ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಆನ್‌ಲೈನ್‌ ತರಗತಿಗೆ ಖಾಸಗಿ ಶಾಲೆಗಳ ಸಿದ್ಧತೆ

ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್ ಸಮಸ್ಯೆ, ಇನ್ನೂ ನಿರ್ಧರಿಸದ ಕೆಲವು ಶಾಲೆಗಳು
Last Updated 11 ಜುಲೈ 2020, 19:31 IST
ಅಕ್ಷರ ಗಾತ್ರ

ಚಾಮರಾಜನಗರ: ಕೆಲವು ಷರತ್ತುಗಳಿಗೆ ಒಳಪಟ್ಟು ಆನ್‌ಲೈನ್‌ ತರಗತಿ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಜಿಲ್ಲೆಯ ನಗರ ಪ್ರದೇಶಗಳಲ್ಲಿರುವ ಕೆಲವು ಶಾಲೆಗಳು ಮಕ್ಕಳಿಗೆ ಆನ್‌ಲೈನ್‌ ತರಗತಿ ಆರಂಭಿಸಲು ಸಿದ್ಧತೆ ನಡೆಸಿವೆ.

ಇನ್ನೂ ಕೆಲವು ಖಾಸಗಿ ಶಾಲೆಗಳು, ಅದರಲ್ಲೂ ಗ್ರಾಮೀಣ ಭಾಗದಲ್ಲಿರುವ ಶಾಲೆಗಳು ಸದ್ಯಕ್ಕೆ ಆನ್‌ಲೈನ್‌ ತರಗತಿಗಳನ್ನು ಆರಂಭಿಸದೇ ಇರಲು ನಿರ್ಧರಿಸಿವೆ. ಪೋಷಕರಲ್ಲಿ ಸ್ಮಾರ್ಟ್‌ಫೋನ್‌ ಇಲ್ಲದೇ ಇರುವುದು ಹಾಗೂ ಗ್ರಾಮೀಣ ಭಾಗಗಳಲ್ಲಿ ಇಂಟರ್‌ನೆಟ್‌ ಸಮಸ್ಯೆ ಆನ್‌ಲೈನ್‌ ತರಗತಿಗಳಿಗೆ ತೊಡಕಾಗಿದೆ.

ಆನ್‌ಲೈನ್‌ ತರಗತಿಗಳು ಆರಂಭವಾಗಲಿರುವುದರಿಂದ, ಶಾಲಾ ಶುಲ್ಕವನ್ನು ಪಾವತಿಸುವಂತೆ ಆಡಳಿತ ಮಂಡಳಿಗಳು ಪೋಷಕರಿಗೆ ಕರೆ ಮಾಡುತ್ತಿವೆ.

ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮದ ಕೆಲವು ಶಾಲೆಗಳು, ಈಗಾಗಲೇ ರೆಕಾರ್ಡ್‌ ಮಾಡಿರುವ ಪಾಠಗಳನ್ನು ಮಕ್ಕಳಿಗೆ ಆನ್‌ಲೈನ್‌ ಮೂಲಕ ಕಳುಹಿಸುತ್ತಿವೆ.

ನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆ, ಸೇಂಟ್‌ ಫ್ರಾನ್ಸಿಸ್‌ ಶಿಕ್ಷಣ ಸಂಸ್ಥೆ ಸೋಮವಾರದಿಂದ ಆನ್‌ಲೈನ್‌ನಿಂದ ತರಗತಿಗಳನ್ನು ಆರಂಭಿಸಲು ನಿರ್ಧರಿಸಿವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಾಸುದೇವರಾವ್‌ ಅವರು, ‘ಸೋಮವಾರದಿಂದ ಆನ್‌ಲೈನ್‌ ತರಗತಿಗಳನ್ನು ನಾವು ಆರಂಭಿಸಲಿದ್ದೇವೆ. ನಾಲ್ಕೈದು ದಿನಗಳಿಂದ ಬೋಧಕರಿಗೆ ಆನ್‌ಲೈನ್‌ ಪಾಠದ ಬಗ್ಗೆ ತರಬೇತಿ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಹಂತ ಹಂತವಾಗಿ ತರಗತಿಗಳನ್ನು ಆರಂಭಿಸಲು ನಿರ್ಧಾರ ಮಾಡಿದ್ದೇವೆ. ಆರಂಭದಲ್ಲಿ ಒಂಬತ್ತು ಮತ್ತು 10ನೇ ತರಗತಿಯವರಿಗೆ ಶುರು ಮಾಡುತ್ತೇವೆ. ಒಂದು ವಾರದ ನಂತರ ಆರು, ಏಳು ಮತ್ತು ಎಂಟನೇ ತರಗತಿಯವರಿಗೆ ಆರಂಭಿಸುತ್ತೇವೆ. ಮತ್ತೂ ಒಂದು ವಾರ ಬಿಟ್ಟು ಉಳಿದ ತರಗತಿಗಳಿಗೆ ಮಾಡುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

ಸರ್ಕಾರ ರೂಪಿಸಿರುವ ನಿಯಮಗಳ ಅನ್ವಯವೇ ತರಗತಿಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಕೊಳ್ಳೇಗಾಲದಲ್ಲೂ ಕೆಲವು ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿಗಳ ಆರಂಭಕ್ಕೆ ಚಿಂತನೆ ನಡೆಸಿವೆ. ಗ್ರಾಮೀಣ ಪ್ರದೇಶದಿಂದ ಬರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ ಶಾಲೆಗಳು ಈ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ.

‘ಮುಂದಿನ ವಾರದಿಂದ ಆನ್‌ಲೈನ್‌ ತರಗತಿಗಳನ್ನು ಆರಂಭಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಇದಕ್ಕಾಗಿ ಪೋಷಕರು ಹಾಗೂ ಮಕ್ಕಳ ಸಲಹೆ ಪಡೆಯುತ್ತೇವೆ’ ಎಂದು ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದ ಮುಖ್ಯ ಶಿಕ್ಷಕಿ ಗೀತಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪಟ್ಟಣ, ಗ್ರಾಮೀಣ ಭಾಗದಲ್ಲಿ ಸದ್ಯಕ್ಕಿಲ್ಲ

ಹನೂರು, ಯಳಂದೂರು, ಗುಂಡ್ಲುಪೇಟೆ ತಾಲ್ಲೂಕಿನ ಶಾಲೆಗಳು ಇನ್ನೂ ಈ ಬಗ್ಗೆ ನಿರ್ಧರಿಸಿಲ್ಲ.

ಗ್ರಾಮೀಣ ಪ್ರದೇಶದ ಮಕ್ಕಳ ಪೋಷಕರಲ್ಲಿ ಸ್ಮಾರ್ಟ್‌ಫೋನ್‌ ಇಲ್ಲ, ಕಂಪ್ಯೂಟರ್‌ ಸೌಲಭ್ಯವಿಲ್ಲ. ಇದ್ದರೂ ಇಂಟರ್‌ನೆಟ್‌ ಸಮಸ್ಯೆ ಇದೆ. ಶಾಲೆ ಅಧಿಕೃತವಾಗಿ ಆರಂಭವಾಗದೇ ಇರುವುದರಿಂದ ಪೋಷಕರು ಶುಲ್ಕ ಕೂಡ ಪಾವತಿಸುತ್ತಿಲ್ಲ. ಇದರಿಂದಾಗಿ ಶಿಕ್ಷಕರಿಗೆ ವೇತನ ಕೊಡುವುದಕ್ಕೆ ಕಷ್ಟವಾಗುತ್ತದೆ ಎಂದು ಶಾಲೆಗಳ ಆಡಳಿತ ಮಂಡಳಿಗಳು ಹೇಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT