ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ನಗರಸಭೆಯೇ... ನಡೆದಾಡಲು ದಾರಿ ಎಲ್ಲಿದೆ?

ಸುವ್ಯವಸ್ಥಿತ ಪಾದಚಾರಿ ಮಾರ್ಗಗಳಿಲ್ಲ, ಇದ್ದ ಮಾರ್ಗಗಳಿಗೆ ಒತ್ತುವರಿ ಸಮಸ್ಯೆ
Last Updated 23 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರ ಚಾಮರಾಜನಗರದ ಪ್ರಮುಖ ಬೀದಿಗಳಲ್ಲಿ, ಬಡಾವಣೆಗಳಲ್ಲಿ, ವಾಣಿಜ್ಯ ಚಟುವಟಿಕೆ ನಡೆಯುವ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ನಡೆದಾಡಲು ಪಾದಚಾರಿ ಮಾರ್ಗಗಳಿಲ್ಲ (ಫುಟ್‌ಪಾತ್‌). ಕೆಲವು ಕಡೆಗಳಲ್ಲಿ ಇದ್ದರೂ, ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲಸ ಪೂರ್ಣವಾಗಿರುವ ಕಡೆಗಳಲ್ಲಿ ಅಂಗಡಿಗಳ ಮಾಲೀಕರು, ಬೀದಿ ಬದಿ ವ್ಯಾಪಾರಸ್ಥರು ಒತ್ತುವರಿ ಮಾಡಿಕೊಂಡಿ ದ್ದಾರೆ. ಹಾಗಾಗಿ,ಜನರು ನಡೆದಾಡಲು ರಸ್ತೆಗಳನ್ನೇ ಅವಲಂಬಿಸಿದ್ದಾರೆ.

ಬಡಾವಣೆಗಳಲ್ಲಿ ವಾಹನಗಳ ಸಂಚಾರ ವಿರಳವಾಗಿರುತ್ತದೆ. ರಸ್ತೆಯಲ್ಲಿ ನಡೆದಾಡಿದರೂ ಅಪಾಯ ಸಂಭವಿಸುವ ಸಾಧ್ಯತೆ ಕಡಿಮೆ. ಆದರೆ, ನಗರ ವ್ಯಾಪ್ತಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಇದರ ಜೊತೆಗೆ ಪಾದಚಾರಿ ಮಾರ್ಗದ ಬಳಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಇದರ ಮಧ್ಯದಲ್ಲಿ ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿದೆ. ವಾಹನ ದಟ್ಟಣೆ, ಜನಸಂದಣಿ ಹೆಚ್ಚಿರುವ ರಸ್ತೆಗಳಲ್ಲಿ ಸಂಚರಿಸಲು ವೃದ್ಧರು, ಮಹಿಳೆಯರು ಹಾಗೂ ಶಾಲಾ ಮಕ್ಕಳು ಹರಸಾಹಸ ಪಡಬೇಕಾಗಿದೆ.

ಚಾಮರಾಜನಗರ ಜಿಲ್ಲಾ ಕೇಂದ್ರವಾಗಿ ಗುರುತಿಸಿಕೊಂಡು 22 ವರ್ಷಗಳು ಸಂದರೂ ಇಲ್ಲಿನ ರಸ್ತೆಗಳು ಹೇಳುವಷ್ಟರ ಮಟ್ಟಿಗೆ ಅಭಿವೃದ್ಧಿ ಕಂಡಿಲ್ಲ. ಮೂರು ವರ್ಷಗಳ ಹಿಂದೆ ಅಭಿವೃದ್ಧಿಗೊಂಡಿರುವ ಬಿ.ರಾಚಯ್ಯ ಜೋಡಿ ರಸ್ತೆ, ಡೀವಿಯೇಷನ್‌ ರಸ್ತೆ, ಕೋರ್ಟ್‌ ರಸ್ತೆ, ಅಂಗಡಿ ಬೀದಿ, ರಥದ ಬೀದಿಯ ರಸ್ತೆಗಳು ಮಾತ್ರ ಕಾಂಕ್ರೀಟೀಕರಣಗೊಂಡು ಸುಸಜ್ಜಿತವಾಗಿರುವಂತೆ ಕಾಣುತ್ತಿವೆ.ಇವುಗಳನ್ನು ಬಿಟ್ಟು ಉಳಿದ ರಸ್ತೆಗಳೆಲ್ಲಾ ಕಿರಿದಾಗಿಯೇ ಇವೆ. ಕೆಲವು ಬಡಾವಣೆಗಳ ರಸ್ತೆಗಳು ಈಗ ಡಾಂಬರು, ಕಾಂಕ್ರೀಟ್‌ ಅನ್ನು ಕಾಣುತ್ತಿವೆ.

ರಸ್ತೆ ಅಂದ ಮೇಲೆ, ಜನಸಾಮಾನ್ಯರ ಓಡಾಟಕ್ಕಾಗಿ ಎರಡು ಬದಿಗಳಲ್ಲಿ ಪಾದಚಾರಿ ಮಾರ್ಗಗಳಿರಲೇಬೇಕು. ನಗರದಲ್ಲಿ ಪಾದಚಾರಿಗಳಿಗಾಗಿ ಮೀಸಲಾಗಿರುವ ಮಾರ್ಗಗಳನ್ನು ಎಲ್ಲಿದೆ ಎಂದು ಹುಡುಕಬೇಕು. ಸಾಮಾನ್ಯವಾಗಿ ಚರಂಡಿಯ ಮೇಲೆ ಚಪ್ಪಡಿ ಹಾಕಿಯೋ ಅಥವಾ ಕಾಂಕ್ರೀಟ್‌ ಹಾಕಿ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ನಗರದಲ್ಲಿ ಎಷ್ಟೋ ಬೀದಿಗಳಲ್ಲಿರುವ ಚರಂಡಿಗಳನ್ನು ಚಪ್ಪಡಿ ಅಥವಾ ಕಾಂಕ್ರೀಟ್‌ ಹಾಕಿಲ್ಲ. ಇನ್ನೂ ತೆರೆದುಕೊಂಡಿವೆ.

ಅಭಿವೃದ್ಧಿಗೊಂಡಿರುವ ಬಿ.ರಾಚಯ್ಯ ಜೋಡಿ ರಸ್ತೆ, ಡೀವಿಯೇಷನ್‌ ರಸ್ತೆ, ಕೋರ್ಟ್‌ ರಸ್ತೆ, ಅಂಗಡಿ ಬೀದಿ ರಸ್ತೆಗಳ ಇಕ್ಕೆಲಗಳಲ್ಲಿ ದೊಡ್ಡ ಚರಂಡಿಗಳನ್ನು ನಿರ್ಮಿಸಿ, ಅದರ ಮೇಲೆ ಕಾಂಕ್ರೀಟ್‌ ಹಾಕಿ ಪಾದಚಾರಿ ಮಾರ್ಗಗಳನ್ನು ಮಾಡಲಾಗಿದೆ. ಜೋಡಿ ರಸ್ತೆಯಲ್ಲಿ ಇನ್ನೂ ಹಲವು ಕಡೆಗಳಲ್ಲಿ ಭೂಸ್ವಾಧೀನ ನಡೆಯದಿರುವುದರಿಂದ ಕಾಂಕ್ರೀಟ್‌ ಚರಂಡಿ ನಿರ್ಮಿಸುವ ಕಾಮಗಾರಿ ಬಾಕಿ ಇದೆ. ಹಾಗಾಗಿ ಅಲ್ಲಲ್ಲಿ, ಪಾದಚಾರಿ ಮಾರ್ಗ ನಿರ್ಮಾಣವಾಗಿಲ್ಲ. ಕೋರ್ಟ್‌ ರಸ್ತೆ ಕಾಮಗಾರಿ ಕೂಡ ಅರ್ಧದಲ್ಲಿ ನಿಂತಿದ್ದು (ಕಾರಾಗೃಹದವರೆಗೆ), ಅಲ್ಲಿವರೆಗೆ ಪಾದಚಾರಿ ಮಾರ್ಗವೂ ನಿರ್ಮಾಣವಾಗಿದೆ.

ಒತ್ತುವರಿ ಸಮಸ್ಯೆ

ಇರುವ ಪಾದಚಾರಿ ಮಾರ್ಗಗಳು ಒತ್ತುವರಿ ಸಮಸ್ಯೆಯನ್ನು ಎದುರಿಸುತ್ತಿವೆ. ಕೆಲವು ಕಡೆ ತಳ್ಳುಗಾಡಿ, ಬೀದಿಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡರೆ, ಇನ್ನುಳಿದ ಕಡೆಗಳಲ್ಲಿ ಅಂಗಡಿಗಳ ಮಾಲೀಕರೇ ಪಾದಚಾರಿ ಮಾರ್ಗಗಳಲ್ಲಿ ತಮ್ಮ ಸಾಮಗ್ರಿ ಸರಂಜಾಮುಗಳನ್ನು ಇಟ್ಟು, ಒತ್ತುವರಿ ಮಾಡಿಕೊಂಡು ಜನರ ಓಡಾಟಕ್ಕೆ ಅಡ್ಡಿಯಾಗಿದ್ದಾರೆ.

ಸದಾ ಜನರಿಂದ ತುಂಬಿರುವ ದೊಡ್ಡಂಗಡಿ ಮತ್ತು ಚಿಕ್ಕಂಗಡಿ ಬೀದಿಗೆ ಒಮ್ಮೆ ಭೇಟಿ ನೀಡಿದರೆ ಸಾಕು. ಪಾದಚಾರಿ ಮಾರ್ಗ ಹೇಗೆ ಒತ್ತುವರಿಯಾಗಿದೆ ಎಂಬುದು ಅರಿವಿಗೆ ಬರುತ್ತದೆ. ಇಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡದಿರುವ ಮಾಲೀಕರು ಬಹಳ ಕಡಿಮೆ.ಪಕ್ಕದಲ್ಲೇ ನಗರಸಭೆ ಕಚೇರಿ ಇದೆ. ಆಯುಕ್ತರು ಸೇರಿದಂತೆ ಅಧಿಕಾರಿಗಳು ನಿತ್ಯವೂ ಅಲ್ಲಿ ಓಡಾಡುತ್ತಿದ್ದಾರೆ. ಹಾಗಿದ್ದರೂ ಪಾದಚಾರಿ ಮಾರ್ಗ ಒತ್ತುವರಿ ಅವರ ಕಣ್ಣಿಗೆ ಬೀಳದಿರುವುದು ಸೋಜಿಗ ಉಂಟು ಮಾಡುತ್ತದೆ.

ಪಾದಚಾರಿ ಮಾರ್ಗಗಳಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಮಾಲೀಕರೂ ನಮ್ಮಲ್ಲಿದ್ದಾರೆ. ಮಾರಾಟಕ್ಕೆ ಇಟ್ಟಿರುವ ಬೈಕ್‌ಗಳು ಇರಿಸುವವರು ಇದ್ದಾರೆ. ಇವರ ಜೊತೆಗೆ ಹೂವು, ಹಣ್ಣು, ತರಕಾರಿ, ಪಾದರಕ್ಷೆ, ಬಟ್ಟೆಗಳನ್ನು ಮಾರಾಟ ಮಾಡುವವರಿಗೂ ಪಾದಚಾರಿ ಮಾರ್ಗಗಳೇ ವ್ಯಾಪಾರ ಸ್ಥಳ.

‘ಬೀದಿ ಬದಿ, ತಳ್ಳುಗಾಡಿಗಳ ವ್ಯಾಪಾರಿಗಳು ಬಡವರು. ಹೊಟ್ಟೆ ಪಾಡಿಗಾಗಿ ರಸ್ತೆ ಬದಿಯನ್ನೇ ಅವಲಂಬಿಸಿದ್ದಾರೆ. ಆದರೆ, ಮಳಿಗೆಗಳ ಮಾಲೀಕರಿಗೆ ಏನಾಗಿದೆ. ಅವರಿಗೆ ಉತ್ತಮ ಆದಾಯವಿದೆ. ಅವರು ಕೂಡ, ‌ಜನರು ಓಡಾಡುವ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಾರೆ ಏನರ್ಥ’ ಎಂಬುದು ಜನರ ಪ್ರಶ್ನೆ.

‘ಬೀದಿ ಬದಿಯಲ್ಲಿ ನಡೆಯುತ್ತಿರುವ ವ್ಯಾಪಾರವನ್ನೇ ನಂಬಿ ಜೀವನ ನಡೆಸು ತ್ತಿದ್ದೇವೆ. ನಗರಸಭೆ ನಮಗೆ ವ್ಯಾ‍ಪಾರಕ್ಕೆ ಪ್ರತ್ಯೇಕ ಜಾಗ ನೀಡಲಿ. ಅಲ್ಲಿಯೇ ನಾವು ವ್ಯಾಪಾರ ಮಾಡುತ್ತೇವೆ’ ಎಂದು ತಳ್ಳು ಗಾಡಿಗಳ ಹಾಗೂ ಬೀದಿ ವ್ಯಾಪಾರಿಗಳು ಹೇಳುತ್ತಾರೆ.

ಪಾದಚಾರಿ ಮಾರ್ಗಗಳು ಇರುವ ರಸ್ತೆಗಳ ಕಥೆ ಇದಾದರೆ, ಬಹುತೇಕ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲ. ಇರುವ ಚರಂಡಿಗಳೂ ತೆರೆದು ಕೊಂಡಿವೆ. ಆ ರಸ್ತೆಗಳೂ ಕಿರಿದಾಗಿದ್ದು, ವಾಹನಗಳ ನಡುವೆಯೇ ಜನರು ಓಡಾಡಲು ಸಾಹಸವನ್ನೇ ಪಡಬೇಕಿದೆ. ಯಾವುದೇ ನಗರದಲ್ಲಿ ಇರಬೇಕಾದ ಅತಿ ಮುಖ್ಯವಾದ ಸೌಕರ್ಯಗಳಲ್ಲಿ ಪಾದಚಾರಿ ಮಾರ್ಗಗಳು ಒಂದು. ಅವುಗಳ ನಿರ್ಮಾಣಕ್ಕೆ ನಗರಸಭೆ ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಗಮನಿಸಿದ್ದೇನೆ: ಜಿಲ್ಲಾಧಿಕಾರಿ

ಇತ್ತೀಚೆಗೆ ಮಾಧ್ಯಮ ಸಂವಾದದಲ್ಲಿ ಮಾತನಾಡಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು, ‘ಜಿಲ್ಲಾ ಕೇಂದ್ರದಲ್ಲಿ ಪಾದಚಾರಿ ಮಾರ್ಗಗಳು ಒತ್ತುವರಿ ಆಗಿರುವುದನ್ನು ಗಮನಿಸಿದ್ದೇನೆ’ ಎಂದು ಹೇಳಿದ್ದರು.

‘ನಗರ ನನ್ನದು ಎಂಬ ಭಾವನೆ ನಮ್ಮ ಜನರಲ್ಲಿ ಇಲ್ಲ. ಆ ಕಾರಣಕ್ಕೆ ಈ ರೀತಿ ಆಗುತ್ತಿದೆ. ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದ್ದರು.

ತೆರವುಗೊಳಿಸುತ್ತೇವೆ: ಆಯುಕ್ತ

ಪಾದಚಾರಿ ಮಾರ್ಗಗಳ ನಿರ್ವಹಣೆ ಹೊಣೆ ನಗರಸಭೆಯದ್ದು, ಕೆಲವು ತಿಂಗಳ ಹಿಂದೆ ಅಧಿಕಾರಿಗಳು ಒಮ್ಮೆ ಕಾರ್ಯಾಚಾರಣೆ ನಡೆಸಿ, ಜನರ ಓಡಾಟಕ್ಕೆ ತೊಂದರೆ ಕೊಡದಂತೆ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದರು. ಕೆಲವು ದಿನಗಳ ನಂತರ ಹಿಂದಿನ ಸ್ಥಿತಿಯೇ ಪುನರಾವರ್ತನೆ ಆಗಿತ್ತು.

ನಗರಸಭೆ ಕಠಿಣ ಕ್ರಮ ಕೈಗೊಂಡರೆ, ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ತಡೆಯಬಹುದು ಎಂಬುದು ಜನರ ಆಗ್ರಹ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಎಂ.ರಾಜಣ್ಣ ಅವರು, ‘ಪಾದಚಾರಿ ಮಾರ್ಗಗಳನ್ನು ಅಂಗಡಿ ಮಾಲೀಕರು, ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿರುವುದು ಗಮನಕ್ಕೆ ಬಂದಿಲ್ಲ. ಒತ್ತುವರಿ ಆಗಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಬೇರೆ ಬೇರೆ ಕಡೆಗಳಲ್ಲಿ ಹೊಸ ಪಾದಚಾರಿ ಮಾರ್ಗಗಳ ನಿರ್ಮಿಸಲು ಯೋಜನೆ ರೂಪಿಸಲಾಗಿದೆಯೇ ಎಂದು ಕೇಳಿದ್ದಕ್ಕೆ, ‘ಮುಂದಿನ ಅನುದಾನ ಬಿಡುಗಡೆಯ ಸಂದರ್ಭದಲ್ಲಿ ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.

‘ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳವನ್ನು ಗುರುತಿಸುವ ಬಗ್ಗೆ ಈ ಹಿಂದೆ ಪ್ರಸ್ತಾಪಿಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅನುಕೂಲ ಕಲ್ಪಿಸಬೇಕು

‘ಸ್ಥಳೀಯ ಆಡಳಿತ ವರ್ಗ ಪಾದಚಾರಿ ಮಾರ್ಗಗಳನ್ನು ಗುರುತಿಸಿ, ಸಮರ್ಪಕ ನಿರ್ವಹಣೆಗೂ ಮುಂದಾಗಬೇಕು. ಒಮ್ಮೆ ಫುಟ್‌ಪಾತ್‌ ನಿರ್ಮಿಸಿದಾಗಅದರ ಮೇಲೆ ವಾಹನಗಳ ನಿಲುಗಡೆಯಾಗದಂತೆಯೂ ಕ್ರಮ ವಹಿಸಬೇಕು. ಸಾರ್ವಜನಿಕರಿಗೆ ಅನುಕೂಲಕರ ಪಾದಚಾರಿಮಾರ್ಗನಿರ್ಮಿಸಲು ಮುಂದಾಗಬೇಕು’

–ಬಸವರಾಜು,ಹೌಸಿಂಗ್‌ಬೋರ್ಡ್‌ ನಿವಾಸಿ

***

ನಿಲುಗಡೆಗೆ ಪ್ರತ್ಯೇಕ ಸ್ಥಳ ಗುರುತಿಸಿ

‘ವಾಹನಗಳು ಪಾದಚಾರಿ ಮಾರ್ಗದಲ್ಲಿ ನಿಲುಗಡೆಗೊಂಡರೆ ಸಾರ್ವಜನಿಕರು ನಡೆದಾಡಲು ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ನಗರಸಭೆ ಆಡಳಿತದವರು ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ಗುರುತಿಸಿ ನಮಗೆ ನಡೆದು ಹೋಗಲು ಅನುಕೂಲ ಕಲ್ಪಿಸಬೇಕು’

–ಶಿವಶಂಕರ್‌,ಪಾದಚಾರಿ

***

ದಂಡ ವಿಧಿಸಬೇಕು

‘ಬಹುತೇಕ ಮುಖ್ಯರಸ್ತೆಯ ಬದಿಗಳಲ್ಲಿ ಅಂಗಡಿ ಮಳಿಗೆಗಳು ಇರುವುದರಿಂದ ಅಗತ್ಯ ವಸ್ತುಗಳನ್ನು ಖರೀದಿಸಲು ಬರುವ ವಾಹನ ಸವಾರರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿ ನಿಲುಗಡೆಗೊಳಿಸಿ ಪಾದಚಾರಿಗಳು ನಡೆದು ಸಾಗಲು ಅನನುಕೂಲ ಮಾಡುತ್ತಾರೆ. ಈ ಬಗ್ಗೆ ಸೂಚನಾ ಫಲಕ ಇಟ್ಟು ಅಂತಹ ವಾಹನಗಳಿಗೆ ದಂಡ ವಿಧಿಸಬೇಕು’

–ಮಹದೇವಸ್ವಾಮಿ,ಪಾದಚಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT