಹ

ನಗರ ಸಭೆ ವ್ಯಾಪ್ತಿಯಲ್ಲಿ ಫ್ಲೆಕ್ಟ್‌, ಬ್ಯಾನರ್‌ಗಳಿಗೆ ನಿಷೇಧ ಹೇರಲಾಗಿದ್ದರೂ ಫ್ಲೆಕ್ಸ್‌, ಬ್ಯಾನರ್‌ಗಳ ಹಾವಳಿ ವಿಪರೀತವಾಗಿದ್ದು ಅಧಿಕಾರಿಗಳು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಸದಸ್ಯರಾದ ಮಹೇಶ್, ರಾಜಪ್ಪ, ಅಬ್ರಾರ್ ಅಹಮ್ಮದ್ ಅವರು ಈ ವಿಚಾರ ಪ್ರಸ್ತಾಪಿಸಿದರು.

‘ನಗರದ ಹಲವು ಕಡೆಗಳಲ್ಲಿ ಯಾವುದೇ ಅನುಮತಿ ಇಲ್ಲದೇ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಇವುಗಳಿಂದಾಗಿ ಅಪಘಾತಗಳೂ ಸಂಭವಿಸಿವೆ.ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಿ ಅಳವಡಿಸಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಗ್ರಿಲ್‌ ತೆರವುಗೊಳಿಸಿ

ನಗರಸಭಾ ಕಚೇರಿ ಕಟ್ಟಡದ ಮುಂಭಾಗ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಿರುವುದರಿಂದ ಕಟ್ಟಡದಲ್ಲಿರುವ ಅಂಗನವಾಡಿ ಮಾಲೀಕರಿಗೆ ತೊಂದರೆಯಾಗುತ್ತಿದೆ. ಅದನ್ನು ತೆರವುಗೊಳಿಸಬೇಕು ಎಂದು ಸದಸ್ಯ ರಾಘವೇಂದ್ರ ಅವರು ಒತ್ತಾಯಿಸಿದರು.

ಇವರ ಬೇಡಿಕೆಗೆ ಧ್ವನಿ ಗೂಡಿಸಿದ ಬಸವಣ್ಣ, ಅಬ್ರಾರ್‌ ಅಹಮದ್‌, ಸಮೀವುಲ್ಲಾ ಖಾನ್‌ ಹಾಗೂ ಇತರರು, ‘ಅಂಗಡಿಗಳ ಮಾಲೀಕರು ಬಂಡವಾಳ ಹೂಡಿದ್ದಾರೆ. ಗ್ರಿಲ್‌ ಇರುವುದರಿಂದ ಗ್ರಾಹಕರು ಬರುತ್ತಿಲ್ಲ. ಪೂರ್ತಿ ಗ್ರಿಲ್‌ ತೆಗೆಯದಿದ್ದರೂ, ಅಂಗಡಿಗಳ ಎದುರಾಗಿ ಗ್ರಿಲ್‌ ಕತ್ತರಿಸಿ ದಾರಿ ಮಾಡಿಕೊಡಿ’ ಎಂದರು.

ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಕೊಡಿಸಿ

‘104 ಬೀದಿ ಬದಿ ವ್ಯಾಪಾರಿಗಳು ಸಾಲಕ್ಕಾಗಿ ಆಕ್ಸಿಸ್ ಬ್ಯಾಂಕಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಆರು ಜನರಿಗೆ ಮಾತ್ರ ಬ್ಯಾಂಕ್ ಸಾಲ ನೀಡಿದೆ. 66 ಅರ್ಜಿ ಬಾಕಿಯಿದೆ. ಇನ್ನೂ 52 ಜನರಿಗೆ ಮಂಜೂರಾತಿ ಆಗಿದ್ದರೂ ಹಣ ಬಿಡುಗಡೆಯಾಗಿಲ್ಲ. ಇದರಿಂದ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯಾಗಿದ್ದು, ಆದಷ್ಟು ಬೇಗ ಉಳಿದ ಅರ್ಜಿದಾರರಿಗೂ ಹಣ ಬಿಡುಗಡೆ ಮಾಡಿಸಲು ಕ್ರಮವಹಿಸಬೇಕು’ ಎಂದು ಸದಸ್ಯರು ಒತ್ತಾಯಿಸಿದರು.

ಆಯುಕ್ತ ರಾಜಣ್ಣ ಪ್ರತಿಕ್ರಿಯಿಸಿ, ‘82 ಜನರಿಗೆ ಹಣ ಮಂಜೂರಾತಿ ಆಗಿದೆ. 14 ಮಾತ್ರ ಬಾಕಿಯಿದೆ. ಇದನ್ನು ಕೂಡ ಆದಷ್ಟು ಬೇಗ ಬಗೆಹರಿಸಲು ಕ್ರಮವಹಿಸಲಾಗುವುದು’ ಎಂದರು.

ಕೆಲಸ ಪೂರ್ಣಗೊಳ್ಳದೆ ಬಿಲ್‌ ಪಾವತಿಗೆ ಆಕ್ಷೇಪ

ವಾರ್ಡ್‌ ನಂ 1, ವಾರ್ಡ್‌ ನಂ 3, ವಾರ್ಡ್‌ ನಂ 9ರಲ್ಲಿ ಕೊಳವೆ ಬಾವಿ ಕೊರೆದು ಮೋಟಾರ್‌ ಅಳವಡಿಸಿ ಆರು ತಿಂಗಳು ಕಳೆದರೂ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಗುತ್ತಿಗೆದಾರರಿಗೆ ಬಿಲ್‌ ಪಾವತಿ ಮಾಡಲಾಗಿದೆ ಎಂದು ಸದಸ್ಯ ಎಂ.ಮಹೇಶ್‌ ಆಕ್ಷೇ‌‍ಪ ವ್ಯಕ್ತಪಡಿಸಿದರು.

ರಾಜಣ್ಣ ಅವರು ಮಾತನಾಡಿ, ‘ಕೆಲಸ ಆಗಿರುವುದಕ್ಕೆ ಮಾತ್ರ ಬಿಲ್‌ ಪಾವತಿಸಲಾಗಿದೆ. ಸೆಸ್ಕ್‌ನವರು ಇನ್ನೂ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಶೀಘ್ರದಲ್ಲಿ ಸಂಪರ್ಕ ಕಲ್ಪಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT