ಭಾನುವಾರ, ಆಗಸ್ಟ್ 1, 2021
27 °C
ಕೋವಿಡ್‌–19 ಹಾವಳಿ ರಸ್ತೆ ಬದಿ ವ್ಯಾಪಾರಿಗಳು ತತ್ತರ

ಕೊಳ್ಳೇಗಾಲ: ಕೊರೊನಾದಿಂದ ಫಾಸ್ಟ್‌ಫುಡ್ ಅಂಗಡಿಗಳಿಗಿಲ್ಲ ಗ್ರಾಹಕರು

ಅವಿನ್‌ ಪ್ರಕಾಶ್ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ನಗರ ವ್ಯಾಪ್ತಿಯಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವಂತೆಯೇ, ಜನರು ಹೋಟೆಲ್‌ಗಳು ಮತ್ತು ಫಾಸ್ಟ್‌ ಫುಡ್‌ ಮಳಿಗೆಗಳಲ್ಲಿ ಆಹಾರ ಸೇವಿಸಲು ಹಿಂದೇಟು ಹಾಕುತ್ತಿದ್ದು, ವ್ಯಾಪಾರಿಗಳು ತತ್ತರಿಸಿ ಹೋಗಿದ್ದಾರೆ. 

ಅದರಲ್ಲೂ, ಬೀದಿ ಬದಿಗಳಲ್ಲಿ ತಳ್ಳುಗಾಡಿ, ವಾಹನಗಳಲ್ಲಿ ಫಾಸ್ಟ್‌ ಫುಡ್‌ ತಯಾರಿಸುವ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಕೋವಿಡ್‌–19 ಕಾರಣಕ್ಕೆ ಜಾರಿಗೊಳಿಸಲಾಗದ ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳ ಅವಧಿಯಲ್ಲಿ ಏನೂ ವ್ಯಾಪಾರ ಇಲ್ಲದೆ ಅವರು ನಷ್ಟ ಅನುಭವಿಸಿದ್ದಾರೆ. ಅನ್‌ಲಾಕ್‌ ಆಗಿ, ವ್ಯಾಪಾರ ಕುದುರಬಹುದು ಎಂಬ ಅವರ ನಿರೀಕ್ಷೆ ಹುಸಿಯಾಗಿದೆ. 

ನಗರದ ದೇವಾಂಗಪೇಟೆ, ಬಸ್ ನಿಲ್ದಾಣದ ಸಮೀಪವಿರುವ ಫಾಸ್ಟ್ ಫುಡ್ ಕೈಗಾಡಿಗಳ ಮುಂದೆ ಜನರು ಕಿಕ್ಕಿರಿದು ಸೇರುತ್ತಿದ್ದರು. ನಾಲ್ಕು ತಿಂಗಳುಗಳಿಂದ ಈ ಪ್ರದೇಶಗಳೆಲ್ಲ ಖಾಲಿ ಹೊಡೆಯುತ್ತಿವೆ.

ನಗರದಲ್ಲಿ ಬೀದಿಬದಿಯ ಫಾಸ್ಟ್‌ಫುಡ್‌ ಮಳಿಗೆ ಹಾಗೂ ಹೋಟೆಲ್‍ಗಳು 100ಕ್ಕೂ ಹೆಚ್ಚಿವೆ. 1,000ಕ್ಕೂ ಹೆಚ್ಚು ಮಂದಿ ಇಲ್ಲಿ ಉದ್ಯೋಗ ಮಾಡುತ್ತಿದ್ದರು. ಆದರೆ, ಹೇಳಿಕೊಳ್ಳುವಂತಹ ವ್ಯಾಪಾರ ಇಲ್ಲದಿರುವುದರಿಂದ, ಇವರಿಗೆ ಕೆಲಸ ಇಲ್ಲದಂತಾಗಿದೆ. 

‘ಅನ್‌ಲಾಕ್‌ ಆದ ನಂತರ ಬೀದಿ ಬದಿಯ ಫಾಸ್ಟ್‌ಫುಡ್‌ ಮಳಿಗೆಗಳನ್ನು ತೆರೆದಿದ್ದರೂ ಗ್ರಾಹಕರು ಬರುತ್ತಿಲ್ಲ. ಕೆಲವರು ಪ್ರತಿ ದಿನದ ವ್ಯವಹಾರವನ್ನು ನಂಬಿ ಜೀವನ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾಡಿದ ತಿಂಡಿಗಳು ಮಾರಾಟವಾಗುತ್ತಿಲ್ಲ. ಮನೆಗೆ ವಾಪಸ್‌ ತೆಗೆದುಕೊಂಡು ಹೋಗುವ ಪರಿಸ್ಥಿತಿದೆ. ಫಾಸ್ಟ್‌ ಫುಡ್‌ ಗಾಡಿಯವರು ಪ್ರತಿ ದಿನ ಸರಾಸರಿ ₹4000–₹5000 ವಹಿವಾಟು ನಡೆಸುತ್ತಿದ್ದರು. ಈಗ ₹800 ವ್ಯಾಪಾರ ಆದರೆ ಹೆಚ್ಚು’ ಎಂದು ಫಾಸ್ಟ್‌ ಫುಡ್‌ ವ್ಯಾಪಾರಿ ಬಾಬು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಕೆಲ ಹೋಟೆಲ್‍ಗಳು ಬಂದ್:  ಗ್ರಾಹಕರ ಕೊರತೆಯಿಂದ ನಗರದಲ್ಲಿ ಅರ್ಧದಷ್ಟು ಹೋಟೆಲ್‍ಗಳು ಇನ್ನೂ ಬಾಗಿಲು ತೆರೆದಿಲ್ಲ. ಇನ್ನು ಕೆಲವು ತೆರೆದಿದ್ದರೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ.

ತೆರೆದಿರುವ ಹೋಟೆಲ್‌ಗಳಲ್ಲಿ ಕೆಲವು ಕಡೆಗಳಲ್ಲಿ ಪಾರ್ಸೆಲ್‌ ಮಾತ್ರ ಲಭ್ಯವಿದೆ. ಹಾಗಿದ್ದರೂ ಜನರು ಬರುತ್ತಿಲ್ಲ. ಹೊರಗಡೆ ತಿಂಡಿ, ಊಟ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳುತ್ತಾರೆ ಮಾಲೀಕರು.  

‘ಸರ್ಕಾರದ ಮಾರ್ಗಸೂಚಿ ಪ್ರಕಾರ ಹೋಟೆಲ್‍ಗಳಲ್ಲಿ ಗ್ರಾಹಕರ ನಡುವೆ ಅಂತರ ಕಾಯ್ದುಕೊಳ್ಳಬೇಕಾಗಿದೆ. ಅದಕ್ಕಾಗಿ ಶೇ 50ರಷ್ಟು ಆಸನಗಳನ್ನು ಕಡಿತಗೊಳಿಸಿದ್ದಾರೆ. ಒಂದು ಟೇಬಲ್‌ನಲ್ಲಿ ಇಬ್ಬರು ಅಥವಾ ನಾಲ್ಕು ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಈಗ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಕೆಲಸಗಾರರ ಸಂಖ್ಯೆಯೂ ಕಡಿಮೆ ಇದೆ’ ಎಂದು ಹರ್ಷ ಹೋಟೆಲ್ ಮಾಲೀಕ ನಟರಾಜಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಹೋಟೆಲ್‍ಗಳು ಸರಿಯಾಗಿ ತೆರೆಯುವುದಿಲ್ಲ. ಕೋವಿಡ್-19ನಿಂದ ನಮಗೆ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಹೇಳುತ್ತಾರೆ ಸಪ್ಲೆಯರ್‌ಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು