ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಗಳ: ವೈದ್ಯರಿಲ್ಲದೆ ಗ್ರಾಮಸ್ಥರ ಪರದಾಟ

ತಿಂಗಳಿಂದ ಒಬ್ಬರು ನರ್ಸ್‌ನಿಂದ ಕರ್ತವ್ಯ ನಿರ್ವಹಣೆ, ತಕ್ಷಣವೇ ಸಿಬ್ಬಂದಿ ನೇಮಕಕ್ಕೆ ಆಗ್ರಹ
Last Updated 15 ಆಗಸ್ಟ್ 2020, 20:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕೋವಿಡ್ 19 ಕಾರಣದಿಂದ ಖಾಸಗಿ ಕ್ಲಿನಿಕ್‌ಗಳು ಮುಚ್ಚಿವೆ. ಔಷಧ ಅಂಗಡಿಗಳಲ್ಲಿ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಸಾಮಾನ್ಯ ಕಾಯಿಲೆಗಳಿಗೆ ಔಷಧ ಸಿಗುತ್ತಿಲ್ಲ. ಇತ್ತ, ತಾಲ್ಲೂಕಿನ ಹಂಗಳದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಇಲ್ಲದೆ ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ.

ಹಂಗಳ ಗ್ರಾಮ ಹೋಬಳಿ ಕೇಂದ್ರವಾಗಿದ್ದು ಸುತ್ತಮುತ್ತಲಿನ ಗ್ರಾಮಗಳಾದ ಗೋಪಾಲಪುರ ದೇವರಹಳ್ಳಿ, ಕಲ್ಲಿಗೌಡನಹಳ್ಳಿ ಗ್ರಾಮಸ್ಥರು ಸೇರಿದಂತೆ ಬಂಡೀಪುರ ಭಾಗದಲ್ಲಿ ಇರುವ ಬುಡಕಟ್ಟು ಜನಾಂಗದವರು ಕೂಡ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ.

ಆಸ್ಪತ್ರೆಯಲ್ಲಿ ತಿಂಗಳಿನಿಂದ ವೈದ್ಯರಿಲ್ಲ. ಒಬ್ಬರು ನರ್ಸ್ ಮಾತ್ರ ಇದ್ದಾರೆ. ‘ಡಿ’ ಗ್ರೂಪ್ ನೌಕರರೂ ಇಲ್ಲ. ಇದರಿಂದಾಗಿ ಚಿಕಿತ್ಸೆಗಾಗಿ ಈ ಆರೋಗ್ಯ ಕೇಂದ್ರವನ್ನು ಅವಲಂಬಿಸಿದವರಿಗೆ ತೊಂದರೆ ಆಗುತ್ತಿದೆ.

ಇತ್ತೀಚೆಗೆ ಚಳಿ ಆರಂಭವಾಗಿದ್ದು, ಗಾಳಿಯೂ ಜೋರಾಗಿ ಬೀಸುತ್ತಿದೆ. ಜನರು ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗುವುದರಿಂದಾಗಿ ಆಗಿಂದಾಗ್ಗೆ ಜ್ವರ, ಕೆಮ್ಮು, ಮೈ ಕೈ ನೋವುಗಳಿಂದ ಬಳಲುತ್ತಾರೆ. ಈ ಹಿಂದೆ, ಗ್ರಾಮೀಣ ಭಾಗದ ಜನರು ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ ಆದರೆ, ಔಷಧ ಅಂಗಡಿಗಳಿಗೆ ಹೋಗಿ ನೇರವಾಗಿ ಮಾತ್ರೆ, ಸಿರಪ್‌ ಪಡೆದುಕೊಳ್ಳುತ್ತಿದ್ದರು. ಕೋವಿಡ್‌ನಿಂದಾಗಿ ಈಗ ಔಷಧ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಔಷಧಗಳು ಸಿಗುತ್ತಿಲ್ಲ.

‘ಪ್ರತಿ ನಿತ್ಯ ನೂರಾರು ಜನರು ಈ ಆಸ್ಪತ್ರೆಗೆ ಬರುತ್ತಾರೆ. ಇಲ್ಲಿನ ಸಮಸ್ಯೆ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಶಾಸಕರ ಗಮನಕ್ಕೆ ತರಲಾಗಿದ್ದರೂ ಪ್ರಯೋಜನ ಆಗಿಲ್ಲ. ಶೀಘ್ರವಾಗಿ ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ರೈತ ಮುಖಂಡ ಹಂಗಳ ಮಹದೇವಪ್ಪ ಎಚ್ಚರಿಕೆ ನೀಡಿದರು.

‘ಸಮಸ್ಯೆ ಇರುವ ವಿಚಾರ ಗಮನಕ್ಕೆ ಬಂದಿದೆ.‌ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಅವರ ಬಳಿ ಮಾತನಾಡಿ, ವೈದ್ಯರ ವ್ಯವಸ್ಥೆ ಮಾಡಲಾಗುವುದು’ ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟಸ್ವಾಮಿ ಅವರು, ‘ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಉನ್ನತ ಶಿಕ್ಷಣಕ್ಕಾಗಿ ಹೋಗಿದ್ದಾರೆ. ಅಲ್ಲಿಗೆ ಯಾರೂ ನೇಮಕವಾಗಿಲ್ಲ. ಕಾಯಂ ಆಗಿ ನೇಮಕವಾಗುವವರೆಗೆ ಬೇರೆ ಆರೋಗ್ಯ ಕೇಂದ್ರದ ವೈದ್ಯರನ್ನು ವಾರದಲ್ಲಿ ಮೂರು ದಿನ ಕರ್ತವ್ಯ ನಿರ್ವಹಿಸುವಂತೆ ತಿಳಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT