ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಲಾಕ್‌ಡೌನ್‌: ಮಾಂಸಖಂಡಗಳ ಬಿಗಿತ; ಕಂಗೆಟ್ಟ ಎಳೆಯರು

ಸಮನ್ವಯ ಶಿಕ್ಷಣದ ಅಡಿಯಲ್ಲಿ ಮನೆಯಲ್ಲೇ ಇರುವ ವಿಶೇಷ ಮಕ್ಕಳಿಗೆ ಸಿಗುತ್ತಿಲ್ಲ ಚಿಕಿತ್ಸೆ
Last Updated 3 ಮೇ 2020, 2:02 IST
ಅಕ್ಷರ ಗಾತ್ರ

ಯಳಂದೂರು: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಸಮನ್ವಯ ಶಿಕ್ಷಣ ಯೋಜನೆ ಅಡಿಯಲ್ಲಿ ಮನೆಯಲ್ಲೇ ಶಿಕ್ಷಣ ಪಡೆಯುತ್ತಿರುವ ತೀವ್ರ ಮಾನಸಿಕ, ದೈಹಿಕ ಹಾಗೂ ಇತರ ವೈಕಲ್ಯ ಹೊಂದಿರುವ ಮಕ್ಕಳಿಗೆ ಲಾಕ್‌ಡೌನ್‌ ಅವಧಿಯಲ್ಲಿ ಚಿಕಿತ್ಸೆ ಸಿಗದೆ ತೊಂದರೆಯಾಗಿದೆ. ಈ ಮಕ್ಕಳಪಾಲನೆ ಮಾಡಲು ಸಾಧ್ಯವಾಗದೆ ಪೋಷಕರೂ ಕಂಗೆಟ್ಟಿದ್ದಾರೆ.

ಮಿದುಳುವಾತ, ಆಟಿಸಂ, ಕುಷ್ಠ, ಕುಬ್ಜತೆ, ನರದ ತೊಂದರೆ, ಮಾಂಸ ಖಂಡಗಳ ದೌರ್ಬಲ್ಯ,ಬಹುವೈಕಲ್ಯ ಸೇರಿದಂತೆ 21 ಅಂಗವೈಕಲ್ಯಗಳನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಗುರುತಿಸಿದ್ದು, ಸಮನ್ವಯ ಶಿಕ್ಷಣ ಯೋಜನೆ ಅಡಿಯಲ್ಲಿಆಯಾ ಶಾಲಾ ವ್ಯಾಪ್ತಿಯಲ್ಲಿ 6 ರಿಂದ 16 ವರ್ಷದ ಮಕ್ಕಳಿಗೆ 1 ರಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ 1,186 ಮಂದಿ ಈ ಯೋಜನೆಯಡಿ ಶಿಕ್ಷಣ ಪಡೆಯುತ್ತಿದ್ದಾರೆ. ಇವರಲ್ಲಿ 97 ಮಕ್ಕಳು ಶಾಲೆಗೆ ಹೋಗುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಮನೆಯಲ್ಲೇ ಅವರಿಗೆ ಶಿಕ್ಷಣ ನೀಡಲಾಗುತ್ತದೆ. ಯಳಂದೂರು ತಾಲ್ಲೂಕಿನಲ್ಲಿ 154 ವಿಶೇಷ ಮಕ್ಕಳನ್ನು ಗುರುತಿಸಲಾಗಿದೆ. 12 ಮಕ್ಕಳು ಗೃಹಾಧಾರಿತಶಿಕ್ಷಣಕ್ಕೆ ಒಳಪಟ್ಟಿದ್ದಾರೆ. ಈಮಕ್ಕಳ ಪೋಷಕರಿಗೆ ಸಾರಿಗೆ ಭತ್ಯೆ, ಬೆಂಗಾವಲು ಭತ್ಯೆ ಮತ್ತುಹೆಣ್ಣು ಮಕ್ಕಳಿಗೆ ಶಿಷ್ಯ ವೇತನ ನೀಡುವುದರ ಜೊತೆಗೆ ಥೆರಪಿಯನ್ನೂ ಕೊಡಿಸಲಾಗುತ್ತದೆ.

ತಾಲ್ಲೂಕು ಮಟ್ಟದಲ್ಲಿರುವ ಶಾಲಾಪೂರ್ವ ಸಿದ್ಧತಾ ಕೇಂದ್ರಗಳಿಗೆ (ಎಸ್‌ಆರ್‌ಸಿ), ವಾರದಲ್ಲಿ ಎರಡು ಬಾರಿ ಭೇಟಿ ನೀಡುವ ಥೆರಪಿಸ್ಟ್‌ಗಳು ಮಕ್ಕಳಿಗೆ ಚಿಕಿತ್ಸೆ ನೀಡುತ್ತಾರೆ. ಸಾಮಾನ್ಯವಾಗಿ ಮಸಾಜ್ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಥೆರಪಿಸ್ಟ್‌ಗಳು ಲಾಕ್‌ಡೌನ್‌ ಸಮಯದಲ್ಲಿ ಬಂದಿಲ್ಲ. ಇದರಿಂದ ಮಕ್ಕಳಲ್ಲಿ ಮಾಂಸ ಖಂಡಗಳ ಬಿಗಿತ ಹಾಗೂ ಇತರೆ ಸಮಸ್ಯೆ ಕಾಣಿಸಿಕೊಂಡಿದೆ.

‘ಮಾಂಸ ಖಂಡಗಳ ಬಿಗಿತದಿಂದ ಮಗು ಬಿದ್ದಲ್ಲಿಯೇ ಹೊರಳಾಡುತ್ತಿದೆ. ಆಗಾಗ ಮಸಾಜ್(ಥೆರಪಿ) ಮಾಡುತ್ತಲೇ ಇರಬೇಕು. ಇಲ್ಲದಿದ್ದರೆ, ತೂಕ ಹೆಚ್ಚಾಗುತ್ತದೆ. ಅದರಲ್ಲೂಹೆಣ್ಣು ಮಗುವಾದರೆ ಸಂಭಾಳಿಸುವುದು ಇನ್ನೂ ಕಷ್ಟ. ನಮ್ಮ ಮಗುವಿಗೆ ವಾರದಲ್ಲಿ ಎರಡು ದಿನ ಸ್ಪರ್ಶ ಥೆರಪಿ ಮಾಡಲಾಗುತ್ತಿದ್ದು, ಇದರಿಂದ ಅವಳು ಸಕ್ರಿಯವಾಗುತ್ತಿದ್ದಳು. ಕೋವಿಡ್‌–19 ಕಾರಣಕ್ಕಾಗಿ ಥೆರಪಿ ನಿಂತಿದೆ. ಒಂದೆಡೆ ಮಲಗಿ ತೂಕ ಹೆಚ್ಚಾಗುತ್ತಿದೆ. ಆಕೆಯನ್ನು ನೋಡಿಕೊಳ್ಳುವುದೇ ಕಷ್ಟವಾಗಿದೆ’ ಎಂದು ಬಳೇಪೇಟೆಯ ಸುಮಯಾ ಪೋಷಕರು ಅಳಲು ತೋಡಿಕೊಂಡರು.

‘ಸದ್ಯ ಥೆರಪಿಸ್ಟ್‌ಗಳು ಬರುತ್ತಿಲ್ಲ. ಆದರೂ, ಇಂತಹ ಮಕ್ಕಳಮನೆಗೆ ತೆರಳಿ ಪೋಷಕರಿಗೆ ಮಾರ್ಗದರ್ಶನ ಮಾಡಲಾಗುತ್ತಿದೆ’ ಎಂದು ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕಿಎಸ್‌.ಭಾಗ್ಯಾ ತಿಳಿಸಿದರು.

ಇನ್ನಷ್ಟು ದಿನ ಇದೇ ಪರಿಸ್ಥಿತಿ

ಜಿಲ್ಲೆಯಲ್ಲಿ ಥೆರಪಿಸ್ಟ್‌ಗಳು ಐವರು ಇದ್ದರು. ತಾಲ್ಲೂಕು ಕೇಂದ್ರಗಳಿಗೆ ವಾರಕ್ಕೆ ಎರಡು ದಿನ ಹೋಗಿ ಮಕ್ಕಳಿಗೆ ಥೆರಪಿ ನೀಡುತ್ತಿದ್ದರು. ಲಾಕ್‌ಡೌನ್‌ ಆರಂಭಕ್ಕೂ ಮುನ್ನ ಜಿಲ್ಲೆಯಲ್ಲಿದ್ದ ಥೆರಪಿಸ್ಟ್‌ಗಳ ಗುತ್ತಿಗೆ ಅವಧಿ ಮುಕ್ತಾಯವಾಗಿಗಿದ್ದರಿಂದ ಥೆರಪಿ ನಿಂತಿದೆ. ಹಾಗಾಗಿ ಇನ್ನೂ ಒಂದೆರಡು ತಿಂಗಳು ಇದೇ ಪರಿಸ್ಥಿತಿ ಇರುವುದು ಖಚಿತ.

‘ಈ ವರ್ಷಕ್ಕೆ ಹೊಸದಾಗಿ ನೇಮಕಾತಿ ಮಾಡಿಕೊಳ್ಳಬೇಕಾಗಿದೆ. ಜಾಹೀರಾತು ನೀಡಿ, ಬಂದ ಅರ್ಜಿಗಳನ್ನು ಪರಿಶೀಲಿಸಿ ತಾಲ್ಲೂಕು ಮಟ್ಟದಲ್ಲಿ ನೇಮಕ ಮಾಡಿಕೊಳ್ಳುವುದು ಕ್ರಮ. ಲಾಕ್‌ಡೌನ್‌ ಮುಗಿದ ಬಳಿಕ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT