ಸೋಮವಾರ, ಏಪ್ರಿಲ್ 6, 2020
19 °C
ವಿವಿಧ ರಾಜ್ಯಗಳಲ್ಲಿ ಕಲಾ ಪ್ರೌಢಿಮೆ ಪ್ರದರ್ಶನ

ತಬಲಾ ವಾದನ ಪ್ರವೀಣ ದಶ‍‍ಪಾಲ್‌, 45 ವರ್ಷಗಳಿಂದ ಕಲಾಸೇವೆ

ಅವಿನ್ ಪ್ರಕಾಶ್ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಪಠ್ಯವೇ ಬದುಕಲ್ಲ ಎಂಬುದು ಇವರ ನಂಬಿಕೆ. ಅದರಂತೆ, ಶಿಕ್ಷಣದಲ್ಲಿ ದೊಡ್ಡ ಮಟ್ಟಿನ ಸಾಧನೆಯನ್ನೇನೂ ಇವರು ಮಾಡಿಲ್ಲ. ಆದರೆ, ಕಲೆಯ ಮೇಲಿದ್ದ ಆಸಕ್ತಿ ಅವರನ್ನು ಯಶಸ್ಸಿನ ಮೆಟ್ಟಿಲು ಏರುವಂತೆ ಮಾಡಿದೆ. 

ನಗರದ ದೇವಾಂಗ ಪೇಟೆಯ ನಿವಾಸಿ ಎ.ವಿ.ದಶಪಾಲ್‌ ಅವರು ತಬಲಾ ಸಾಧಕ. ತಬಲಾ ಮೇಲೆ ಇವರು ಬೆರಳುಗಳನ್ನು ಹೊರಳಿಸಲು ಆರಂಭಿಸಿದರೆ, ಅದು ಹೊಮ್ಮಿಸುವ ನಾದಕ್ಕೆ ಎಲ್ಲರೂ ತಲೆದೂಗಲೇ ಬೇಕು. ಆ ಮಟ್ಟಿಗಿನ ಕಲಾಶಕ್ತಿ ಇವರಿಗೆ ಒಲಿದಿದೆ. 

ದಶಪಾಲ್‌ ಅವರಿಗೆ ಈಗ 58ರ ಹರೆಯ. 45 ವರ್ಷಗಳಿಂದಲೂ ತಬಲಾ ವಾದನದಲ್ಲಿ ತೊಡಗಿಕೊಂಡಿದ್ದಾರೆ. ತಬಲ ನುಡಿಸುವ ಕಲೆಯನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡಿರುವ ದಶಪಾಲ್‌ ಅವರು ಟೈಲರಿಂಗ್‌ ಅನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. 

ನಾಟಕಗಳಲ್ಲಿ ತಬಲಾ ಸದ್ದು: ಅನೇಕ ನಾಟಕಗಳಿಗೆ, ರಸಮಂಜರಿ ಹಾಗೂ ಶಾಲಾ ಕಾಲೇಜು ಕಾರ್ಯಕ್ರಮಗಳಲ್ಲಿ ಇವರು ತಬಲಾ ವಾದಕರಾಗಿ ಕೆಲಸ ಮಾಡಿದ್ದಾರೆ. ದಕ್ಷಯಜ್ಞ, ಕುರುಕ್ಷೇತ್ರ, ದಾನ ಶೂರ ಕರ್ಣ, ಶಿವಯೋಗಿ, ಸತ್ಯಹರಿಶ್ಚಂದ್ರ, ಪ್ರಭುಲಿಂಗಲೀಲಾ, ಶಿವ ಜಲೇಂದ್ರ, ಭಕ್ತ ಪ್ರಹ್ಲಾದ, ಸತ್ಯಮೂರ್ತಿ... ಮುಂತಾದ ಅನೇಕ ಪೌರಾಣಿಕ ನಾಟಕಗಳಿಗೆ ಇವರು ತಬಲಾ ನುಡಿಸಿದ್ದಾರೆ. 

ನೂರಾರು ಗೌರವ: ವಿವಿಧ ರಾಜ್ಯಗಳಿಗೆ ಹೋಗಿ ಅನೇಕ ಕಡೆ ಸ್ಪರ್ಧಿಸಿ ಬಹುಮಾನಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ದೆಹಲಿ, ಮಹಾರಾಷ್ಟ್ರ, ಗೋವಾ, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲೂ ಪ್ರದರ್ಶನ ನೀಡಿ, ಕಲಾ ಪ್ರೌಢಿಮೆ ಮೆರೆದಿದ್ದಾರೆ.

‘ತಬಲಾ ನುಡಿಸುವ ಕಲೆ ನಮ್ಮ ಕುಟುಂಬದಿಂದ ಸಿಕ್ಕ ಉಡುಗೊರೆ. ನನ್ನ ತಾತ, ಮುತ್ತಾತರ ಕಾಲದಿಂದಲೂ ನಮ್ಮ ಕುಟುಂಬದ ಸದಸ್ಯರು ತಬಲಾ ನುಡಿಸುವುದರಲ್ಲಿ ನಿಷ್ಣಾತರು. ನಾನು 6ನೇ ತರಗತಿ ಇರುವಾಗಲೇ ಶಿಕ್ಷಣದಿಂದ ದೂರ ಉಳಿದೆ. ನಂತರ ನನ್ನ ತಂದೆಯವರಾದ ತಬಲಾ ಅಚ್ಗಾಳ್ ವೀರಭದ್ರಯ್ಯ ಅವರ ವೃತ್ತಿಯನ್ನೇ ಆರಿಸಿಕೊಂಡೆ’ ಎಂದು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ರಾಜ್ಯದ ವಿವಿಧ ಕಡೆ ಪ್ರದರ್ಶನಗಳನ್ನು ನೀಡಿ ಜನರ ಮೆಚ್ಚುಗೆ ಪಡೆದಿದ್ದೇನೆ. ಮಗ ಅರ್ಜನ್ ಈಗ ಎಂಬಿಎ ಪದವಿ ಮುಗಿಸಿದ್ದಾನೆ. ಅವನು ಕೂಡ ತಬಲಾ ವಾದನದ ಕಡೆ ಒಲವು ತೋರುತ್ತಿದ್ದಾನೆ’ ಎಂದು ಅವರು ತಿಳಿಸಿದರು.

ಗ್ರಾಮೀಣ ಮಕ್ಕಳಿಗೆ ಉಚಿತ ತರಬೇತಿ

ದಶಪಾಲ್‌ ಅವರ ಮನೆಯಲ್ಲಿ ತಬಲಾ, ಡಗ್ಗಗಳ ಸಣ್ಣ ಸಂಗ್ರಹಾಲಯವೇ ಇದೆ. 

‘ಮಕ್ಕಳಿಗೆ ತಬಲಾವನ್ನು ಪ್ರತಿ ನಿತ್ಯ ಹೇಳಿಕೊಡುತ್ತೇನೆ. ಯಾರ ಕೈಯಿಂದಲೂ ಶುಲ್ಕ ಕೇಳುವುದಿಲ್ಲ. ಅವರೆ ನೀಡಿದರೇ ಮಾತ್ರ ಪಡೆದುಕೊಳ್ಳುತ್ತೇನೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಚಿತವಾಗಿ ಹೇಳಿಕೊಡುತ್ತೇನೆ. ನನ್ನ ಪತ್ನಿ ಕೂಡ ನನ್ನ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾಳೆ’ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದರು.

‘ನನ್ನ ಈ ಸಾಧನೆಗೆ ನನ್ನ ಕುಟುಂಬ ಸದಸ್ಯರೇ ಕಾರಣ. ತಬಲಾ ವಾದನವೇ ನನ್ನ ಜೀವನ’ ಎಂದು ವಿನೀತರಾಗಿ ಹೇಳುತ್ತಾರೆ ದಶಪಾಲ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)