ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಣಂ: ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹೂವಿಗೆ ಕೊರತೆ

Published 28 ಆಗಸ್ಟ್ 2023, 6:04 IST
Last Updated 28 ಆಗಸ್ಟ್ 2023, 6:04 IST
ಅಕ್ಷರ ಗಾತ್ರ

ಮಲ್ಲೇಶ ಎಂ.

ಗುಂಡ್ಲುಪೇಟೆ: ನೆರೆ ರಾಜ್ಯ ಕೇರಳದಲ್ಲಿ ಜನರು ಓಣಂ ಹಬ್ಬದ ಸಂಭ್ರಮದಲ್ಲಿದ್ದಾರೆ. ಹಾಗಾಗಿ, ತಾಲ್ಲೂಕಿನ ರೈತರು ಬೆಳೆಯುವ ಹೂವಿಗೆ ಬೇಡಿಕೆ ಹೆಚ್ಚಿದ್ದರೂ, ಈ ಬಾರಿ ಮಳೆ ಕೊರತೆಯಿಂದ ಹೂವಿನ ಕೊರತೆ ಉಂಟಾಗಿದೆ.

ತಾಲ್ಲೂಕಿನ ಅನೇಕ ರೈತರು ಓಣಂ ಹಬ್ಬವನ್ನು ಗುರಿಯಾಗಿಸಿಕೊಂಡು ವಿವಿಧ ಹೂವುಗಳನ್ನು ಬೆಳೆಯುತ್ತಾರೆ. ಬೇಡಿಕೆ ಹೆಚ್ಚು ಇರುವುದರಿಂದ ಬೆಲೆ ಜಾಸ್ತಿ ಸಿಗುತ್ತದೆ. ಈ ವರ್ಷವೂ ರೈತರು ಇದೇ ನಿರೀಕ್ಷೆಯಲ್ಲಿ ಚೆಂಡು ಹೂವು ಬೆಳೆದಿದ್ದರು.

‘ಮಳೆಯ ಕೊರತೆಯಿಂದ ರೈತರು ಅಂದಾಜಿದಷ್ಟು ಹೂ ಬರಲಿಲ್ಲ. ಕೆಲವರದ್ದು ಹೂ ಬಿಡುವ ಮುಂಚೆಯೇ ಬಿಸಿಲಿಗೆ ಒಣಗತೊಡಗಿತು. ಇದರಿಂದಾಗಿ ಹೂವಿನ ಕೊರತೆ ಉಂಟಾಗಿದೆ’ ಎಂದು ಬೆಳೆಗಾರ ಪುಟ್ಟಣ್ಣ ತಿಳಿಸಿದರು.

ಇದೇ 20ರಿಂದ ಓಣಂ ಸಂಭ್ರಮ ಶುರುವಾಗಿದೆ. 31ರವರೆಗೂ ಇರಲಿದೆ. ಸೋಮವಾರ (ಆ.28) ಅದ್ಧೂರಿ ಆಚರಣೆ ನಡೆಯಲಿದೆ. ಓಣಂನಲ್ಲಿ ಹೂವಿನ ರಂಗೋಲಿಗೆ (ಪೂಕಳಂ) ಮಹತ್ವ.

ಕೇರಳಿಗರು ಹತ್ತು ದಿನಗಳವರೆಗೆ ಮನೆಯಲ್ಲಿ ಹೂವಿನ ರಂಗೋಲಿ ಬಿಡಿಸಿ ಅಲಂಕರಿಸುತ್ತಾರೆ. ಹತ್ತು ದಿನಗಳಲ್ಲೂ ವಿವಿಧ ಬಣ್ಣಗಳ ಹೂವಿನಿಂದ ರಂಗೋಲಿಯನ್ನು ಬಿಡಿಸುವುದು ಸಂಪ್ರದಾಯ.

ಹಾಗಾಗಿ, ಬಣ್ಣದ ಹೂವುಗಳಾದ ಚೆಂಡುಹೂ, ಕಾಕಡ, ಸೇವಂತಿ, ಮಲ್ಲಿಗೆ ಸೇರಿದಂತೆ ಬಿಡಿ ಹೂಗಳಿಗೆ ಕೇರಳದಲ್ಲಿ ಹೆಚ್ಚಿನ ಬೇಡಿಕೆ ಇದೆ.

ಈ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ತಾಲ್ಲೂಕಿನ ರೈತರು ಮೇ ತಿಂಗಳ ಕೊನೆಯಲ್ಲಿ ನಾಟಿ ಮಾಡುತ್ತಾರೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಹೂವುಗಳನ್ನು ಕಟಾವು ಮಾಡಿ ಕೇರಳಿಗರಿಗೆ ಕ್ವಿಂಟಲ್‌ಗಟ್ಟಲೆ ಮಾರಾಟ ಮಾಡುತ್ತಾರೆ.

ಸ್ಥಳೀಯ ವ್ಯಾಪಾರಿಗಳಲ್ಲದೆ, ಕೇರಳದ ವ್ಯಾಪಾರಿಗಳು ಕೂಡ ತಾಲ್ಲೂಕಿಗೆ ಬಂದು ರೈತರಿಂದ ನೇರವಾಗಿ ಹೂವು ಖರೀದಿಸುತ್ತಾರೆ.

ಕಳೆದ ವರ್ಷ ಹೆಚ್ಚು ಮಳೆಯಾಗಿ ನಿರೀಕ್ಷೆಗಿಂತ ಹೆಚ್ಚು ಹೂ ಇಳುವರಿ ಬಂದಿತ್ತು. ಹಾಗಾಗಿ, ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲೇ ಹೂವಿನ ವ್ಯಾಪಾರ ನಡೆದಿತ್ತು. ಈ ಸಲ ಹೂವಿನ ವ್ಯಾಪಾರದ ಸದ್ದಿಲ್ಲ. ಹಬ್ಬದ ಸಂದರ್ಭದಲ್ಲೂ ರೈತರಿಗೆ ಹೆಚ್ಚು ಲಾಭ ಸಿಕ್ಕಿಲ್ಲ.

ಧಾರಣೆ ಹೆಚ್ಚು; ಲಾಭ ಕಡಿಮೆ

ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಇಕ್ಕೆಲಗಳಲ್ಲಿ ಗೂಡಂಗಡಿಗಳನ್ನು ಮಾಡಿ ಹೂವುಗಳ ಮಾರಾಟಕ್ಕೆ ತೊಡಗುತ್ತಾರೆ. ಕೇರಳದಲ್ಲಿ ಬಿಡಿ ಹೂಗಳು ಕೆಜಿ ಲೆಕ್ಕದಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಚೆಂಡು ಹೂವು ₹50 ರಿಂದ ₹100 ಸೇವಂತಿಗೆ ₹150 ಕ‌ನಕಾಂಬರ ₹2000 ಮಲ್ಲಿಗೆ ₹200 ವರೆಗೆ ಧಾರಣೆಯಿದೆ. ‘ರೈತರಿಂದ ಹೂ ಖರೀದಿ ಮಾಡಿ ಕೇರಳಿಗರಿಗೆ ಮಾರಾಟ ಮಾಡುತ್ತಿದ್ದೆವು. ಆದರೆ ಈ ಬಾರಿ ಹೂವಿನ ಕೊರತೆಯಿಂದ ಸರಿಯಾದ ರೀತಿಯಲ್ಲಿ ಹೂ ಸಿಗುತ್ತಿಲ್ಲ. ಹಾಗಾಗಿ ಲಾಭವೂ ಇಲ್ಲದಾಗಿದೆ’ ಎಂದು ವ್ಯಾಪಾರಿ ಸುಬ್ಬಣ್ಣ ತಿಳಿಸಿದರು. ‘ಇದು ನಮ್ಮ ಸಂಪ್ರದಾಯ. ಓಣಂ ದೀಪಾವಳಿ ಹಬ್ಬದ ಮುನ್ಸೂಚನೆಯ ಹಬ್ಬವಾಗಿದ್ದು ಬಲಿ ಮಹಾರಾಜ ಬರುತ್ತಾನೆ ಎಂಬ ನಂಬಿಕೆಯೊಂದಿಗೆ ರಂಗೋಲಿಯನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ಹೂವಿನ ಬೆಲೆ ಹೆಚ್ಚಾದರೂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಕೆಲವೊಮ್ಮೆ ಮೈಸೂರು ಭಾಗದಿಂದ ಹೂವನ್ನು ತೆಗೆದುಕೊಂಡು ಹೋಗುತ್ತೇವೆ’ ಎನ್ನುತ್ತಾರೆ ಕೇರಳದ ವ್ಯಾಪಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT