ಶನಿವಾರ, ಏಪ್ರಿಲ್ 1, 2023
23 °C
ಮುಂಗಾರು ಆಗಮನವಾಗುತ್ತಲೇ ಸೂಜೆಗಲ್ಲಿನಂತೆ ಸೆಳೆಯುವ ಪುಷ್ಪ

ಕಿಸ್ಕಾರ: ನಿಸರ್ಗಕ್ಕೆ ರಂಗು ತುಂಬುವ ಚಿತ್ತ ಚೋರ

ನಾ.ಮಂಜುನಾಥಸ್ವಾಮಿ‌ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಮುಂಗಾರು ಮಳೆಯು ಭೂರಮೆಯ ಮುಡಿಗೆ ಮುಡಿಸುವ ಪುಷ್ಪ ಕಾವ್ಯ ಒಂದೆರಡಲ್ಲ. ಹೂ ಹೊತ್ತ ಧಾರಿಣಿ ತನಗಷ್ಟೇ ಚೆಲುವು ತುಂಬದೆ ಮನುಕುಲದ ಉಲ್ಲಾಸಕ್ಕೂ ಕಾರಣವಾಗುತ್ತಾಳೆ.

ಅಂತಹ ವರ್ಣ ವೈಭವಗಳನ್ನು ಸೃಜಿಸುತ್ತ, ದಾಂಗುಡಿ ಇಡುವ ಲತೆಗಳು ದುಗುಡವನ್ನು ದೂರ ಮಾಡುತ್ತವೆ. ಮನಸ್ಸಿಗೆ ಮುದ, ಭಾವಕ್ಕೆ ಮಧುರತೆ ತುಂಬವ ಮೂಲಕ ನಿಸರ್ಗದ ಸೊಬಗನ್ನು ಹೆಚ್ಚಿಸುವ ಕಿಸ್ಕಾರ ಹೂವು (ಇಂಗ್ಲಿಷ್‌ನಲ್ಲಿ ಇಕ್ಷೊರ) ಈಗ ಎಲ್ಲರನ್ನೂ ಆಕರ್ಷಿಸುತ್ತಿದೆ. 

ಆಡುಮಾತಿನಲ್ಲಿ ಇದನ್ನು ಕೇಪುಳ ಹೂ ಎಂದು ಕರೆಯುತ್ತಾರೆ. ನಿಸರ್ಗದಲ್ಲಿ ನೈಸರ್ಗಿಕವಾಗಿ ಈ ಹೂವು ಕಂಡು ಬರುತ್ತದೆ. ಅಲಂಕಾರದ ಉದ್ದೇಶದ ಗೊಂಚಲು ಗೊಂಚಲಾಗಿ ಹೂವುಗಳನ್ನು ಬಿಡುವ ಹಲವು ಬಣ್ಣಗಳ ಕಿಸ್ಕಾರ ತಳಿಗಳು ಈಗ ಉದ್ಯಾನಗಳಲ್ಲಿ, ಮನೆಗಳಲ್ಲಿ ಕಂಡು ಬರುತ್ತಿವೆ.

ಮಾರ್ಚ್‌ ತಿಂಗಳಿಂದಲೇ ಅರಳಲು ಆರಂಭಿಸುವ ಈ ಹೂವು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮನೆಯ ಅಂಗಳದಲ್ಲಿ ಮಳೆಗಾಲದಲ್ಲಿ ಇವು ಹೆಚ್ಚಾಗಿ ಕಂಗೊಳಿಸುತ್ತವೆ. ಸಸ್ಯದ ಬೀಜ ಇಲ್ಲವೇ ಸಸ್ಯ ಭಾಗವನ್ನು ಕಿತ್ತು ನೆಟ್ಟರೂ ಸುಲಭವಾಗಿ ಬೆಳೆಸಬಹುದು. ಬೊನ್ಸಾಯ್ ಪದ್ಧತಿಯಿಂದಲೂ ಇದನ್ನು ಬೆಳೆಬಹುದು. ಸಮಶೀತೋಷ್ಣ ಪ್ರದೇಶಗಳಲ್ಲಿ ಈ ಹೂವಿನ ಗಿಡಗಳು ನಳನಳಿಸುತ್ತದೆ. 

‘ಎಲ್ಲ ಹೂಗಳ ಗಾತ್ರ, ಆಕಾರ ಒಂದೇ ಆಗಿರುತ್ತವೆ. ಮನೆ ಸುತ್ತಲೂ 10 ಅಡಿವರೆಗೆ ಬೆಳೆಯುವ ಇದು ಬಹು ವಾರ್ಷಿಕ ಸಸ್ಯ. ಹಾಗಾಗಿ, ಕೈತೋಟದಲ್ಲಿ ಇದ್ದರೆ ಮನೆ, ಮಂದಿಗೆ ಶೋಭೆ ತರುತ್ತದೆ' ಎನ್ನುತ್ತಾರೆ ಪಟ್ಟಣದ ಗೃಹಿಣಿ ಶೋಭ. 

ಅಲಂಕಾರದಿಂದ ಔಷಧದವರೆಗೆ...

‘ಹೂವಿನ ಎಸಳುಗಳು ಸಂಪೂರ್ಣ ಅರಳಿದಾಗ ಐದಾರು ಇಂಚು ಅಗಲ ಇರುತ್ತದೆ. ಕಿಸ್ಕಾರದ 567 ಪ್ರಭೇದಗಳನ್ನು ಗುರುತಿಸಲಾಗಿದ್ದು, ರಾಜ್ಯದಲ್ಲಿ 10ಕ್ಕೂ ಹೆಚ್ಚಿನ ವೈವಿಧ್ಯದ ಸಸ್ಯಗಳಿವೆ. ಮಳೆ ಕಾಡುಗಳ ಆವಾಸದಲ್ಲಿ ಹೆಚ್ಚು ಕಾಣಸಿಗುತ್ತದೆ. ಇದು ರುಬಿಯಾಸಿಯೇ
ಕುಟುಂಬಕ್ಕೆ ಸೇರಿದ ಪೊದೆಸಸ್ಯ.

ಇಂಗ್ಲಿಷ್‌ನಲ್ಲಿ ಇಕ್ಷೊರ ಹೆಸರಿದೆ. ದಕ್ಷಿಣ ಕನ್ನಡದಲ್ಲಿ ಕೇಪುಳ, ಬಿಳಿ ಕುಸುಮಾಲೆ ಎಂದೂ, ಸಂಸ್ಕೃತದಲ್ಲಿ ಪಥಲಿ, ಬಿಂದುಕಾ ಎಂತಲೂ, ಹಿಂದಿಯಲ್ಲಿ ರಜನಾ, ರಂಜನಾ ಎಂದು ಕರೆಯಲಾಗುತ್ತದೆ. ಹಳದಿ, ಕಿತ್ತಲೆ, ಕಡುಗೆಂಪು, ಬಿಳಿ, ಕಿತ್ತಲೆ ಮಿಶ್ರಿತ ಕರಿ ವರ್ಣಗಳಲ್ಲಿ ಕಾಣಬರುತ್ತವೆ. ಹೂಗಳನ್ನು ದೇವರ ಅಲಂಕಾರಕ್ಕೂ ಬಳಸುತ್ತಾರೆ. ಹೂ ಮತ್ತು ಬೇರನ್ನು ಆಯುರ್ವೇದ ಮತ್ತು ಜನಪದೀಯರ ಔಷಧ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಏಷ್ಯಾದಲ್ಲಿ ತಳಿ ವೈವಿಧ್ಯ ಹೆಚ್ಚು ಸಸ್ಯತಜ್ಞ ರಾಮಾಚಾರಿ ಅವರು ‘ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು