ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಪ್ಪನ ಕ್ಷೇತ್ರದಲ್ಲಿ ಆದಾಯದ ಕೊರತೆ: 189 ಸಿಬ್ಬಂದಿ ತಾತ್ಕಾಲಿಕವಾಗಿ ಮನೆಗೆ

ಲಾಕ್‌ಡೌನ್‌: , ಪ್ರಾಧಿಕಾರದ ಕ್ರಮ
Last Updated 10 ಜೂನ್ 2021, 19:30 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹೊರಗುತ್ತಿಗೆ, ಸಂಭಾವನೆ ಹಾಗೂ ಕಾರ್ಯಾರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದ 189 ಸಿಬ್ಬಂದಿಯನ್ನು ಆದಾಯದ ಕೊರತೆಯ ಕಾರಣ ನೀಡಿತಾತ್ಕಾಲಿಕವಾಗಿ ಕೆಲಸದಿಂದ ತೆಗೆಯಲಾಗಿದೆ.

‘ಕೋವಿಡ್ ಕಾರಣದಿಂದಾಗಿ ಒಂದೂವರೆ ತಿಂಗಳಿನಿಂದ ಲಾಕ್‌ಡೌನ್ ಜಾರಿಗೊಳಿಸಿದ ಪರಿಣಾಮ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದಾಗಿ ದೇವಾಲಯಕ್ಕೆ ಆದಾಯ ಬರುತ್ತಿಲ್ಲ. ಹೀಗಾಗಿ ಇದೇ 4 ರಿಂದ ಈ ಸಿಬ್ಬಂದಿಯ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಪ್ರಾಧಿಕಾರ ಹೇಳಿದೆ.

‘ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ನಿಷೇಧ ಮಾಡಿದ ಬಳಿಕ ನಮಗೂ ಏನು ಕೆಲಸ ಇಲ್ಲ ಎಂದು ತಾತ್ಕಾಲಿಕವಾಗಿ ನಮ್ಮನ್ನು ಮನೆಗೆ ಕಳುಹಿಸಿದ್ದಾರೆ. ಒಂದು ವಾರವಷ್ಟೇ ಆಗಿದೆ. ಈಗಲೇ ಸಾಕಷ್ಟು ಸಮಸ್ಯೆಯಾಗಿದೆ. ಇನ್ನು ಅವರು ಯಾವಾಗ ಪುನಃ ನಮ್ಮನ್ನು ಕೆಲಸಕ್ಕೆ ಕರೆಯುತ್ತಾರೋ ಎಂಬುದೇ ಚಿಂತೆಯಾಗಿದೆ. ಇಲ್ಲಿ ಆಹಾರ ಪದಾರ್ಥಗಳನ್ನು ಖರೀದಿಸಲು ಹಣವಿಲ್ಲದಂತಾಗಿದೆ. ಆದ್ದರಿಂದ ಪ್ರಾಧಕಾರದಿಂದ ನಮಗೆ ಆಹಾರದ ಕಿಟ್ ವಿತರಿಸಿದರೆ ಅನುಕೂಲವಾಗಲಿದೆ’ ಎಂದು ಕೆಲಸ ಕಳೆದುಕೊಂಡ ಮಹಿಳೆಯೊಬ್ಬರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ಪ್ರಾಧಿಕಾರ ಕಳೆದ ವರ್ಷವೂ ಇದೇ ರೀತಿ ನಾಲ್ಕು ತಿಂಗಳ ಕಾಲ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಕೆಲಸದಿಂದ ತೆಗೆದಿತ್ತು. ದೇವಸ್ಥಾನ ಎಂದಿನಂತೆ ಕಾರ್ಯಾರಂಭ ಮಾಡಿದ ಬಳಿಕ ಮತ್ತೆ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು.

ಸಹಾಯ ಧನ ನೀಡುವ ಉದ್ದೇಶ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ಕೆಲಸ ಕಳೆದುಕೊಂಡಿರುವ ಸಿಬ್ಬಂದಿಯ ಜೀವನ ನಿರ್ವಹಣೆಗಾಗಿ ಧನ ಸಹಾಯ ನೀಡು ಯೋಜನೆಯನ್ನು ರೂಪಿಸಲಾಗುತ್ತಿದೆ. ಕಳೆದ ವರ್ಷವೂ ಸಿಬ್ಬಂದಿಗೆ ಪ್ರತಿ ತಿಂಗಳು ₹4,000 ಧನ ಸಹಾಯ ನೀಡಲಾಗಿತ್ತು. ಈ ವರ್ಷವೂ ಅದೇ ರೀತಿಯಲ್ಲಿ ಧನ ಸಹಾಯ ನೀಡುವ ಉದ್ದೇಶದಿಂದ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ದೊರೆಯುವ ವಿಶ್ವಾಸವೂ ಇದೆ. ಅನುಮತಿ ಸಿಗುತ್ತಿದ್ದಂತೆ ಸಿಬ್ಬಂದಿಗೆ ಧನಸಹಾಯ ನೀಡಲು ಕ್ರಮವಹಿಸಲಾಗುವುದು’ ಎಂದು ಹೇಳಿದರು.

26 ಬದಲಿ ಸಿಬ್ಬಂದಿ: ಕೋವಿಡ್ ಕರ್ತವ್ಯಕ್ಕಾಗಿ ಪ್ರಾಧಿಕಾರದ ವತಿಯಿಂದ 100 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅದರಲ್ಲಿ 74 ಮಂದಿ ಕರ್ತವ್ಯಕ್ಕೆ ಹಾಜರಾಗಿ 26 ಜನರು ಮೇಲಿಂದ ಮೇಲೆ ಗೈರಾಗುತ್ತಿದ್ದರುಕಳೆ. ಇದರಿಂದ ಅವರ ಬದಲಿಗೆ ಬೇರೆ 26 ಜನರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ, ಕೆಲವರು ಕೋವಿಡ್ ಕರ್ತವ್ಯದಲ್ಲಿದ್ದ 26 ಸಿಬ್ಬಂದಿಯನ್ನು ತೆಗೆದು ಹಾಕಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದುದು. ಕೋವಿಡ್ ಕರ್ತವ್ಯಕ್ಕೆ ಹಾಜರಾಗದೇ ಗೈರಾಗಿರುವವರು ಕಚೇರಿಗೆ ಬಂದು ಸೂಕ್ತ ಕಾರಣ ತಿಳಿಸಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ಕಾಯಂ ನೌಕರರಿಗೇ ಬೇಕು ₹60 ಲಕ್ಷ
‘ದೇವಾಲಯದ ಆದಾಯದಲ್ಲಿ ಶೇ 35 ರಷ್ಟುಹಣವನ್ನು ಸಿಬ್ಬಂದಿ ವೇತನಕ್ಕೆ ಬಳಸಿಕೊಳ್ಳಲು ಅವಕಾಶವಿದೆ. ಪ್ರಾಧಿಕಾರದಲ್ಲಿ 200 ಮಂದಿ ಕಾಯಂ ನೌಕಕರಿದ್ದಾರೆ. ಅವರೆಲ್ಲರ ವೇತನಕ್ಕಾಗಿ ಪ್ರತಿ ತಿಂಗಳು ₹60 ಲಕ್ಷ ಹಣ ಬೇಕು. ಎರಡು ತಿಂಗಳಿಂದ ದೇವಾಲಯಕ್ಕೆ ಆದಾಯವಿಲ್ಲ. ಬೇರೆ ಬೇರೆ ಯೋಜನೆಗಳಿಗೆ ಮೀಸಲಿಟ್ಟಿರುವ ಹಣದಲ್ಲಿ ಸಿಬ್ಬಂದಿಗೆ ವೇತನ ನೀಡಲಾಗುತ್ತಿದೆ. ದೇವಾಲಯವನ್ನು ಸಂಪೂರ್ಣವಾಗಿ ತೆರೆಯಲು ಸರ್ಕಾರ ಸೂಚನೆ ನೀಡಿದ ಆದಾಯ ಹೆಚ್ಚಾಗಲಿದೆ. ಅಂದಿನಿಂದ ಕೆಲಸದಿಂದ ತೆಗೆದಿರುವ ಸಿಬ್ಬಂದಿಯನ್ನು ನಿಯೋಜಿಸಗುವುದು’ ಎಂದು ಜಯವಿಭವಸ್ವಾಮಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT