ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿಯೂ ಚಾಮರಾಜೇಶ್ವರ ರಥೋತ್ಸವ ಇಲ್ಲ

ಆಷಾಢ ಮಾಸದ ವಿಶೇಷ ಪೂಜೆ, ಶುಕ್ರವಾರಗಳಂದು ದೇವಾಲಯ ಪ್ರವೇಶಕ್ಕೆ ನಿರ್ಬಂಧ
Last Updated 9 ಜುಲೈ 2021, 17:05 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ದೇವಾಲಯದಲ್ಲಿ ಆಷಾಢ ಮಾಸದಲ್ಲಿ ನಡೆಯುವ ವಾರ್ಷಿಕ ರಥೋತ್ಸವ ಈ ಬಾರಿಯೂ ನಡೆಯುವುದಿಲ್ಲ.

ಕೋವಿಡ್‌ ಕಾರಣದಿಂದ ದೇವಾಲಯದಲ್ಲಿ ಆಷಾಢ ಅಮಾವಾಸ್ಯೆ ದಿನ ನಡೆಯುವ ವಿಶೇಷ ಪೂಜೆ, ಇದೇ ತಿಂಗಳಲ್ಲಿ ನಡೆಯುವ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಹಾಗೂ ತಿಂಗಳು ನಾಲ್ಕು ಆಷಾಢ ಶುಕ್ರವಾರಗಳಂದು (ಇದೇ 16, 23, 30 ಮತ್ತು ಆಗಸ್ಟ್‌ 6) ಭಕ್ತರು ಹಾಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದಾರೆ.

ಈ ಬಾರಿ ಇದೇ 23ರಂದು ಜಾತ್ರೋತ್ಸವ ನಡೆಯಬೇಕಿತ್ತು. ಹೊಸ ಬ್ರಹ್ಮ ರಥ ನಿರ್ಮಾಣವಾಗದಿರುವ ಕಾರಣಕ್ಕೆ 2017ರಿಂದ ದೇವಾಲಯದಲ್ಲಿ ವಾರ್ಷಿಕ ರಥೋತ್ಸವ ನಡೆಯುತ್ತಿಲ್ಲ. ಕಳೆದ ವರ್ಷ ರಥದ ನಿರ್ಮಾಣ ಆಗಿರಲಿಲ್ಲ. ಅದರ ಜೊತೆಗೆ ಕೋವಿಡ್‌ ಹಾವಳಿಯಿಂದಾಗಿ ಆಷಾಢ ಶುಕ್ರವಾರಗಳು ಹಾಗೂ ವಿಶೇಷ ದಿನಗಳಂದು ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಈ ವರ್ಷ ರಥ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಜಾತ್ರೆಯ ವೇಳೆಗೆ ಸಿದ್ಧವಾಗಿ ರಥೋತ್ಸವ ನಡೆಯಬಹುದು ಎಂಬ ನಿರೀಕ್ಷೆ ಭಕ್ತರಲ್ಲಿ ಇತ್ತು. ಆದರೆ, ಕೋವಿಡ್‌ ಅದಕ್ಕೆ ಅವಕಾಶ ಕೊಟ್ಟಿಲ್ಲ. ಬೆಂಗಳೂರಿನಲ್ಲಿ ರಥ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಶೇ 80ರಷ್ಟು ಪೂರ್ಣಗೊಂಡಿದೆ ದೇವಾಲಯದ ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.

ಕೋವಿಡ್‌ ಹಾವಳಿ ಇಲ್ಲದಿದ್ದರೆ, ಲಾಕ್‌ಡೌನ್‌ ಹೇರದಿದ್ದರೆ ರಥ ಸಿದ್ಧಗೊಳ್ಳುತ್ತಿತ್ತು. ಈಗ ದೇವಾಲಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದರಿಂದ ರಥ ಸಿದ್ಧವಾದರೂ ಜಾತ್ರೆ ನಡೆಯುವುದಿಲ್ಲ. ಹಾಗಾಗಿ, ಸತತ ಐದನೇ ವರ್ಷವೂ ವಿಶೇಷ ಹಾಗೂ ಅಪರೂಪದ ಜಾತ್ರೆಯಲ್ಲಿ ಭಾಗವಹಿಸುವುದರಿಂದ ಭಕ್ತರು ವಂಚಿತರಾಗಲಿದ್ದಾರೆ.

ಜಾತ್ರೆಯ ವಿಶೇಷ
ಚಾಮರಾಜೇಶ್ವರಸ್ವಾಮಿ ದೇವಸ್ಥಾನಕ್ಕೆ 200ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಎಲ್ಲೂ ರಥೋತ್ಸವ ನಡೆಯುವುದಿಲ್ಲ. ಹಾಗಾಗಿ, ಇಲ್ಲಿನ ಜಾತ್ರೆ ಬಲು ಅಪರೂಪ.ಜಾತ್ರೆಯ ದಿನದಂದು ಜಿಲ್ಲೆಯ, ಹೊರ ಜಿಲ್ಲೆಗಳ ಸಾವಿರಾರು ನವ ದಂಪತಿ ದೇವಸ್ಥಾನಕ್ಕೆ ಬಂದು ಹರಕೆ ಒಪ್ಪಿಸುವುದು ವಾಡಿಕೆ. ಆಷಾಢ ಮಾಸವನ್ನು ಶೂನ್ಯಮಾಸ ಎಂದು ಕರೆಯುತ್ತಾರೆ. ಈ ಮಾಸದಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು ದೂರ ಇರುತ್ತಾರೆ. ಆದರೆ, ಈ ರಥೋತ್ಸವ ನವದಂಪತಿಯನ್ನು ಒಂದುಗೂಡಿಸುತ್ತಿತ್ತು.

2017ರಲ್ಲಿ ಕಿಡಿಗೇಡಿಯೊಬ್ಬ ಬ್ರಹ್ಮರಥಕ್ಕೆ ಬೆಂಕಿ ಹಾಕಿ ಸುಟ್ಟ ನಂತರ ಜಾತ್ರೆ ರದ್ದಾಗಿದೆ. ಜಾತ್ರೋತ್ಸವ ಸಾಂಪ್ರದಾಯಿಕ ಪೂಜೆ ಪುನಸ್ಕಾರಕ್ಕಷ್ಟೇ ಸೀಮಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT