ಮಂಗಳವಾರ, ಜೂನ್ 28, 2022
27 °C
ಸಾವಯವ ಕೃಷಿಯಲ್ಲಿ ಗೆದ್ದ ಕೆಸ್ತೂರು ಲೋಕೇಶ್, ವಾಟ್ಸ್‌ಆ್ಯಪ್‌ ಮೂಲಕ ಮಾಹಿತಿ ಹಂಚಿಕೆ

ಯಳಂದೂರು: ಲಾಕ್‌ಡೌನ್‌ ನಡುವೆ ಮಾರುಕಟ್ಟೆ ಸೃಷ್ಟಿಸಿಕೊಂಡ ರೈತ

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಅಪರೂಪದ ದಶೇರಿ, ಸವಿ ರುಚಿಯ ಮಲ್ಲಿಕಾ ಮತ್ತು ಕೇಸರ್ ಮಾವು ತಳಿಗಳನ್ನು ನೋಡುತ್ತಿದ್ದರೆ ಬಾಯಲ್ಲಿ ನೀರೂರುತ್ತದೆ. ಅತಿಯಾದ ನೀರು, ಕೀಟನಾಶಕ ಮತ್ತು ರಸಗೊಬ್ಬರ ಬಳಕೆ ಮಾಡದೆ ಇವೆಲ್ಲ ಫಲ ಕಚ್ಚಿವೆ. ಸಸಿ ನೆಟ್ಟ ಮೂರನೇ ವರ್ಷಕ್ಕೆ ಕೊಯ್ಲಿಗೆ ಬರುವ ತೋಟಗಾರಿಕಾ ಬೆಳೆಗಳಿಗೆ ಕೋವಿಡ್ ನಡುವೆ ಬಹು ಬೇಡಿಕೆ ಇದೆ ಎಂಬುದನ್ನು ತಾಲ್ಲೂಕಿನ ಕೆಸ್ತೂರು ಗ್ರಾಮದ ರೈತ ಲೋಕೇಶ್ ನಿರೂಪಿಸಿದ್ದಾರೆ.

ಅವರ ತೋಟದಲ್ಲಿ ಮೂಸಂಬಿ, ಬಾರ್ಡೋಲಿ ನೇರಳೆ, ಬಟರ್ ಫ್ರೂಟ್, ಹಲಸು, ಬಾಳೆಗಳು ಇವೆ. ಲಾಕ್‌ಡೌನ್‌ ಅವರ ಕೃಷಿ ಚಟುವಟಿಕೆಗಳಿಗೆ, ಬೆಳೆಗಳ ಮಾರಾಟಕ್ಕೆ ಅಡ್ಡಿಯಾಗಿಲ್ಲ. ಗ್ರಾಹಕರು ನೇರವಾಗಿ ಅವರ ತೋಟಕ್ಕೆ ಭೇಟಿ ನೀಡಿ ಅವರಿಷ್ಟದ ಹಣ್ಣು ಕಟಾವು ಮಾಡಿಕೊಳ್ಳಲು ಇವರು ಅವಕಾಶ ಕಲ್ಪಿಸಿದ್ದಾರೆ. ಹಾಗಾಗಿ ಲಾಕ್‌ಡೌನ್‌  ಅವಧಿಯಲ್ಲೂ ಇವರ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಯಾಗಿದೆ.

ರೈತ ಲೋಕೇಶ್ ಐಟಿಐ ಕಲಿತಿದ್ದಾರೆ. ತಮ್ಮ 8 ಎಕೆರೆ ಜಮೀನಿನಲ್ಲಿ ವೈವಿಧ್ಯಮಯ ತಳಿಯ ಬೆಳೆಗಳನ್ನು ಪೋಷಿಸಿದ್ದಾರೆ. ಹಲವಾರು ಹಣ್ಣಿನ ತಳಿಗಳನ್ನು ಆಂಧ್ರದ ತಾಡಪಲ್ಲಿ, ಪುತ್ತೂರು, ತಿರುಪತಿಗಳಿಂದ ಸಂಗ್ರಹಿಸಿ ನಾಟಿ ಮಾಡಿದ್ದಾರೆ. ಇವು ಈಗ ಕೆಸ್ತೂರು ಮತ್ತು ಆಲಹಳ್ಳಿ ಜಮೀನುಗಳಲ್ಲಿ ಫಲ ಬಿಟ್ಟು ನಳನಳಿಸುತ್ತಿವೆ.

'ವರ್ಷ ಪೂರ್ತಿ ನಗರಗಳಲ್ಲಿ ಮಾವು ಸಿಗುತ್ತದೆ. ಇಂತಹ ಫಸಲಿಗೆ ರಾಸಾಯನಿಕ ಸಿಂಪಡಿಸಿ ಬೇಗ ಮಾಗಿಸಿ, ಬಿಕರಿ ಮಾಡುತ್ತಾರೆ. ಆದರೆ, ಋತುಮಾನಕ್ಕೆ ಅನುಗುಣವಾಗಿ ಅರಳಲು ಬಿಟ್ಟರೆ ಹಣ್ಣುಗಳು ಮೇ-ಜುಲೈ ತನಕ ಗುಣಮಟ್ಟದ ಹಣ್ಣು ಸಿಗುತ್ತವೆ. ಬಲಿತ ಕಾಯಿಗಳನ್ನು ಕೊಯ್ದು, ಬಿಸಿ ನೀರಿನಿಂದ ಶುಚಿಗೊಳಿಸಿ ಗ್ರಾಹಕರಿಗೆ ಪೂರೈಸಿದರೆ, ಮನೆಯಲ್ಲಿ ಮೂರು ದಿನಗಳಲ್ಲಿ ಹಣ್ಣು ಸುವಾಸನೆ ಬೀರುತ್ತದೆ' ಎನ್ನುತ್ತಾರೆ ಲೋಕೇಶ್.

ಲಾಕ್‌ಡೌನ್‌ ಅವಧಿಯಲ್ಲಿ ಮೊದಲ ಫಸಲು ಬಂದಿದೆ. ಈ ಸಮಯ ಮಾರುಕಟ್ಟೆ ಸಮಸ್ಯೆ ಎದುರಾಯಿತು. ವಿಷಮುಕ್ತ ಚಾಮರಾಜನಗರ ಮತ್ತು ಸ್ನೇಹಿತರ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಹಣ್ಣಿನ ವೈವಿಧ್ಯತೆ ಬಗ್ಗೆ ಮಾಹಿತಿ ನೀಡಿದೆ. ರಾಜ್ಯದ ವಿವಿಧ ಭಾಗಗಳಿಂದ ಪಾರ್ಸೆಲ್ ಕಳಿಸುವಂತೆ ಗ್ರಾಹಕರು ಬೇಡಿಕೆ ಸಲ್ಲಿಸಿದ್ದಾರೆ. ಆದರೆ, ಕೋವಿಡ್ ಕರ್ಫ್ಯೂ ಇರುವುದರಿಂದ ಪ್ಯಾಕಿಂಗ್ ಮತ್ತಿತರ ಸಮಸ್ಯೆಗಳು ಎದುರಾದವು. ಹಾಗಾಗಿ, ಮೈಸೂರು ಆಲನಹಳ್ಳಿಯ ಮೇಘನಫಾರಂ ಬಳಿ 4 ಪ್ರಭೇದಗಳ ಮಾವು, ಮೂಸಂಬಿ ಹಣ್ಣು ಸಿಗುವಂತೆ ವ್ಯವಸ್ಥೆ ಮಾಡಿದೆ. ಕೆಸ್ತೂರಿನ ಮನೆಯಿಂದಲೂ ಕೊಳ್ಳುತ್ತಿದ್ದಾರೆ. ಪ್ರತಿ ಕೆಜಿಗೆ ತಳಿಗೆ ಅನುಗುಣವಾಗಿ ಮಾವಿಗೆ ₹80 ರಿಂದ ₹120ರ ತನಕ ಮಾರಾಟ ಆಗುತ್ತಿದೆ ಎಂದರು.

ಕ್ಯಾಂಟೀನ್‌ನಿಂದ ಕೃಷಿಗೆ: ಲೋಕೇಶ್ ಅವರು ಮೈಸೂರಿನಲ್ಲಿ ಸಾಫ್ಟ್‌ವೇರ್‌ ಕಂಪನಿಯಲ್ಲಿ ಸಹಾಯಕರಾಗಿ ದುಡಿಯುತ್ತಿದ್ದರು. ಈ ಸಮಯದಲ್ಲಿ ಸಾವಿರಾರು ಜನರು ಗುಣಮಟ್ಟದ ಹಣ್ಣುಗಳನ್ನು ಗ್ರಾಮೀಣ ಪ್ರದೇಶಗಳಿಂದ ತರಿಸಿಕೊಳ್ಳುತ್ತಿದ್ದರು. ಇದನ್ನು ಮನಗಂಡ ಲೋಕೇಶ್ ಹಣ್ಣಿನ ಗಿಡಗಳನ್ನು ಕೊಂಡು, ಸ್ಥಳೀಯ ಹವಾಮಾನಕ್ಕೆ ಒಗ್ಗಿಸಿದರು. ಉತ್ತಮ ಫಸಲು ಪಡೆಯಲು ಸಾವಯವ ಬೇಸಾಯ ಕೈಗೊಂಡರು.

‘ರಾಜ್ಯದ ಹಲವು ಭಾಗಗಳಿಂದ ನಮ್ಮ ಉತ್ಪನ್ನಕ್ಕೆ ಮಾರುಕಟ್ಟೆ ಸಿಕ್ಕಿದೆ. ಕೆಲವರು ತೋಟಕ್ಕೆ ಭೇಟಿ ನೀಡಿ ಕಟಾವು ಮಾಡಿಕೊಂಡು ತೆರಳುತ್ತಾರೆ. ಇದರಿಂದ ಕೋವಿಡ್ ಸಮಯದಲ್ಲೂ ಮಾವು ಮತ್ತು ಮೂಸಂಬಿ ಮಾರಾಟಕ್ಕೆ ಸಮಸ್ಯೆ ಎದುರಾಗಿಲ್ಲ’ ಎಂದು ಲೋಕೇಶ್ ಅವರ ತಂದೆ ಬಸವಣ್ಣ ಹೇಳುತ್ತಾರೆ.

‘ತಿಂಗಳ ಆದಾಯ ಗಳಿಸಿ’
ಲೋಕೇಶ್‌ ಅವರ ಎಂಟು ಎಕರೆಯಲ್ಲಿ 500 ಮಾವು, 150 ಸೀಬೆ, 100 ಬೆಣ್ಣೆಹಣ್ಣು, 50 ಲಿಂಬೆ, 750 ಬಾಳೆ ಮತ್ತಿತರ ಗಿಡಗಳಿವೆ.

‘ಬೇಸಾಯಗಾರರು ಪ್ರತಿ ತಿಂಗಳು ಮತ್ತು ವಾರ ವಾರ ವರಮಾನ ಕೈಸೇರುವಂತೆ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಮೇ-ಜೂನ್ ನಡುವೆ ಇಮಾಂ ಪಸಂದ್, ಮಲ್ಲಿಕಾ, ಕೇಸರ್, ದಶೇರಿ ಮಾವು ಕೊಯ್ಲಿಗೆ ಬರುತ್ತದೆ. ನಂತರ ಬಟರ್ ಫ್ರೂಟ್, ಸೀಬೆ,
ಲಿಂಬೆ ಮತ್ತು ನೇರಳೆ ಕಾಲ ಆರಂಭ ಆಗುತ್ತದೆ. ಸರ್ವ ಕಾಲದಲ್ಲೂ ಬೆಳೆಯಬಹುದಾದ ಏಲಕ್ಕಿ ಬಾಳೆ ಮನೆಮಂದಿಯ ಖರ್ಚು ನೀಗುತ್ತದೆ. ಇಳುವರಿ ವೃದ್ಧಿಸಲು ಭೂಮಿಗೆ ಸಾವಯವ ರಸಸಾರ, ಕೊಟ್ಟಿಗೆ ಗೊಬ್ಬರ, ಹಸಿರು ಹೊದಿಕೆ ಮಾಡುತ್ತ ಇದ್ದರೆ ಸಾಕು. ನೀರಿನ ಕೊರತೆ ಇರುವುದರಿಂದ ಹನಿ ನೀರಾವರಿ ವ್ಯವಸ್ಥೆ ಮೂಲಕ ಅಗತ್ಯ ಇರುವ ಗಿಡಗಳಿಗೆ ನೀರು ಒದಗಿಸಲಾಗುತ್ತದೆ’ ಎಂದು ತಮ್ಮ ಅನುಭವ ಹಂಚಿಕೊಳ್ಳೂತ್ತಾರೆ ಕೆಸ್ತೂರು ಲೋಕೇಶ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು