ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ನಗರಸಭಾ ಚುನಾವಣೆಗೆ ಎರಡು ವರ್ಷ: ಗೆದ್ದರೂ ಸಿಕ್ಕಿಲ್ಲ ಅಧಿಕಾರದ ಸಿಹಿ

ಕೊಳ್ಳೇಗಾಲ ನಗರಸಭಾ ಚುನಾವಣೆಗೆ ಎರಡು ವರ್ಷ, ಇನ್ನು ಆಗಿಲ್ಲ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Last Updated 3 ಸೆಪ್ಟೆಂಬರ್ 2020, 2:09 IST
ಅಕ್ಷರ ಗಾತ್ರ

ಚಾಮರಾಜನಗರ: ಚುನಾವಣೆಯಲ್ಲಿ ಗೆದ್ದು ಎರಡು ವರ್ಷ ಕಳೆದರೂ ಅಧಿಕಾರ ಹಿಡಿಯುವ ಭಾಗ್ಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭಾ ಸದಸ್ಯರಿಗೆ ಇನ್ನೂ ಬಂದಿಲ್ಲ.

ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಗೆ ಸಂಬಂಧಿಸಿದ ಗೊಂದಲ ಇನ್ನೂ ಬಗೆಹರಿಯದೇ ಇರುವುದರಿಂದ, ನಗರಸಭೆಗಳಿಗೆ ಆಯ್ಕೆಯಾದವರಿಗೆ ಅಧಿಕಾರದ ಸವಿಯನ್ನು ಉಣ್ಣಲು ಸಾಧ್ಯವಾಗಿಲ್ಲ. ಎರಡೂ ಕಡೆಗಳಲ್ಲಿ ಅಧಿಕಾರಿಗಳ ಆಡಳಿತವೇ ಮುಂದುವರೆದಿದೆ.

ತಲಾ 31 ಸದಸ್ಯ ಬಲದ ಎರಡೂ ನಗರಸಭೆಗಳಿಗೆ 2018ರ ಆಗಸ್ಟ್‌ 31ರಂದು ಚುನಾವಣೆ ನಡೆದಿತ್ತು. ಸೆಪ್ಟೆಂಬರ್‌ 3ರಂದು ಫಲಿತಾಂಶ‍ಪ್ರಕಟವಾಗಿತ್ತು.‌

ಹೈಕೋರ್ಟ್‌ ತಡೆಯಾಜ್ಞೆ: ಸರ್ಕಾರ ಮೊದಲು ಪ್ರಕಟಿಸಿದ್ದ ಮೀಸಲಾತಿ ಪಟ್ಟಿಯನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ನ ಏಕ ಸದಸ್ಯ ಪೀಠವು ಪಟ್ಟಿಗೆ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ಇನ್ನೂ ಕೆಲಸವರು ಮೇಲ್ಮನವಿ ಸಲ್ಲಿಸಿದ್ದರು. ಹಾಗಾಗಿ, ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ನನೆಗುದಿಗೆ ಬಿದ್ದಿತ್ತು.

ಸರ್ಕಾರ ಹೊರಡಿಸಿರುವ ಮೀಸಲಾತಿ ಪಟ್ಟಿ ಪ್ರಕಾರ, ಚಾಮರಾಜನಗರ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಕೊಳ್ಳೇಗಾಲದಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ–ಎ ಗೆ ಮೀಸಲಿಡಲಾಗಿತ್ತು.

ಪ್ರಮಾಣಪತ್ರಕ್ಕೆ ಸೀಮಿತ: ಎರಡು ವರ್ಷಗಳು ಕಳೆದರೂ ಕೌನ್ಸಿಲ್‌ ರಚನೆಯಾಗದೇ ಇರುವುದರಿಂದ ಚುನಾಯಿತ ಪ್ರತಿನಿಧಿಗಳಿಗೆ ಇನ್ನೂ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಚುನಾವಣಾ ಗೆಲುವು ಪ್ರಮಾಣ ಪತ್ರ ಪಡೆದಿದ್ದಕ್ಕಷ್ಟೇ ಸೀಮಿತವಾಗಿದೆ.

‘ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗದೆ ಇರುವುದರಿಂದ ಸಾಮಾನ್ಯಸಭೆ ನಡೆಯುತ್ತಿಲ್ಲ.ವಾರ್ಡ್‌ಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಚುನಾವಣೆಯಲ್ಲಿ ಗೆದ್ದರೂ ಏನೂ ಮಾಡಲು ಸಾಧ್ಯವಾಗದಿರುವ ಸ್ಥಿತಿ ಇದೆ’ ಎಂದು ಹೇಳುತ್ತಾರೆ ಸದಸ್ಯರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ, ಎರಡು ವರ್ಷಗಳಿಂದ ಅಧಿಕಾರ ಇಲ್ಲದೇ ಇರುವುದು ವಿಷಾದಕರ ಸಂಗತಿ. ಅಭಿವೃದ್ಧಿ ಕುಂಠಿತವಾಗಿದೆ. ಇದಕ್ಕೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸರ್ಕಾರಗಳೇ ನೇರ ಕಾರಣ. ತಡೆಯಾಜ್ಞೆ ತೆರವುಗೊಳಿಸಲು ಎರಡೂ ಸರ್ಕಾರಗಳೂ ಕ್ರಮ ಕೈಗೊಂಡಿಲ್ಲ. ಇದು ಸಂವಿಧಾನದ ಅಣಕ’ ಎಂದುಚಾಮರಾಜನಗರದ 9ನೇ ವಾರ್ಡ್‌ ಸದಸ್ಯ ಎಸ್‌ಡಿಪಿಐನ‌ಎಂ.ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚುನಾವಣೆಯಲ್ಲಿ ಗೆದ್ದು ಎರಡು ವರ್ಷಗಳಾಗಿವೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗದೇ ಇರುವುದರಿಂದ ಅಭಿವೃದ್ಧಿ ಕೆಲ‌ಸಗಳು ನಡೆಯುತ್ತಿಲ್ಲ. ಗೆದ್ದರೂ ಸೋತಂತೆ ಆಗಿದೆ’ ಎಂದು ಕೊಳ್ಳೇಗಾಲ ನಗರಸಭೆಯ ಸದಸ್ಯ ಪ್ರಕಾಶ್‌ ಶಂಕನಪುರ ಅವರು ಹೇಳಿದರು.

ಅಕ್ಟೋಬರ್‌ 2‌ರೊಳಗೆ ಆಯ್ಕೆ ಸಾಧ್ಯತೆ

ಇನ್ನು ಒಂದು ತಿಂಗಳ ಒಳಗಾಗಿ, ಮೀಸಲಾತಿ ಪಟ್ಟಿ ಪ್ರಕಟಗೊಂಡು ಸದಸ್ಯರು ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಹೊಸ ಮೀಸಲಾತಿ ಪಟ್ಟಿ ಪ್ರಕಟಿಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಅಕ್ಟೋಬರ್‌ 2ರೊಳಗೆ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಹಾಗಾಗಿ, ಸದಸ್ಯರು ಅಧಿಕಾರ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲು ನಿಗದಿ ಪಡಿಸಲು ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಉದ್ದೇಶದಿಂದ ಆಗಸ್ಟ್‌ 27ರಂದು ಸರ್ಕಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಅವಕಾಶವನ್ನೂ ನೀಡಿದೆ. ಹಾಗಾಗಿ, ನ್ಯಾಯಾಲಯದ ಸೂಚನೆಯಂತೆ ಇನ್ನು ಒಂದು ತಿಂಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT