ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಭತ್ತ ಬಿತ್ತನೆಗೆ ಸಿಕ್ಕಿದ‌ ವೇಗ

ಸತತ ಮಳೆ, ಕೃಷಿ ಚಟುವಟಿಕೆ ಬಿರುಸು, ಬಿತ್ತನೆ ಗುರಿ ಸಾಧನೆಗೆ ಬೇಕಿದ ಸಮಯ
Last Updated 15 ಆಗಸ್ಟ್ 2021, 0:55 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಗಡಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಉತ್ತಮ ಮಳೆ ಬೀಳುತ್ತಿರುವ ರೀತಿಯಲ್ಲೇ ನಾಲ್ಕು ದಿನಗಳಿಂದ ತಾಲ್ಲೂಕಿನಲ್ಲೂ ಚೆನ್ನಾಗಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಬಿರುಸಾಗಿದೆ.

ಮುಂಗಾರು ಆರಂಭದಲ್ಲಿ ಕಡಿಮೆ ಮಳೆ ಹಾಗೂ ಕೋವಿಡ್‌ ಲಾಕ್‌ಡೌನ್‌ನಿಂದ ಕಂಗಟ್ಟಿದ್ದ ರೈತರು ಜೂನ್‌ ಕೊನೆಯ ವಾರದ ನಂತರ ಸುರಿಯುತ್ತಿರುವ ಮಳೆಯಿಂದ ಸಂತಸಗೊಂಡಿದ್ದು, ವಿವಿಧ ಬೆಳೆಗಳ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಲ್ಲೂಕಿನ ವ್ಯಾಪ್ತಿಗೆ ಕಸಬಾ ಹಾಗೂ ಪಾಳ್ಯ ಹೋಬಳಿ ಬರುತ್ತದೆ. ಕಬಿನಿ ನೀರು ಪೂರೈಕಯಾಗುವುದರಿಂದ ಇಲ್ಲಿ ಭತ್ತ ಬೆಳೆಗೆ ರೈತರು ಹೆಚ್ಚು ನೀಡುತ್ತಿದ್ದು, ಎರಡು ವಾರದಿಂದೀಚೆಗೆ ಭತ್ತ ಬಿತ್ತನೆ ವೇಗ ಪಡೆದಿದೆ.

ಈ ಬಾರಿಯ ಮುಂಗಾರು ಅವಧಿಯಲ್ಲಿ ಒಟ್ಟು 14,255 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಹೊಂದಲಾಗಿದ್ದು, ಈ ಪೈಕಿ 6,200 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿಯನ್ನು ಹಾಕಿಕೊಳ್ಳಲಾಗಿದೆ. 755 ಹೆಕ್ಟೇರ್‌ ವ್ಯಾಪ್ತಿಯಲ್ಲಿ ಬಿತ್ತನೆ ಪೂರ್ಣಗೊಂಡಿದೆ.

ಬೇರೆ ಕಡೆಗಳಿಗೆ ಹೋಲಿಸಿದರೆ ತಾಲ್ಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಇದುವರೆಗೆ 5,451 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಶೇಕಡವಾರು ಲೆಕ್ಕಾಚಾರದಲ್ಲಿ ಶೇ 37.53ರಷ್ಟು ಸಾಧನೆಯಾಗಿದೆ.

ಮೇ–ಜೂನ್‌ ತಿಂಗಳಲ್ಲಿ ಕಡಿಮೆ ಮಳೆಯಾಗಿದ್ದರಿಂದ ಹಾಗೂ ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಆರಂಭದಲ್ಲಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು ಎಂದು ಹೇಳುತ್ತಾರೆ ಅಧಿಕಾರಿಗಳು. ಈಗ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಬಿತ್ತನೆ ಪ್ರಮಾಣ ಕೆಲವೇ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎಂಬ ಲೆಕ್ಕಾಚಾರ ಅವರದ್ದು.ಭತ್ತ, ರಾಗಿ, ಮುಸುಕಿನ ಜೋಳ, ಉದ್ದು ಮುಂತಾದ ಬೆಳೆಗಳ ಬಿತ್ತನೆ ಆರಂಭವಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದ್ರಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಸಂಚಾರ ಕಷ್ಟವಾಗಿತ್ತು. ಕೃಷಿ ಚಟುವಟಿಕೆಗಳಿಗೆ ಏಕಾದ ಸಾಮಗ್ರಿಗಳನ್ನು ತರುವುದಕ್ಕೆ ಕೂಡ ಓಡಾಡಲು ಆಗುತ್ತಿರಲಿಲ್ಲ. ನಮ್ಮ ಜಮೀನಿನಲ್ಲಿ ಪಂಪ್‌ ಸೆಟ್‌ ವೈರ್‌ ಸುಟ್ಟು ಹೋಗಿತ್ತು.‌ಪರಿಕರಗಳು ಸಿಗದೇ ಇದ್ದುದರಿಂದ ಜಮೀನಿನಲ್ಲಿ ಹಾಕಿದ್ದ ಬೆಳೆಗಳು ಒಣಗಿತ್ತು. ಈಗ ಮತ್ತೆ ಕೋವಿಡ್‌ ಮೂರನೆ ಅಲೆ ಬಗ್ಗೆ ಮಾತನಾಡುತ್ತಿದ್ದಾರೆ. ಹಾಗಾಗಿ, ಕೃಷಿ ಮಾಡುವುದಕ್ಕೆ ಭಯವಾಗುತ್ತಿದೆ’ ಎಂದು ರೈತ ನಾಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಒಟ್ಟು ಮಳೆ ಕಡಿಮೆ; ಮುಂಗಾರಿನಲ್ಲಿ ಹಚ್ಚು: ತಾಲ್ಲೂಕಿನಲ್ಲಿ ಈ ಬಾರಿ ಬಿದ್ದ ಮಳೆಯನ್ನು ಗಮನಿಸುವುದಾದರೆ, ಜನವರಿ 1ರಿಂದ ಆಗಸ್ಟ್‌ 14ರವರೆಗಿನ ಅವಧಿಯಲ್ಲಿ ಶೇ 19ರಷ್ಟು ಕಡಿಮೆ ಮಳೆಯಾಗಿದೆ. ಸಾಮಾನ್ಯವಾಗಿ ಈ ಏಳೂವರೆ ತಿಂಗಳ ಅವಧಿಯಲ್ಲಿ 36.74 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ 29.73 ಸೆಂ.ಮೀ ಮಳೆ ಬಿದ್ದಿದೆ. ಆದರೆ, ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೂನ್‌ ಕೊನೆಗೆ ಹಾಗೂ ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿರುವುದು ಇದಕ್ಕೆ ಕಾರಣ.

ಜೂನ್‌ 1ರಿಂದ ಆ.14ರವರೆಗಿನ ನೈರುತ್ಯ ಮುಂಗಾರು ಅವಧಿಯಲ್ಲಿ ವಾಡಿಕೆಯಲ್ಲಿ 16.72 ಸೆ.ಮೀ ಮಳೆಯಾಗುತ್ತದೆ. ಈ ವರ್ಷ 19.19 ಸೆಂ.ಮೀ ಮಳೆಯಾಗಿದೆ. ಶೇ 15ರಷ್ಟು ಹೆಚ್ಚು ಮಳೆಯಾಗಿದೆ. ಆಗಸ್ಟ್‌ ತಿಂಗಳಲ್ಲಿ ಇದುವರೆಗೆ ವಾಡಿಕೆಗಿಂತ ಶೇ 23ರಷ್ಟು ಕಡಿಮೆ ಮಳೆಯಾಗಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಕೊರತೆ ನೀಗಲಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಭರ್ತಿಯಾಗದ ಕೆರೆಗಳು

ಉತ್ತಮ ಮಳೆಯಾದರೂ ತಾಲ್ಲೂಕು ವ್ಯಾಪ್ತಿಯ ಕೆರೆಗಳು ಇನ್ನೂ ಭರ್ತಿಯಾಗಿಲ್ಲ. ನಾಲೆ ನೀರು ಹಾಗೂ ಮಳೆಯನ್ನು ಅವಲಂಬಿಸಿದವರು ಬಿತ್ತನೆ ಮಾಡಿದ್ದಾರೆ. ಮಳೆಯ ನಂತರ ಕೆರೆ ನೀರನ್ನೇ ನಂಬಿದವರು ಬೇಸಾಯ ಮಾಡಲು ತಡಮಾಡುತ್ತಿದ್ದಾರೆ. ಈ ಕಾರಣಕ್ಕೂ ಬಿತ್ತನೆ ಕುಂಠಿತವಾಗಿದೆ ಎಂದು ಹೇಳುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT