ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಗೂರು: ಜನರಿಗೆ ವ್ಯಾಘ್ರನ ಭಯ

Published 20 ಡಿಸೆಂಬರ್ 2023, 6:20 IST
Last Updated 20 ಡಿಸೆಂಬರ್ 2023, 6:20 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಹೊರ ಬಂದಿರುವ ಹುಲಿಯೊಂದು ತಾಲ್ಲೂಕಿನ ಬೇಗೂರು ಭಾಗದಲ್ಲಿ ಆಗಾಗ ಕಾಣಿಸಿಕೊಂಡು ಸಾರ್ವಜನಿಕರು ಹಾಗೂ ರೈತರಲ್ಲಿ ಭಯ ಸೃಷ್ಟಿಸಿದೆ.

ವಾರದ ಹಿಂದೆ ಬೇಗೂರು ಹೋಬಳಿಯ ಕಲ್ಲಹಳ್ಳಿ ಗ್ರಾಮದಿಂದ ಸಂಪಿಗೆಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿ ಹುಲಿ ಕಾಣಿಸಿಕೊಂಡಿತ್ತು. ಇದನ್ನು ವಾಹನ ಸವಾರೊಬ್ಬರು ವಿಡಿಯೊ ಮಾಡಿದ್ದರು.  ಹುಲಿ ಕಾಣಿಸಿಕೊಂಡಾಗಿನಿಂದ ರೈತರು ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಲು ಮತ್ತು ಜಾನುವಾರುಗಳನ್ನು ಮೇಯಲು ಬೀಡಲು ಹೆದರುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ  ಮನೆ ಸೇರಿಕೊಳ್ಳಬೇಕಾದ ಪರಿಸ್ಥಿತಿ  ಎದುರಾಗಿದೆ.

ಮೈಸೂರು, ನಂಜನಗೂಡು ಕಾರ್ಖಾನೆಗಳಿಗೆ ಕೆಲಸಕ್ಕೆ ಹೋಗುವವರು ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಕೆಲಸ ಮುಗಿಸಿ ಮನೆಗೆ ಬರಲು ಹೆದರುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಕಾಣಿಸಿಕೊಳ್ಳುವ ಹುಲಿ,  ಬೆಳಿಗ್ಗೆ ಇಲಾಖೆಯ ಸಿಬ್ಬಂದಿ ಸೆರೆಗಾಗಿ ಬೋನು ಇಟ್ಟು ಕಾರ್ಯಾಚರಣೆ ಮಾಡಿದರೆ ಪತ್ತೆಯಾಗುತ್ತಿಲ್ಲ. ಇಟ್ಟಿರುವ ಬೋನಿಗೂ ಬೀಳುತ್ತಿಲ್ಲ. ಇದು ರೈತರಲ್ಲಿ ಇನ್ನಷ್ಟು ಭಯ ಮೂಡಿಸಿದೆ. 

ಸಂಪಿಗೆಪುರ, ಮೂಡಗೂರು, ಕಬ್ಬಹಳ್ಳಿ, ಗರಗನಹಳ್ಳಿ ಭಾಗದಲ್ಲಿ ಹುಲಿ ಕಾಣಿಸಿಕೊಂಡಿದೆ. ಕಲ್ಲಹಳ್ಳಿ ಗ್ರಾಮದಲ್ಲಿ ಎರಡು ಜಾನುವಾರುಗಳ ಮೇಲೆ ದಾಳಿ ಮಾಡಿಕೊಂದಿತ್ತು. ಈ ಸಂದರ್ಭದಲ್ಲಿ ಬೋನು ಇಟ್ಟು ಕ್ಯಾಮೆರಾ ಅಳವಡಿಸಿ ಪತ್ತೆ ಕಾರ್ಯಾಚರಣೆ ನಡೆಸಲಾ‌ಗಿತ್ತು. ಆಗ ಸಿಗದೇ ಇದ್ದುದರಿಂದ ವ್ಯಾಘ್ರ ಕಾಡಿಗೆ ಹೋಗಿದೆ ಎಂದು ಅರಣ್ಯ ಇಲಾಖೆಯವರು ಸುಮ್ಮನಾಗಿದ್ದರು.  

ಸೆರೆ ಹಿಡಿಯಲು ಒತ್ತಾಯ: ಸ್ಥಳೀಯರು, ರೈತರು ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಹುಲಿ ಸೆರೆಯಾಗದೆ ಜನರಲ್ಲಿರುವ ಭಯ ಹೋಗದು ಎಂಬುದು ಅವರ ಹೇಳಿಕೆ. 

‘ಹುಲಿ ಆಗಾಗ ಕಾಣಿಸಿಕೊಂಡು ಭಯ ಉಂಟು ಮಾಡಿದೆ. ಅರಣ್ಯ ಇಲಾಖೆಯು ಹುಲಿಯನ್ನು ಪತ್ತೆ ಹಚ್ಚಿ ಶೀಘ್ರ ಸೆರೆಹಿಡಿಯಬೇಕು. ಇಲಾಖೆಯವರು ಒಂದೆರಡು ದಿನ ಕಾರ್ಯಾಚರಣೆ ಮಾಡಿ ಹೋಗುತ್ತಾರೆ. ಇದು ಸಾಕಾಗುವುದಿಲ್ಲ. ಮನಸ್ಸಿನಲ್ಲಿ ಇನ್ನೂ ಭಯ ಇದೆ’ ಎಂದು ರಾಘವಾಪುರದ ದೇವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 

ಸೆರೆಗೆ ನಿರಂತರ ಪ್ರಯತ್ನ: ಎಸಿಎಫ್‌

ಈ ಬಗ್ಗೆ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ‘ಕುಂದುಕೆರೆ ವಲಯದಿಂದ ಹುಲಿ ಹೊರ ಬಂದಿದ್ದು ಪಾಳು ಬಿದ್ದಿರುವ ಜಮೀನಿನಲ್ಲಿ ಬೀಡು ಬಿಟ್ಟಿದೆ. ಅಲ್ಲಲ್ಲಿ ಜಾನುವಾರುಗಳನ್ನು ಕೊಂದು ಮರೆಯಾಗುತ್ತಿದೆ. ಹುಲಿಯ ಪತ್ತೆಗೆ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ನಮ್ಮ ಕಣ್ಣಿಗೆ ಬೀಳುತ್ತಿಲ್ಲ’ ಎಂದರು. ‘ತೆರಕಣಾಂಬಿ ಬಾಗದಿಂದ ಬೇಗೂರುವರೆಗೆ ಜಮೀನುಗಳ ಮಾಲೀಕರು ನೂರಾರು ಎಕರೆ ಕೃಷಿ ಭೂಮಿ ಪಾಳು ಬಿಟ್ಟಿದ್ದಾರೆ. ಇದರಿಂದಾಗಿ ಕಳೆ ಗಿಡಗಳು ಬೆಳೆದು ಕಾಡಿನಂತಾಗಿದೆ. ಕಾಡಿನಲ್ಲಿ ಬೇಟೆಯಾಡಲು ಶಕ್ತಿ ಇರದ ಪ್ರಾಣಿಗಳು ತನ್ನ ಸರಹದ್ದಿನ ಪ್ರದೇಶದಿಂದ ಹೊರ ಬಿದ್ದ ಸಂದರ್ಭದಲ್ಲಿ ಇಂತಹ ಜಾಗಗಳನ್ನು ಹುಡುಕಿಕೊಳ್ಳುತ್ತವೆ. ಕಾಡಂಚಿನಲ್ಲಿ ಸಿಗುವ ಜಾನುವಾರುಗಳನ್ನು ಬೇಟೆಯಾಡುತ್ತದೆ. ಆದ್ದರಿಂದ ಗ್ರಾಮಸ್ಥರು ಮತ್ತು ಪಂಚಾಯತಿಗಳು ಭೂಮಿಯನ್ನು ಪಾಳು ಬೀಳದಂತೆ ಎಚ್ಚರಿಕೆ ವಹಿಸಬೇಕು. ಪಾಳು ಬಿದ್ದರುವ ಜಮೀನುಗಳನ್ನು ಮಾಲೀಕರಿಗೆ ತಿಳಿಸಿ ಗಿಡಗಳನ್ನು ತೆರೆವು ಮಾಡಿಸಬೇಕು’ ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT