ಬುಧವಾರ, ನವೆಂಬರ್ 25, 2020
19 °C

ಚಾಮರಾಜನಗರ: ಈರುಳ್ಳಿ ಕೊಂಚ ಅಗ್ಗ, ಹೂವಿಗೆ ಬೇಡಿಕೆ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮೂರ್ನಾಲ್ಕು ವಾರಗಳಿಂದ ಸತತವಾಗಿ ಏರುಮುಖವಾಗಿದ್ದ ಈರುಳ್ಳಿ ಧಾರಣೆ ಈ ವಾರ ಕೊಂಚ ಇಳಿಮುಖವಾಗಿದೆ. ಹಬ್ಬದ ತರುವಾಯ ಹೂವುಗಳಿಗೆ ಬೇಡಿಕೆ ಸಂಪೂರ್ಣವಾಗಿ ಕುಸಿದಿದ್ದು, ಕೇಳುವವರೇ ಇಲ್ಲದಂತಾಗಿದೆ. 

ಹಾಪ್‌ಕಾಮ್ಸ್‌ನಲ್ಲಿ ಈರುಳ್ಳಿ ಬೆಲೆ ಕೆಜಿಗೆ ₹10 ಕಡಿಮೆಯಾಗಿದೆ. ಕಳೆದವಾರ ₹90 ಇತ್ತು. ಈ ವಾರ ₹80ಕ್ಕೆ ಮಾರಾಟವಾಗುತ್ತಿದೆ. 

ನಾಲ್ಕೈದು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಆವಕವಾಗುತ್ತಿರುವುದರಿಂದ ಬೆಲೆ ಸ್ವಲ್ಪ ಕಡಿಮೆಯಾಗಿದೆ ಎಂದು ಹೇಳುತ್ತಾರೆ ಹಾಪ್‌ಕಾಮ್ಸ್‌ ವ್ಯಾಪಾರಿ ಮಧು. 

ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯಾತ್ಯಾಸವಾಗಿಲ್ಲ. ಟೊಮೆಟೊ (₹10), ಬೀನ್ಸ್‌ (₹30), ಕ್ಯಾರೆಟ್‌ (₹60), ಆಲೂಗಡ್ಡೆ (₹50) ದರ ಕಳೆದ ವಾರದಷ್ಟೇ ಇದೆ. 

ಹಣ್ಣುಗಳ ಬೆಲೆಯಲ್ಲೂ ಬದಲಾವಣೆಯಾಗಿಲ್ಲ. ಕಿತ್ತಳೆ ಹಣ್ಣು ಭಾರಿ ಪ್ರಮಾಣದಲ್ಲಿ ಆವಕವಾಗುತ್ತಿದ್ದು, ವ್ಯಾಪಾರಿಗಳು ವಾಹನಗಳು ಹಾಗೂ ತಳ್ಳುಗಾಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೆಜಿಗೆ ₹40ರಿಂದ ₹60ರವರೆಗೆ ದರ ಹೇಳುತ್ತಿದ್ದಾರೆ. 

ಮಾಂಸಗಳ ಧಾರಣೆಯಲ್ಲೂ ವ್ಯತ್ಯಾಸವಾಗಿಲ್ಲ. 

ಹೂವುಗಳ ದರ ಪಾತಾಳಕ್ಕೆ 

ಕಳೆದ ವಾರ ಆಯುಧ ಪೂಜೆ ಹಾಗೂ ವಿಜಯದಶಮಿ ಸಂದರ್ಭದಲ್ಲಿ ಗ್ರಾಹಕರ ಜೇಬು ಸುಟ್ಟಿದ್ದ ಹೂವುಗಳು ಈವಾರ ಬೇಡಿಕೆ ಕಳೆದುಕೊಂಡಿವೆ. ಇದರಿಂದಾಗಿ ಬೆಲೆ ಪಾತಾಳಕ್ಕೆ ಕುಸಿದೆ. 

ನಗರದ ಬಿಡಿಹೂವಿನ ಮಾರುಕಟ್ಟೆಯಲ್ಲಿ ಕಾಕಡಕ್ಕೆ ಕೆಜಿಗೆ ₹40 ಇದೆ. ಚೆಂಡು ಹೂವಿಗೆ ₹10, ಸುಗಂಧರಾಜಕ್ಕೆ ₹40 ಇದೆ. ಕನಕಾಂಬರ ಕೆಜಿಗೆ ₹400ಕ್ಕೆ ಮಾರಾಟವಾಗುತ್ತಿದೆ. 

‘ಹಬ್ಬದ ಸಂದರ್ಭದಲ್ಲಿ ಇದ್ದ ಬೆಲೆಗೆ ಹೋಲಿಸಿದರೆ ಈಗಿನದ್ದು ಏನೇನೂ ಅಲ್ಲ. ದೀಪಾವಳಿ ಬರುವವರೆಗೆ ಹೂವುಗಳಿಗೆ ಬೇಡಿಕೆ ಇರುವುದಿಲ್ಲ. ಬೆಲೆ ಕಡಿಮೆ ಇರುತ್ತದೆ. ಇನ್ನು 10ರಿಂದ 12 ದಿನಗಳ ಕಾಲ ಇದೇ ಬೆಲೆ ಮುಂದುವರಿಯಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು