ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಂಚಾವತಾರ ಮೂಲಕ ಭ್ರಷ್ಟರಿಗೆ ಸಿಂಹಸ್ವಪ್ನ’

ಹಿರಿಯ ರಂಗಕರ್ಮಿ ಮಾಸ್ಟರ್‌ ಹಿರಣ್ಣಯ್ಯಗೆ ಶ್ರದ್ಧಾಂಜಲಿ ಅರ್ಪಣೆ
Last Updated 2 ಮೇ 2019, 14:45 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಾಜಕೀಯ ವಿಡಂಬನಾತ್ಮಕ ನಾಟಕ ‘ಲಂಚಾವತಾರ’ದ ಮೂಲಕ ಮಾಸ್ಟರ್‌ ಹಿರಣ್ಣಯ್ಯ ಅವರು ಭ್ರಷ್ಟ ರಾಜಕಾರಣಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದರು’ ಎಂದು ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಅವರು ಅಭಿಪ್ರಾಯಪಟ್ಟರು.

ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜನಾರ್ದನ ಪ್ರತಿಷ್ಠಾನ ಗುರುವಾರ ಹಮ್ಮಿಕೊಂಡಿದ್ದ ಮಾಸ್ಟರ್‌ ಹಿರಣ್ಣಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿರಣ್ಣಯ್ಯ ಅವರ 'ಲಂಚಾವತಾರ' ನಾಟಕ ರಾಜ್ಯದ ಮನೆ ಮಾತಾಗಿ ಜನಮಾನಸದಲ್ಲಿ ನೆಲೆಯೂರಿತ್ತು. ಅವರು ಅತ್ಯಾದ್ಭುತ ಕನ್ನಡ ಮಾತುಗಳಿಂದಎಲ್ಲರನ್ನು ಸೆಳೆದಿದ್ದರು. 60ರ ದಶಕದಲ್ಲಿ ಈ ನಾಟಕ ಅವರ ಬದುಕಿಗೆ ತಿರುವು ನೀಡಿತು’ ಎಂದರು.

‘ನಾಟಕದ ಮೂಲಕವೇ ಅಂದಿನ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಹಿರಣ್ಣಯ್ಯ ಮೂರು ದಶಕಗಳ ಕಾಲ ಎಲ್ಲಿಲ್ಲದಂತೆ ಕಾಡಿದ್ದರು. ಲಂಚಾವತಾರ ನಾಟಕದಲ್ಲಿ ಮಾಸ್ಟರ್ ಹಿರಣ್ಣಯ್ಯ ಹಾಗೂ ಅವರ ಮಗ ಬಾಬು ಹಿರಣ್ಣಯ್ಯ ಅದ್ಭುತವಾಗಿ ನಟನೆ ಮಾಡಿದ್ದರು ಎಂದು ಹೇಳಿದರು.

ನಾಟಕ ಕಂಪೆನಿಯ ಜವಾಬ್ದಾರಿ: ‘ಮಾಸ್ಟರ್ ಹಿರಣ್ಣಯ್ಯ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ, ಚಿತ್ರ ಸಾಹಿತಿ ಮತ್ತು ರಂಗಕರ್ಮಿ. ಬಾಲ್ಯದಿಂದಲೇ ರಂಗಭೂಮಿಯತ್ತ ಆಕರ್ಷಿತರಾಗಿದ್ದರು. ತಂದೆಯವರ ಅಕಾಲಿಕ ನಿಧನ ನಂತರ ‘ಕೆ.ಹಿರಣ್ಣಯ್ಯ ಮಿತ್ರಮಂಡಳಿ' ನಾಟಕ ಮಂಡಳಿಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತರು.

ಬಳಿಕಇವರು ನಾಟಕ ರಚನೆ, ನಿರ್ದೇಶನದಲ್ಲಿ ತೊಡಗಿಕೊಂಡರು. ಅದೇ ಸಂದರ್ಭದಲ್ಲಿ ತಮ್ಮ ಪ್ರಸಿದ್ಧ ನಾಟಕ ‘ಲಂಚಾವತಾರ'ದ ಮೂಲಕ ಸಮಾಜದಲ್ಲಿರುವ ಲಂಚದ ಪಿಡುಗನ್ನು ಕಟುವಾಗಿ ಟೀಕಿಸಿದ್ದರು’ ಎಂದು ತಿಳಿಸಿದರು.

ಅದ್ಭುತ ಮಾತುಗಾರ: ‘ಹಿರಣ್ಣಯ್ಯ ಅವರು ಅದ್ಭುತ ಮಾತುಗಾರ. ಮಾತುಗಾರಿಕೆಯಿಂದಲೇ ಅವರು ಪ್ರಸಿದ್ದರು. ಜನರು ಇವರ ಮಾತುಗಾರಿಕೆ ಹಾಗೂ ನಟನೆ ನೋಡುವ ಸಲುವಾಗಿಯೇ ನಾಟಕಕ್ಕೆ ಬರುತ್ತಿದ್ದರು. ಅವರ ಬಾಯಲ್ಲಿ ಕನ್ನಡ ಕೇಳುವುದೇ ಹಿತವಾಗಿತ್ತು. ಅಷ್ಟೊಂದು ಅದ್ಭುತವಾಗಿ ಕನ್ನಡ ನುಡಿಗಳು ಅವರಿಂದ ಹೊರಬರುತ್ತಿತ್ತು’ ಎಂದು ಹೇಳಿದರು.

ಭ್ರಷ್ಟರ ಎದೆಯಲ್ಲಿನಡುಕ: ಉಪನ್ಯಾಸಕ ಸುರೇಶ್ ಎನ್.ಋಗ್ವೇದಿ ಮಾತನಾಡಿ, ‘ಹಿರಣ್ಣಯ್ಯ ಅವರು ರಾಜಕೀಯ ವಿಡಂಬನೆ ಮೂಲಕ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದ್ದರು. ಭ್ರಷ್ಟಾಚಾರದ ಮೂಲವನ್ನು ಸಮಾಜದ ಮುಂದೆ ಇಡುತ್ತಿದ್ದರು. ಅವರ ನಾಟಕಗಳು ಭ್ರಷ್ಟ ರಾಜಕಾರಣಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿತ್ತು’ ಎಂದು ಹೇಳಿದರು.

ಜನಾರ್ಧನ ಪ್ರತಿಷ್ಠಾನದ ಅಧ್ಯಕ್ಷ ಅನಂತ ಪ್ರಸಾದ್ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

‘ಚಾಮರಾಜನಗರ ಸರಿಹೊಂದಲಿಲ್ಲ’
1960ರ ದಶಕದ ಆರಂಭದಲ್ಲಿ ತಮ್ಮ ನಾಟಕ ಕಂಪೆನಿಯೊಂದಿಗೆ ಚಾಮರಾಜನಗರಕ್ಕೆ ಹಿರಣ್ಣಯ್ಯ ಬಂದಿದ್ದರು. ಆ ಸಂದರ್ಭದಲ್ಲಿ ಇಲ್ಲಿ ‘ಲಂಚಾವತಾರ’ ನಾಟಕ ಪ್ರದರ್ಶನ ಕೊಟ್ಟರು. ಮೊದಲ ಪ್ರದರ್ಶನ ಸುಲಲಿತವಾಗಿ ಮೂಡಿಬಂತು.

ಎರಡನೇ ಪ್ರದರ್ಶನದ ವೇಳೆ ಗಲಾಟೆ ಶುರುವಾಯಿತು. ನೂಕು– ನುಗ್ಗಲು ಆರಂಭವಾಗಿ ಅನೇಕರು ಗಾಯಗೊಂಡರು. ಅಂದಿನಿಂದ ಇಂದಿನವರೆಗೂ ಅವರು ಹಾಗೂ ಅವರ ನಾಟಕ ಕಂಪೆನಿ ಗಡಿಜಿಲ್ಲೆಗೆ ಬರಲೇ ಇಲ್ಲ. ಅವರಿಗೂ ಚಾಮರಾಜನಗರಕ್ಕೂ ಸರಿ ಹೊಂದಲಿಲ್ಲ’ ಎಂದು ಕೆ.ವೆಂಕಟರಾಜು ಅವರು ಬೇಸರದ ನುಡಿಗಳನ್ನು ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT