ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕುಸಿದ ಪಟಾಕಿ ಮಾರಾಟ

ಕೋವಿಡ್‌ ಪರಿಣಾಮ, ಪಟಾಕಿ ನಿಷೇಧ, ಹಸಿರು ಪಟಾಕಿಗೆ ಅವಕಾಶ ಆದೇಶ ಗೊಂದಲ
Last Updated 14 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19 ಪರಿಣಾಮ ಹಾಗೂ ಪಟಾಕಿ ಬಳಕೆಗೆ ಸಂಬಂಧಿಸಿದಂತೆ ಜನರಲ್ಲಿ ಮೂಡಿರುವ ಗೊಂದಲದಿಂದಾಗಿ ಈ ಬಾರಿ ದೀಪಾವಳಿಗೆ ಪಟಾಕಿ ಸದ್ದು ಕೇಳಿಸುತ್ತಿಲ್ಲ.

ಇವೆರಡು ಕಾರಣಗಳಿಂದಾಗಿ ಪಟಾಕಿ ಮಾರಾಟದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ವ್ಯಾಪಾರಿಗಳು ಹೇಳುವಂತೆ ಕೋವಿಡ್‌ಗಿಂತಲೂ ವ್ಯಾಪಾರದ ಹೆಚ್ಚಿನ ನಕಾರಾತ್ಮಕ ಪ್ರಭಾವ ಬೀರಿದ್ದು ಪಟಾಕಿ ಮೇಲಿನ ನಿಷೇಧಕ್ಕೆ ಸಂಬಂಧಿಸಿದ ಗೊಂದಲ.ಆರಂಭದಲ್ಲಿ ಪಟಾಕಿ ಮೇಲೆ ಸರ್ಕಾರ ನಿಷೇಧ ಹೇರಿದೆ ಎಂದು ಹೇಳಲಾಯಿತು. ನಂತರ ಹಸಿರು ಪಟಾಕಿಯನ್ನು ಬಳಸಬಹುದು ಎಂದು ಸರ್ಕಾರ ಹೇಳಿತು. ಆದರೆ, ಹಸಿರು ಪಟಾಕಿ ಎಂದರೇನು ಎಂಬ ಸ್ಪಷ್ಟ ಮಾಹಿತಿ ಗ್ರಾಹಕರಿಗೆ ಸಿಗದೆ ಗೊಂದಲದಲ್ಲಿ ಮುಳುಗಿದರು.

‘ಹೆಚ್ಚು ಮಾಲಿನ್ಯಕಾರಕ ಹಾಗೂ ಜಾಸ್ತಿ ಶಬ್ದ ಉಂಟುಮಾಡುವ ಪಟಾಕಿಗಳ ಉತ್ಪಾದನೆಗೆ ನಿಷೇಧ ಹೇರಲಾಗಿದೆ. ಹೆಚ್ಚು ರಾಸಾಯನಿಕಗಳಿಲ್ಲದ ಹಾಗೂ ವಾತಾವರಣದ ಮೇಲೆ ಹೆಚ್ಚು ಪರಿಣಾಮ ಬೀರದ ಪಟಾಕಿಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಇವುಗಳನ್ನೇ ಹಸಿರು ಪಟಾಕಿ ಎಂದು ಕರೆಯಲಾಗುತ್ತದೆ’ ಎಂದು ಹೇಳುತ್ತಾರೆ ವ್ಯಾಪಾರಿಗಳು.

ನಗರದಲ್ಲಿ ಒಂಬತ್ತು ಪಟಾಕಿ ಅಂಗಡಿಗಳಿಗೆ ನಗರಸಭೆ ಅನುಮತಿ ನೀಡಿದೆ. ಮೇಘಾ ಕಾಂಪ್ಲೆಕ್ಸ್‌ ಬಳಿ ಇರುವ ಖಾಲಿ ನಿವೇಶನದಲ್ಲಿ ವ್ಯಾಪಾರಿಗಳು ಅಂಗಡಿಗಳನ್ನು ಇಟ್ಟಿದ್ದಾರೆ. ಶುಕ್ರವಾರವೇ ಮಳಿಗೆಗಳನ್ನು ತೆರೆದಿದ್ದರೂ ಹೆಚ್ಚಿನ ವ್ಯಾಪಾರ ನಡೆದಿಲ್ಲ. ನರಕ ಚತುರ್ದಶಿ ದಿನವಾದ ಶನಿವಾರ ಜನರು ಸ್ವಲ್ಪ‍ ಪ್ರಮಾಣದಲ್ಲಿ ಪಟಾಕಿಗಳನ್ನು ಖರೀದಿಸುತ್ತಿದ್ದಾರೆ. ಮಾರಾಟಕ್ಕೆ ಇನ್ನೂ ಎರಡು ದಿನಗಳ ಅವಕಾಶ ಇರುವುದರಿಂದ ಸ್ವಲ್ಪವಾದರೂ ವಹಿವಾಟು ನಡೆಸುವ ನಿರೀಕ್ಷೆಯಲ್ಲಿ ಮಾರಾಟಗಾರರು ಇದ್ದಾರೆ.

ಹೆಚ್ಚು ಮಾಲಿನ್ಯಕಾರಕ ಅಲ್ಲ ಮತ್ತು ಜಾಸ್ತಿ ಸದ್ದು ಮಾಡದ ಪಟಾಕಿಗಳೇ ಮಳಿಗೆಗಳಲ್ಲಿವೆ. ಸುರ್‌ಸುರ್‌ಬತ್ತಿ,ಹೂಕುಂಡ, ಪೆನ್ಸಿಲ್‌, ತಂತಿ ಮತಾಪು, ಬೆಂಕಿಪೊಟ್ಟಣ, ನೆಲಚಕ್ರ ಸೇರಿದಂತೆ ಬಣ್ಣಬಣ್ಣದ ಬೆಳಕನ್ನು ಸೂಸುವ ಆಕರ್ಷಕ ಪಟಾಕಿಗಳು ಲಭ್ಯವಿವೆ. ಬಾಕ್ಸ್‌ಗೆ ₹60ರಿಂದ ₹3000 ಬೆಲೆಯ ಪಟಾಕಿಗಳು ಇವೆ.ಎಲ್ಲ ಪಟಾಕಿಗಳನ್ನು ತಮಿಳುನಾಡಿನ ಶಿವಕಾಶಿಯಿಂದ ತರಲಾಗಿದೆ.

ಗ್ರಾಹಕರು ಕಡಿಮೆ: ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಜನರು ಪಟಾಕಿ ಖರೀದಿಗೆ ಮುಗಿ ಬೀಳುತ್ತಿದ್ದರು. ಈ ಬಾರಿ ಅಂಗಡಿಗಳು ಖಾಲಿ ಖಾಲಿಯಾಗಿವೆ. ಬೆರಳೆಣಿಕೆಯ ಮಂದಿಯಷ್ಟೇ ಖರೀದಿ ಮಾಡುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಇಷ್ಟವಾಗುವ, ಬೆಳಕು ಸೂಸುವ ಸಣ್ಙಪುಟ್ಟ ಪಟಾಕಿಗಳನ್ನು ಕೊಳ್ಳುತ್ತಿದ್ದಾರೆ. ಯುವಕರು ಸ್ವಲ್ಪ ದೊಡ್ಡ ಪಟಾಕಿಗಳನ್ನು ಖರೀದಿ ಮಾಡುತ್ತಿದ್ದಾರೆ.

ಶೇ 50ರಷ್ಟು ವ್ಯಾಪಾರ
‘ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವ್ಯಾಪಾರವೇ ಇಲ್ಲ. ಹಸಿರು ಪಟಾಕಿಗಳ ಮಾರಾಟಕ್ಕಷ್ಟೇ ಅನುಮತಿ ಇದೆ. ಅದನ್ನೇ ತಂದಿದ್ದೇವೆ. ಗ್ರಾಹಕರು ತುಂಬಾ ಕಡಿಮೆ ಇದ್ದಾರೆ’ ಎಂದು ಪಟಾಕಿ ವ್ಯಾಪಾರಿ ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ಬಾರಿಯ ಶೇ 50ರಷ್ಟು ವ್ಯಾಪಾರ ಇಲ್ಲ. ಇಷ್ಟು ವ್ಯಾಪಾರ ಆಗುತ್ತಿದೆಯಲ್ಲಾ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದೇವೆ. ಕೋವಿಡ್‌ ಕಾರಣ ಒಂದು ಕಡೆಯಾದರೆ, ಪಟಾಕಿ ಬಳಕೆಗೆ ಸಂಬಂಧಿಸಿದಂತೆ ಕೊನೆ ಕ್ಷಣದವರೆಗೂ ಇದ್ದ ಗೊಂದಲ ಮತ್ತೊಂದೆಡೆ. ಕೆಲವು ವರ್ಷಗಳಿಂದೀಚೆಗೆ ಹೆಚ್ಚು ಮಾಲಿನ್ಯಕಾರಕ ಪಟಾಕಿಗಳ ಉತ್ಪಾದನೆ ಕಡಿಮೆಯಾಗಿದೆ. ಹಸಿರು ಪಟಾಕಿಗಳ ತಯಾರಿಕೆಗೆ ಹೆಚ್ಚು ಗಮನ ನೀಡಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂಬ ಸುದ್ದಿ ಹರಡಿದ್ದರಿಂದ ಮತ್ತು ನಂತರ ಹಸಿರು ಪಟಾಕಿ ಬಳಸಬಹುದು ಎಂದು ಹೇಳಿದ್ದರಿಂದ ಗೊಂದಲ ಉಂಟಾಯಿತು’ ಎಂದು ಶ್ರೀಕಂಠೇಶ್ವರ ಎಂಟರ್‌ಪ್ರೈಸಸ್‌ನ ರಘು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡು ದಿನಗಳ ಹಿಂದಿನ ಸ್ಥಿತಿ ನೋಡಿದರೆ ಈ ಬಾರಿ ಪಟಾಕಿ ವ್ಯಾಪಾರವೇ ಆಗುವುದಿಲ್ಲ ಎಂದು ಕೊಂಡಿದ್ದೆವು. ಆದರೆ, ಸ್ವಲ್ಪ ಪ್ರಮಾಣದಲ್ಲಿ ಜನರು ಈಗ ಬರುತ್ತಿದ್ದಾರೆ. ಇನ್ನೂ ಎರಡು ದಿನ ಮಾರಾಟಕ್ಕೆ ಅವಕಾಶ ಇದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT