ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ ಗಾಂಜಾ ವಿರುದ್ಧ ಕಾರ್ಯಾಚರಣೆ: ವ್ಯಕ್ತಿ ಬಂಧನ, 134 ಗಿಡ ವಶ

Last Updated 14 ಸೆಪ್ಟೆಂಬರ್ 2020, 7:29 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಗಾಂಜಾ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿರುವ ಪೊಲೀಸರು, ತಾಲ್ಲೂಕಿನ ಬೆಲವತ್ತ ಗ್ರಾಮದ ಜಮೀನೊಂದರಲ್ಲಿ 134 ಗಾಂಜಾ ಗಿಡ ಬೆಳೆಸಿರುವುದನ್ನು ಭಾನುವಾರ ಪತ್ತೆ ಹಚ್ಚಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಅಂದಾಜು ₹3 ಲಕ್ಷ ಮೌಲ್ಯದ 26.880 ಕೆ.ಜಿ ಮೌಲ್ಯದ ಗಾಂಜಾ ಸೊಪ್ಪು ವಶ ಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿಯ ಶನಿವಾರ ಮುಂಟಿ ಗ್ರಾಮದ ಜಡೇಗೌಡ ಅಲಿಯಾಸ್‌ ಮಾರಕುನ್ನ (40) ಬಂಧಿತ ಆರೋಪಿ. ಇನ್ನೊಬ್ಬ ಆರೋಪಿ ಬೆಲವತ್ತ ಗ್ರಾಮದ ಮಾದಯ್ಯ ಎಂಬುವವರು ತಲೆ ಮರೆಸಿಕೊಂಡಿದ್ದಾರೆ. ಬೆಲವತ್ತ ಗ್ರಾಮದ ಬಳಿಯ ಮೇಲ್ಮಾಳದ ಎಲ್ಲೆಯ ಸರ್ವೆ ನಂಬರ್‌ 312ರಲ್ಲಿ ಗಾಂಜಾ ಗಿಡಗಳನ್ನು ಇವರು ಬೆಳೆಸಿದ್ದರು.

‘ಆ ಜಮೀನು ಆರೋಪಿಗಳಿಗೆ ಸೇರಿದ್ದಲ್ಲ. ತಮಿಳುನಾಡಿನ ವ್ಯಕ್ತಿಯೊಬ್ಬರದ್ದು ಎಂದು ಹೇಳಲಾಗುತ್ತಿದೆ. ಕೃಷಿ ಚಟುವಟಿಕೆ ನಡೆಸದೇ ಜಮೀನನ್ನು ಹಾಗೆಯೇ ಬಿಡಲಾಗಿತ್ತು. ಕಾಡು ಗಿಡಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆಸಿದ್ದರು. ತಾನೇ ಬೆಳೆಸಿರುವುದಾಗಿ ಬಂಧಿತ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಾಚರಣೆ ಬಗ್ಗೆ ನೀಡಿದ ಅವರು, ‘ಶನಿವಾರ ನಮಗೆ ಗಾಂಜಾ ಬೆಳೆದಿರುವ ಬಗ್ಗೆ ಮಾಹಿತಿ ಸಿಕ್ಕಿತು. ಚಾಮರಾಜನಗರ ಗ್ರಾಮಾಂತರದ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ನಂಜಪ್ಪ ನೇತೃತ್ವದಲ್ಲಿ, ಚಾಮರಾಜನಗರದ ಪೂರ್ವ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಟಿ.ಎಂ.ತಾಜುದ್ದೀನ್‌ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ. ತಹಶೀಲ್ದಾರ್‌ ಚಿದಾನಂದ ಗುರುಸ್ವಾಮಿ ಅವರ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಜಮೀನಿನ ಮಾಲೀಕ ಯಾರು ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ನಾವು ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲಿ ಗೊತ್ತಾಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಗೃಹ ಸಚಿವರ ಆದೇಶದ ಅನುಸಾರ ಜಿಲ್ಲೆಯಲ್ಲಿ ಗಾಂಜಾ ವಿರುದ್ಧ ತೀವ್ರ ಕಾರ್ಯಾಚರಣೆ ಆರಂಭಿಸಲಾಗಿದೆ. ಹನೂರು ತಾಲ್ಲೂಕಿನ ರಾಮಾಪುರ, ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಗಾಂಜಾ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಬೆಂಗಳೂರು, ಮೈಸೂರು ಮುಂತಾದ ಕಡೆಗಳಿಗೆ ಪೂರೈಕೆಯಾಗುತ್ತಿದೆ ಎಂಬ ಮಾಹಿತಿಯೂ ಇದೆ. ಇಲ್ಲಿಂದ ಸರಬರಾಜು ಆಗುತ್ತಿರುವುದನ್ನು ತಡೆಯುವುದು ನಮ್ಮ ಗುರಿ’ ಎಂದು ಹೇಳಿದರು.

‘ಅರಣ್ಯ ಇಲಾಖೆಯ ಸಹಕಾರ ಪಡೆದು ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿ ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಈಗಾಗಲೇ ಬಿಆರ್‌ಟಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಮಲೆಮಹದೇಶ್ವರ ವನ್ಯಧಾಮದ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕಾಗಿದೆ’ ಎಂದು ದಿವ್ಯ ಸಾರಾ ಥಾಮಸ್‌ ಹೇಳಿದರು.

ಸೋಲಿಗ ಸಮುದಾಯದವರು ವಾಸವಿರುವ ಪ್ರದೇಶಗಳಲ್ಲಿ ಗಾಂಜಾ ಪ್ರಕರಣಗಳು ವರದಿಯಾಗುತ್ತಿರುವುದು ಹಾಗೂ ಮಾದಕ ದ್ರವ್ಯಗಳ ಚಟಕ್ಕೆ ಅವರು ಬಲಿಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್‌ಪಿ, ‘ಸೋಲಿಗ ಸಮುದಾಯದ ಮುಖಂಡರೊಂದಿಗೆ ಈಗಾಗಲೇ ಒಂದು ಬಾರಿ ಸಭೆ ನಡೆಸಿದ್ದೇವೆ. ಇದನ್ನು ತಡೆಯಲು ಅವರು ಉತ್ಸುಕರಾಗಿದ್ದಾರೆ. ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಲಹೆಗಳನ್ನೂ ನೀಡಿದ್ದಾರೆ. ಮತ್ತೊಮ್ಮೆ ಈ ಬಗ್ಗೆ ಚರ್ಚಿಸುತ್ತೇವೆ’ ಎಂದು ಹೇಳಿದರು.

ಭಾನುವಾರದ ಕಾರ್ಯಾಚರಣೆಯಲ್ಲಿ ಎಎಸ್‌ಐ ಸೀಗಯ್ಯ, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಚಂದ್ರು, ಜಿ.ಎನ್‌.ಪುಟ್ಟರಾಜು, ಡಿ.ಶಾಂತರಾಜು, ಮಹೇಶ್‌, ಮಹದೇವಪ್ಪ, ಬವಸಣ್ಣ, ಮುನಿಯಪ್ಪ, ಕಾನ್‌ಸ್ಟೆಬಲ್‌ಗಳಾದ ಎಸ್‌.ವೆಂಕಟೇಶ, ಚಂದ್ರಶೇಖರ್‌, ಸಂತೋಷ ಕುಮಾರ, ನಾಗೇಂದ್ರ ಅಶೋಕ, ಎ.ಎಸ್.ರವಿ, ಕಿಶೋರ, ಬಸವರಾಜು,ರಂಗೇಗೌಡ, ಭಾಷಾಸಾಬ್‌ ಮುಲ್ಲಾ, ಮಹದೇಹಸ್ವಾಮಿಮ ನಾಗರಾಜ ಭಾಗವಹಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ ಹದ್ದಣ್ಣವರ್‌, ಡಿವೈಎಸ್‌ಪಿ ಅನ್ಸರ್‌ ಅಲಿ ಹಾಗೂ ಸಿಬ್ಬಂದಿ ಇದ್ದರು.

ತಂಡಕ್ಕೆ ₹20 ಸಾವಿರ ವೈಯಕ್ತಿಕ ಬಹುಮಾನ

ಆರೋಪಿಯನ್ನು ಬಂಧಿಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ತಾಜುದ್ದೀನ್‌ ನೇತೃತ್ವದ ತಂಡಕ್ಕೆ ದಿವ್ಯ ಸಾರಾ ಥಾಮಸ್‌ ಅವರು ವೈಯಕ್ತಿಕವಾಗಿ ₹20 ಸಾವಿರ ನಗದು ಬಹುಮಾನ ನೀಡಿದರು.

‘ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿ ಗಾಂಜಾ ಪ್ರಕರಣಗಳನ್ನು ಪತ್ತೆ ಹಚ್ಚಿದ ಸಿಬ್ಬಂದಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದೆ. ಅದರಂತೆ ತಾಜುದ್ದೀನ್‌ ತಂಡ ಮೊದಲ ಕಾರ್ಯಾಚರಣೆ ನಡೆಸಿದೆ. ಅವರಿಗೆ ವೈಯಕ್ತಿಕವಾಗಿ ಬಹುಮಾನ ನೀಡುತ್ತೇನೆ. ಜೊತೆಗೆ ಇಲಾಖೆಯ ಮೂಲಕ ಬಹುಮಾನ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದರು.

ಮೂರು ದಿನಗಳ ಹಿಂದೆ, ಎರಡು ಕೆಜಿಗಳಷ್ಟು ಒಣ ಗಾಂಜಾ ಸಾಗಿಸುತ್ತಿದ್ದ ಪ್ರಕರಣವ‌ನ್ನು ಪತ್ತೆ ಹಚ್ಚಿದ್ದ ಚಾಮರಾಜನಗರದ ಸಿಇಎನ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಮೋಹಿತ್‌ ಸಹದೇವ್‌ ಹಾಗೂ ಅವರ ತಂಡಕ್ಕೆ ₹5,000 ನಗದು ಬಹುಮಾನವನ್ನೂ ಅವರು ಇದೇ ಸಂದರ್ಭದಲ್ಲಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT