ಭಾನುವಾರ, ಸೆಪ್ಟೆಂಬರ್ 26, 2021
21 °C
ಪ್ರಗತಿಪರ ಚಿಂತಕರ ಒಕ್ಕೂಟದಿಂದ ಕವಿ ಸಿದ್ಧಲಿಂಗಯ್ಯಗೆ ನುಡಿನಮನ

‘ಚರಿತ್ರೆಯ ದುರಂತಗಳ ಸತ್ಯ ಪ್ರತಿಪಾದಿಸಿದ್ದ ಸಾಹಿತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಈ ಸಮಾಜದಲ್ಲಿ ಶೋಷಣೆ, ಮೋಸ ವಂಚನೆ ಎಲ್ಲಿಯವರೆಗೆ ಇ‌ರುತ್ತದೋ, ಅಲ್ಲಿಯವರೆಗೆ ಕವಿ ಸಿದ್ಧಲಿಂಗಯ್ಯ ಅವರ ಕವನಗಳು ಜೀವಂತವಾಗಿರುತ್ತದೆ ಎಂದು ರಂಗಕರ್ಮಿ ಜನಾರ್ದನ್‌ (ಜನ್ನಿ) ಅವರು ಗುರುವಾರ ಅಭಿಪ್ರಾಯಪಟ್ಟರು. 

ಪ್ರಗತಿಪರ ಚಿಂತಕರ ಒಕ್ಕೂಟ ಹಮ್ಮಿಕೊಂಡಿದ್ದ ಕವಿ ಡಾ.ಸಿದ್ಧಲಿಂಗಯ್ಯ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಿದ್ಧಲಿಂಗಯ್ಯ ಅವರ ಸಾಹಿತ್ಯದಲ್ಲಿ ಸತ್ಯ ಮತ್ತು ಸತ್ವ ಇತ್ತು. ಎಲ್ಲರನ್ನೂ ಒಳಗೊಳ್ಳುವ ಗುಣ ಅವರಲ್ಲಿತ್ತು’ ಎಂದು ಸ್ಮರಿಸಿದರು. 

ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಅವರು ಮಾತನಾಡಿ, ‘ಸಿದ್ಧಲಿಂಗಯ್ಯ ಅವರು ಮೇರು ವ್ಯಕ್ತಿತ್ವಯುಳ್ಳ ಕವಿ. ಮಾತೃಹೃದಯಿಯಾಗಿದ್ದ ಅವರು ದೀನದಲಿತರು ಹಾಗೂ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರು ದಲಿತ ಸಂಘರ್ಷ ಸಮಿತಿ ಮೂಲಕ ಕಟ್ಟಿದ ಚಳವಳಿ ಇಂದಿಗೂ ಪ್ರಸ್ತುತವಾಗಿದೆ’ ಎಂದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟಗಾರ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, ‘ಸಿದ್ಧಲಿಂಗಯ್ಯ ಅವರು ರಚಿಸಿರುವ ಹೊಲೆ ಮಾದಿಗರ ಹಾಡು, ದಲಿತರಿಗೆ ವಂದೇ ಮಾತರಂ ಇದ್ದ ಹಾಗೆ. ದಲಿತ ಸಂಘಟನೆಗಳನ್ನು ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸಮಾಜದಲ್ಲಿ ನಿರಂತರವಾಗಿ ನಡೆಯುವ ಕ್ರೌರ್ಯದ ಬಗ್ಗೆ ಸಾಹಿತ್ಯ ಮೂಲಕ ಜಾಗೃತಿ ಮೂಡಿಸಿದರು’ ಎಂದರು. 

ಉಪನ್ಯಾಸಕ ರೇಣುಕಾರಾಧ್ಯ ಅವರು ಮಾತನಾಡಿ, ‘2000 ವರ್ಷಗಳ ಇತಿಹಾಸ ಹೊಂದಿರುವ ಕಾವ್ಯ ಪರಂಪರೆಯು ಎರಡು ಬಾರಿ ಪುನರ್‌ಜೀವನ ಕಂಡಿದೆ. ಒಮ್ಮೆ ವಚನ ಸಾಹಿತ್ಯ/ ಶರಣ ಚಳವಳಿಯ ಸಂದರ್ಭದಲ್ಲಿ ಹಾಗೂ ಮತ್ತೊಮ್ಮೆ ಸಿದ್ಧಲಿಂಗಯ್ಯ ಅವರು ಕವನ ಬರೆಯಲು ಆರಂಭಿಸಿದಾಗ. ಶತಮಾನದ ಕವಿ ಯಾರಾದರೂ ಇದ್ದರೆ ಅದು ಸಿದ್ಧಲಿಂಗಯ್ಯ. ಕಾವ್ಯ ಓದುವ ಹೊಸ ಮಾರ್ಗವನ್ನು ಹಾಕಿಕೊಟ್ಟವರು ಅವರು’ ಎಂದರು.  

ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಡಾ.ಹನೂರು ಕೃಷ್ಣಮೂರ್ತಿ ಅವರು ಮಾತನಾಡಿ, ‘ಸಿದ್ಧಲಿಂಗಯ್ಯ ಅವರದ್ದು ಚರಿತ್ರೆಯ ದುರಂತಗಳ ಸತ್ಯ ಪ್ರತಿಪಾದಿಸುವ ಸಾಹಿತ್ಯ’ ಎಂದು ಬಣ್ಣಿಸಿದರು. 

‘ಸಿದ್ಧಲಿಂಗಯ್ಯ ಅವರ ಸಾಹಿತ್ಯವು ನಮ್ಮ ಜಿಲ್ಲೆಯ ಮಂಟೇಸ್ವಾಮಿ ಕಾವ್ಯ ಚಳವಳಿಯ ಭಾಗದಂತೆ ತೋರುತ್ತದೆ. ಹಾಗಾಗಿ, ಈ ಜಿಲ್ಲೆಗೂ ಅವರಿಗೂ ಅವಿನಾಭವ ಸಂಬಂಧವಿದೆ’ ಎಂದರು.   

‘ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರತಿವರ್ಷ ಅವರ ಹೆಸರಿನಲ್ಲಿ ದತ್ತಿಉಪನ್ಯಾಸ ಏರ್ಪಡಿಸಬೇಕು. ಕನ್ನಡ ವಿಭಾಗದ ಗ್ರಂಥಾಲಯದಲ್ಲಿ ಅವರ ಎಲ್ಲ ಕೃತಿಗಳು ಸಿಗುವಂತೆ ಆಗಬೇಕು. ಸಿದ್ಧಲಿಂಗಯ್ಯನವರ ಗ್ರಂಥ ಭಂಡಾರದಲ್ಲಿರುವ ಕೆಲವು ಪುಸ್ತಕಗಳು ಸ್ನಾತಕೋತ್ತರ ಕೇಂದ್ರದ ಗ್ರಂಥಾಲಯಕ್ಕೆ ತರಲು ಪ್ರಯತ್ನ ನಡೆಸಬೇಕು’ ಎಂದು ಅವರು ಸಲಹೆ ನೀಡಿದರು. 

ಸಿದ್ಧಲಿಂಗಯ್ಯ ಅವರ ಒಡನಾಡಿ ಬಸವರಾಜು ದೇವನೂರು, ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಡಾ.ಪರಮೇಶ್ವರಪ್ಪ ಮಾತನಾಡಿದರು. 

ಜನಪದ ಮಹೇಶ್‌ ಅವರು ಹೋರಾಟದ ಹಾಡುಗಳನ್ನು ಹಾಡಿ ಗಮನಸೆಳೆದರು. ಬಸವಣ್ಣ, ಡಾ.ನಂಜರಾಜು ಹೊಂಗನೂರು, ರವಿಚಂದ್ರಪ್ರಸಾದ್ ಕಹಳೆ ಇದ್ದರು. 

‘ದಲಿತ ಕವಿ ಎಂದು ಹೇಳುವುದು ಸರಿಯಲ್ಲ'

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಸಿದ್ಧಲಿಂಗಯ್ಯ ಅವರು ತಮ್ಮ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ. ಸದಾ ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತುವ ಸಾಮಾಜಿಕ ನ್ಯಾಯಪರ ನಿಲುವನ್ನು ಅವರು ಹೊಂದಿದ್ದರು. ತಮ್ಮ ನೋವುಗಳನ್ನು ಬರಹಗಳ ಮೂಲಕ ಹೊರ ಹಾಕಿದ್ದರು. ಹೊಲೆ ಮಾದಿಗರ ಹಾಡು ಮುಂದೊಂದು ದಿನ ಕ್ರಾಂತಿಗೀತೆಯಾಗಬಹುದು ಎಂದು ಅವರು ಅಂದುಕೊಂಡಿರಲಿಲ್ಲ. ಈ ಹಾಡು ಎಲ್ಲರಲ್ಲೂ  ಹೋರಾಟ ಕಿಚ್ಚು, ಸ್ವಾಭಿಮಾನ ಹೆಚ್ಚಿಸಿತು’ ಎಂದು ಹೇಳಿದರು. 

‘ಎಲ್ಲ ಸಮುದಾಯವನ್ನು ಒಟ್ಟಿಗೆ ಕರೆದೊಯ್ಯುವ ಇಂತಹ ಕವಿಯನ್ನು ದಲಿತ ಕವಿ ಎನ್ನುವುದು ಸರಿಯಲ್ಲ. ಸಾಹಿತ್ಯವನ್ನು ಜಾತಿ ಆಧಾರವಾಗಿ ಬೇರ್ಪಡಿಸುವುದು ಸರಿಯಲ್ಲ. ಕನ್ನಡ ಸಾಹಿತ್ಯದಲ್ಲಿ ಸೇವೆ ಸಲ್ಲಿಸಿದ ದಲಿತ ಸಮುದಾಯದ ಕವಿ, ಬರಹಗಾರರನ್ನು ದಲಿತ ಕವಿಗಳು, ಬರಹಗಾರ ಎಂದು ಗುರುತಿಸುವ ಸಂಚು ನಡೆಯುತ್ತಿದೆ. ಇದು ಸರಿಯಲ್ಲ. ಜಾತಿಯ ಹೆಸರಿನಲ್ಲಿ ಕವಿಗಳನ್ನು ಪರಿಚಯಿಸುವ ಪರಿಪಾಠ ನಿಲ್ಲಬೇಕು’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು