ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ರಸ್ತೆಯಲ್ಲಿ ಗುಂಡಿ, ಕಿರುಸೇತುವೆ ಎತ್ತರ

ಹನೂರು ಸವಾರರಿಗೆ ಕಷ್ಟ, ಜೀವ ಕೈಯಲ್ಲಿ ಹಿಡಿದು ಸಂಚಾರ
Published 6 ಸೆಪ್ಟೆಂಬರ್ 2023, 6:38 IST
Last Updated 6 ಸೆಪ್ಟೆಂಬರ್ 2023, 6:38 IST
ಅಕ್ಷರ ಗಾತ್ರ

ಬಿ. ಬಸವರಾಜು

ಹನೂರು: ಪಟ್ಟಣದಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆ ಗುಂಡಿಮಯವಾಗಿದ್ದು, ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವಭಯದಲ್ಲೇ ಹೋಗಬೇಕಿದೆ.

ಪಟ್ಟಣದಿಂದ  ಕಣಿವೆ ಆಂಜನೇಯ ದೇವಾಲಯದವರೆಗೆ ಎಲ್ಲೆಂದರಲ್ಲಿ ಉಂಟಾಗಿರುವ ಗುಂಡಿಗಳು ವಾಹನ ಸವಾರರ ಬಲಿಗಾಗಿ ಕಾದು ಕುಳಿತಿರುವಂತಿವೆ. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ವಾಹನ ಸವಾರರ ಪರದಾಟ ಹೇಳತೀರದು.

ಮಳೆ ಬಂದರೆ ತಟ್ಟೆಹಳ್ಳ ಸೇತುವೆ ಮೇಲೆ ನೀರು ನಿಲ್ಲುತ್ತದೆ. ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಗುಂಡಿಯ ಆಳ ತಿಳಿಯದೇ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಪ್ರಕರಣಗಳು  ಸಾಕಷ್ಟಿವೆ. ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಮೊದಲು ಸೇತುವೆ ಮೇಲೆ ನಿಲ್ಲುತ್ತಿದ್ದ ನೀರನ್ನು ಬೇರೆಡೆ ಬಿಡಲಾಗುತ್ತಿತ್ತು. ಈಗ ಆ ವ್ಯವಸ್ಥೆಯೂ ಇಲ್ಲ ಎಂದು ಆರೋಪಿಸುತ್ತಾರೆ ಸ್ಥಳೀಯರು.

ಪಟ್ಟಣದ ಅನ್ನಪೂರ್ಣ ಹೋಟೆಲ್‌ ಬಳಿಯಿಂದ ಆರಂಭವಾದರೆ ಕಣಿವೆ ಆಂಜನೇಯ ದೇವಸ್ಥಾನದವರೆಗೆ ಗುಂಡಿಗಳದ್ದೇ ಕಾರುಬಾರು. ರಸ್ತೆಯೆಲ್ಲಿರುವ ಜಲ್ಲಿಕಲ್ಲುಗಳು ಮೇಲೆದ್ದು ಭಾರಿ ಗಾತ್ರದ ಗುಂಡಿಗಳು ಉಂಟಾಗಿವೆ. ಮಳೆ ಬಂದ ಸಂದರ್ಭದಲ್ಲಿ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಮತ್ತಷ್ಟು ಅದ್ವಾನವಾಗುತ್ತಿದೆ. ಬೆಟ್ಟದಲ್ಲಿ ಅಮಾವಾಸ್ಯೆ ಹಾಗೂ ವಿಶೇಷ ದಿನಗಳಲ್ಲಿ ಈ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಸವಾರರು ಸಂಚರಿಸುತ್ತಾರೆ. ರಸ್ತೆಯ ಅವ್ಯವಸ್ಥೆಗೆ ಸವಾರರು ಬೇಸತ್ತಿದ್ದಾರೆ.

ಅವೈಜ್ಞಾನಿಕ ಸೇತುವೆಗಳು: ಇದೇ ರಸ್ತೆಯಲ್ಲಿ ನಿರ್ಮಿಸಿರುವ ಕಿರುಸೇತುವೆಗಳು ವಾಹನ ಸವಾರರಿಗೆ ಯಮಸ್ವರೂಪಿಗಳಾಗಿವೆ. ಈ ರಸ್ತೆಯಲ್ಲಿ ಏಳು ಕಿರು ಸೇತುವೆಗಳನ್ನು ನಿರ್ಮಿಸಲಾಗಿದೆ. ಎಲ್ಲ  ಸೇತುವೆಗಳು ರಸ್ತೆಯ ಮಟ್ಟಕ್ಕಿಂತ ಎತ್ತರದಲ್ಲಿವೆ. ಸೇತುವೆ ಎತ್ತರದಲ್ಲಿರುವುದು ತಿಳಿಯದೇ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಆ.25ರಂದು ಬೆಟ್ಟಕ್ಕೆ ತೆರಳುತ್ತಿದ್ದ ಬೆಂಗಳೂರಿನ ಆಕಾಶ್ ಎಂಬ ಯುವಕ ಸೇತುವೆ ಎತ್ತರದಲ್ಲಿರುವುದನ್ನು ಗಮನಿಸದೆ ವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆದ ಸ್ಥಳದಲ್ಲೇ ಮೃತಪಟ್ಟಿದ್ದರು. ಇದಾದ ಬಳಿಕವೂ ಹಲವು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.

‘ಸೂಚನಾ ಫಲಕ ಅಳವಡಿಸಿ’ ‘ಹನೂರಿನಿಂದ ಕಣಿವೆ ಆಂಜನೇಯ ದೇವಸ್ಥಾನದವರೆಗೆ ನಿರ್ಮಿಸಿರುವ ಸೇತುವೆಗಳ ಬಳಿ ಸೂಚನೆ ಫಲಕಗಳನ್ನು ಅಳವಡಿಸಿದರೆ ವಾಹನಸವಾರರಿಗೆ ಅನುಕೂಲವಾಗಲಿದೆ. ಆದರೆ ಅವೈಜ್ಞಾನಿಕ ಸೇತುವೆಗಳಿಂದ ಇಷ್ಟೆಲ್ಲ ಘಟನೆಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಸೇತುವೆ ಬಳಿ ಸೂಚನಾ ಫಲಕಗಳನ್ನು ಅಳವಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂಬುದು ವಾಹನ ಸವಾರರ ಒತ್ತಾಯ. ‘ಹನೂರಿಂದ ಬೆಟ್ಟಕ್ಕೆ ರಸ್ತೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಮೊದಲು ಸೇತುವೆ ನಿರ್ಮಿಸಿ ಬಳಿಕ ರಸ್ತೆ ಕಾಮಗಾರಿ ಆರಂಭಿಸಲಾಗುವುದು. ಹನೂರಿನಿಂದ ಕಣಿವೆ ಆಂಜನೇಯ ದೇವಾಲಯದವರೆಗೆ 4.70 ಕಿ.ಮೀ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಲಾಗುವುದು. ಅಲ್ಲಿಯವರೆಗೆ ಕಿರು ಸೇತುವೆಗಳ ಬಳಿ ತಾತ್ಕಾಲಿಕವಾಗಿ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಮಹದೇಶ್ವರ ಬೆಟ್ಟ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಚಿನ್ನಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT