ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಸುತ್ತಾಡಿದರೆ ದೂಳಿನ ಮಜ್ಜನ ಖಾತ್ರಿ

ವಿವಿಧ ಕಾಮಗಾರಿಗಳಿಂದ ಹೆಚ್ಚುತ್ತಿದೆ ದೂಳು, ಜನರಿಗೆ ಕಿರಿಕಿರಿ
Last Updated 22 ಫೆಬ್ರುವರಿ 2021, 13:58 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಗಡಿ ಜಿಲ್ಲೆಯ ವಾಣಿ‌ಜ್ಯ ನಗರಿ ಕೊಳ್ಳೇಗಾಲದಲ್ಲಿ ಈಗ ಎಲ್ಲಿ ನೋಡಿದರಲ್ಲಿ ದೂಳು. ನಗರದಲ್ಲಿ ಒಂದು ಬಾರಿ ಸುತ್ತಾಡಿದರೆ ದೂಳಿನ ಸ್ನಾನ ಖಾತ್ರಿ.

ಬೇಸಿಗೆ ಹಾಗೂ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಂದಾಗಿ ನಗರದಲ್ಲಿ ದೂಳಿನ ಸಮಸ್ಯೆ ಹೆಚ್ಚಾಗಿದ್ದು, ಜನರು ನಿತ್ಯವೂ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಕೆಲವು ಕಾಮಗಾರಿಗಳು ವೇಗವಾಗಿ ನಡೆದರೆ, ಇನ್ನೂ ಕೆಲವು ನಿಧಾನವಾಗಿ ನಡೆಯುತ್ತಿವೆ. ಆಮೆಗತಿಯಲ್ಲಿ ನಡೆಯುತ್ತಿರುವ ಯೋಜನೆಗಳಿಂದ ಸಮಸ್ಯೆ ಹೆಚ್ಚಾಗಿದೆ.

ದಿನದ 24 ಗಂಟೆಗಳ ಕಾಲ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಕಾಮಗಾರಿ, ವಿವಿಧ ಬಡಾವಣೆಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ಒಳಚರಂಡಿ, ನಗರೋತ್ಥಾನ 3ನೇ ಹಂತದ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳು ಕೊಳ್ಳೇಗಾಲದಲ್ಲಿ ನಡೆಯುತ್ತಿವೆ. ಕೆಲಸ ನಡೆಯುತ್ತಿರುವ ಕಡೆಗಳಲ್ಲಿ ದೂಳಿನ ಸಮಸ್ಯೆ ಹೆಚ್ಚಾಗಿದೆ.

ದೂಳು ಮಯ: ‘ನಗರದ 31 ವಾರ್ಡ್‍ಗಳಲ್ಲಿಯೂ ಕುಡಿಯುವ ನೀರು ಯೋಜನೆಯ ಕಾಮಗಾರಿ ನಡೆಯುತ್ತಿದೆ. ಇದರಿಂದ ನಗರದಲ್ಲಿ ದೂಳು ಸೃಷ್ಟಿಯಾಗಿದೆ. ಪ್ರತಿನಿತ್ಯ ದೂಳು ಕುಡಿದು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಪೈಪ್‌ ಅಳವಡಿಸಲು ರಸ್ತೆಯನ್ನು ಅಗೆದು ಮಣ್ಣು ಹೊರಗೆ ಹಾಕಿದ್ದಾರೆ. ಬಿಸಿಲು ಹಾಗೂ ಗಾಳಿಗೆ ಎಲ್ಲ ಕಡೆ ದೂಳು ನಿರ್ಮಾಣವಾಗಿದೆ. ಇದರಿಂದ ನಮಗೆ ಓಡಾಡಲು ಕಷ್ಟವಾಗುತ್ತಿದೆ’ ಎಂದು ನಗರದ ನಿವಾಸಿ ಪ್ರಕಾಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅನಾರೋಗ್ಯ ತಪ್ಪಿದ್ದಲ್ಲ: ‘ನಗರದಲ್ಲಿ ಈಗ ದೂಳು ಸೇವಿಸಿಕೊಂಡೇ ಬದುಕಬೇಕಾಗಿದೆ. ದೂಳಿನಿಂದಾಗಿ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುವ ಶಾಲಾ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಬೇಗ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಬಸ್ತೀಪುರದ ಸ್ವಾಮಿನಂಜಪ್ಪ ಅವರು ಹೇಳಿದರು.

‘ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಲು ಅಧಿಕಾರಿಗಳು ಗಮನಹರಿಸಬೇಕು. ತಾತ್ಕಾಲಿಕವಾಗಿ ದೂಳು ಏಳದಂತೆ ನಗರಸಭೆ ಕ್ರಮ ಕೈಗೊಳ್ಳಬೇಕು. ಇದರಿಂದ ಜನರಿಗೆ ಅನುಕೂಲವಾಗಲಿದೆ’ ಎಂದು ಶಿಕ್ಷಕ ಹರೀಶ್‌ ಅವರು ಹೇಳಿದರು.

ದೂಳಿನಿಂದಾಗಿ ‌ಅಲರ್ಜಿ ಸೇರಿದಂತೆ ಉಸಿರಾಟಕ್ಕೆ ಸಂಬಂಧಿಸಿದ ಅನಾರೋಗ್ಯ ಕಾಡಬಹುದು. ಮೂಗಿಗೆ ಬಟ್ಟೆಕಟ್ಟಿಕೊಳ್ಳುವುದು ಅಥವಾ ಮಾಸ್ಕ್‌ ಧರಿಸುವುದರ ಮೂಲಕ ದೂಳಿನಿಂದ ರಕ್ಷಣೆ ಪಡೆದುಕೊಳ್ಳಬಹುದು ಎಂದು ಹೇಳುತ್ತಾರೆ ವೈದ್ಯರು.

ನೀರು ಹಾಕಲು ಕ್ರಮ:ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷೆ ಗಂಗಮ್ಮ ಅವರು, ‘ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ, ಪ್ರತಿ ದಿನ ಬೆಳಿಗ್ಗೆ ಕೆಲಸ ಆರಂಭಿಸುವುದಕ್ಕೂ ಮೊದಲು ರಸ್ತೆಗೆ ನೀರನ್ನು ಹಾಕಿ ದೂಳು ಏಳದಂತೆ ಮಾಡಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT