ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಸಂರಕ್ಷಣೆಗೆ ಜನರೂ ಕೈಜೋಡಿಸಿ: ನ್ಯಾಯಾಧೀಶ

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ; ಸ್ಮಾರಕಕ್ಕೆ ಪುಷ್ಪ ನಮನ
Last Updated 11 ಸೆಪ್ಟೆಂಬರ್ 2021, 13:44 IST
ಅಕ್ಷರ ಗಾತ್ರ

ಚಾಮರಾಜನಗರ: ಅರಣ್ಯ ಸಂಪತ್ತನ್ನು ಸಂರಕ್ಷಿಸುವುದು ಅರಣ್ಯ ಇಲಾಖೆಯ ಕೆಲಸ ಮಾತ್ರ ಅಲ್ಲ. ಸಾರ್ವಜನಿಕರೂ ಇದರಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ ಪುರಿ ಅವರು ಶನಿವಾರ ಪ್ರತಿಪಾದಿಸಿದರು.

ನಗರದ ಫಾರೆಸ್ಟ್‌ ನರ್ಸರಿಯಲ್ಲಿ ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶದ ಆಡಳಿತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಿಗಾಗಿ ಜನನ, ಕಾಡಿಗಾಗಿ ಜೀವನ, ಕಾಡಿಗಾಗಿ ಮರಣ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಡು ಎಂದರೆ ನನ್ನದು ಎಂದು ಅದರ ರಕ್ಷಣೆಗೆ ಪ್ರಾಣವನ್ನೇ ಮುಡಿಪಾಗಿಟ್ಟಿದ್ದಾರೆ. ಆದರೆ, ಅರಣ್ಯದ ರಕ್ಷಣಾ ಕಾರ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲರೂ ಅದರಲ್ಲಿ ಪಾಲ್ಗೊಳ್ಳಬೇಕು. ಭಾರತದ ನಾಗರಿಕರಾದ ನಾವೆಲ್ಲರೂ ವನ್ಯಜೀವಿ, ಕಾಡು ಹಾಗೂ ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸಬೇಕು ಎಂದು ದೇಶದ ಸಂವಿಧಾನದ ಕಲಂ 51 (ಎ) ಹಾಗೂ ಕಲಂ 51(ಜಿ) ಹೇಳುತ್ತದೆ. ಹಾಗಾಗಿ, ಕಾಡಿನ ರಕ್ಷಣೆಯ ಕರ್ತವ್ಯವೂ ನಮ್ಮ ಮುಂದಿದೆ’ ಎಂದರು.

‘ಅರಣ್ಯ ಸಂರಕ್ಷಣೆಯಲ್ಲಿ ಇಲಾಖೆಯ ಸಿಬ್ಬಂದಿ ಮಾತ್ರ ಅಲ್ಲ, ಸಾರ್ವಜನಿಕರೂ ಮೃತಪಟ್ಟಿರುವ ನಿದರ್ಶನಗಳಿವೆ. ಅರಣ್ಯ ಇಲಾಖೆಯು ಹುತಾತ್ಮರ ಪಟ್ಟಿಯನ್ನು ಸಿದ್ಧಪಡಿಸುವಾಗ ಇಲಾಖೆಯ ಸಿಬ್ಬಂದಿ ಮಾತ್ರವಲ್ಲದೇ ನಾಗರಿಕರ ಹೆಸರುಗಳನ್ನೂ ಸೇರಿಸಿ, ಅವರಿಗೆ ಗೌರವ ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.

‘ಪರಿಸರ ಉಳಿವಿಗಾಗಿ ಸಾಲು ಮರದ ತಿಮ್ಮಕ್ಕನ ರೀತಿಯಲ್ಲಿ ಗಿಡಮರಗಳನ್ನು ಬೆಳೆಸುವವರು ಇದ್ದಾರೆ. ಅಂತಹವರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕು‘ ಎಂದು ಸದಾಶಿವ ಎಸ್‌.ಸುಲ್ತಾನ್‌ ಪುರಿ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಪ್ರಾಣಿಗಳಿಗೆ ಆಹಾರ ಕೊಡದಿರಿ: ‘ಕೆಲವರು ವನ್ಯಪ್ರಾಣಿಗಳಿಗೆ ಆಹಾರ ನೀಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ, ಪ್ರಾಣಿಗಳಿಗೆ ಆಹಾರ ನೀಡುವುದು ಅಪರಾಧ. ನಾವು ಕೊಡುವ ಆಹಾರ ಪ್ರಾಣಿಗಳಿಗೆ ತೊಂದರೆ ಉಂಟು ಮಾಡುವ ಸಾಧ್ಯತೆ ಇರುತ್ತದೆ’ ಎಂದರು.

ಮಾಲಿನ್ಯ ತಡೆಯಿರಿ: ಇತ್ತೀಚೆಗೆ ಬಿಳಿಗಿರಿರಂಗನಬೆಟ್ಟಕ್ಕೆ ಹೋಗಿದ್ದಾಗ ಸಾಕಷ್ಟು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಗಮನಿಸಿದೆ. ಪ್ಲಾಸ್ಟಿಕ್‌ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಫಲಕಗಳಲ್ಲಿ ಅದನ್ನು ಬರೆದಿದ್ದರೂ ಪ್ಲಾಸ್ಟಿಕ್‌ ಬಳಸಿ ಎಸೆಯುತ್ತಾರೆ. ವಾತಾವರಣದಲ್ಲಿ ಉಂಟಾಗುತ್ತಿರುವ ವಾಯು, ನೀರು, ಶಬ್ದ ಮಾಲಿನ್ಯವನ್ನು ತಡೆಗಟ್ಟಲು ಎಲ್ಲರೂ ಶ್ರಮಿಸಬೇಕು’ ಎಂದು ನ್ಯಾಯಾಧೀಶರು ಕರೆ ನೀಡಿದರು.

ಇದಕ್ಕೂ ಮೊದಲು, ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೊಯರ್‌ ನಾರಾಯಣ ರಾವ್‌, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್‌ ರಾಜು ಹಾಗೂ ಇತರರು ಸ್ಮಾರಕಕ್ಕೆ ಪುಷ್ಪಗುಚ್ಛ ಇಟ್ಟು ನಮಿಸಿದರು.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ‌ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ಕುಮಾರ್‌ ಅವರು 1966ರಿಂದ ಇಲ್ಲಿಯವರೆಗೆ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹೆಸರುಗಳನ್ನು ಓದಿದರು.

ಹುತಾತ್ಮರ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಲಾಯಿತು. ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT